ಹಾವೇರಿ: ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರು ಕಬ್ಬು ಸಾಗಾಣಿಕೆ ಮಾಡಿದ ರೈತರಿಗೆ ಬೆಂಬಲ ಬೆಲೆ ದರ ನಿಗದಿಪಡಿಸದೇ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಜೊತೆಗೆ ಕಳೆದ ಬಾರಿ ರೈತರ ಬಾಕಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು, ಕಾರ್ಮಿಕರು ಶುಕ್ರವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.
ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿರುವ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಹೊರ ರಾಜ್ಯದ ಜನರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳಿಯರಿಗೆ ಕೆಲಸ ಕೊಡಬೇಕೆಂದು ನಿಯಮವಿದ್ದರೂ ಸ್ಥಳಿಯ ಜನರನ್ನು ಕೈಬಿಟ್ಟು ಹೊರ ರಾಜ್ಯದ ಜನರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಗೂರ ಸಕ್ಕರೆ ಕಾರ್ಖಾನೆಯನ್ನು ಜಿಎಂ ಶುಗರ್ನವರಿಗೆ ಗುತ್ತಿಗೆ ನೀಡಿದ್ದು ಅವರು ಒಪ್ಪಂದದಂತೆ ನಡೆಸದುಕೊಳ್ಳದೇ ಕಾರ್ಮಿಕರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಪ್ರಸಕ್ತ ಸಾಲಿನ ಕಬ್ಬಿಗೆ ಅಂತಿಮ ದರ ನಿಗದಿಪಡಿಸಬೇಕು. ಕೆಲಸದಿಂದ ತೆಗೆದುಹಾಕಿದ್ದ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಹೊರ ರಾಜ್ಯದಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸಪ್ಪ ನೆಗಳೂರ, ಶಂಕರಗೌಡ ಸುಂಕದ, ಮಂಜಪ್ಪ ಪುಟ್ಟಣ್ಣನವರ, ಲೋಹಿತಪ್ಪ ಹೊಂಕಳದ, ಮಲ್ಲೇಶಪ್ಪ ಹೋತನಹಳ್ಳಿ ಇನ್ನಿತರರು ಪ್ರತಿಭಟನೆಯಲ್ಲಿದ್ದರು.