ಹಾವೇರಿ: ನಗರ ಕಸ ವಿಲೇವಾರಿ ಮಾಡುವ ವಾಹನ ಚಾಲನೆ ಮಾಡಲು ಚಾಲಕರಿಲ್ಲದ್ದರಿಂದ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ ರಮೇಶ ಮಂಜೋಜಿ ಸ್ವತಃ ತಾವೇ ಕಸ ತುಂಬಿದ ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದಿದ್ದಾರೆ.
ಅವರು ಗುರುವಾರ ನಗರದ ಮುನ್ಸಿಪಲ್ ಎದುರಿನ ರಸ್ತೆಯಿಂದ ಕೆಎಲ್‌ಇವರೆಗೆ ಹಾಗೂ ಪಿ.ಬಿ. ರಸ್ತೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ಪೌರ ಕಾರ್ಮಿಕರಿಂದ ಟ್ರ್ಯಾಕ್ಟರ್ ಗೆ ತುಂಬಿಸಿಕೊಂಡು ಗೌರಾಪುರದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಯ್ದು ಖಾಲಿ ಮಾಡಿದರು. ತನ್ಮೂಲಕ ಅವರು ನಗರದ ಸ್ವತ್ಛತೆ ಬಗ್ಗೆ ತಮ್ಮ ಕಾಳಜಿ ತೋರ್ಪಡಿಸಿದರು.
ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಲ್ಲಿ ಕೆಲವರು ತುರ್ತು ಸಂದರ್ಭದಲ್ಲಿ ಕಸ ತುಂಬುವ ವಾಹನಗಳ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ಅವರೆಲ್ಲ ನೇಮಕಾತಿಗೆ ಸಂಬಂಧಿಸಿದ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಜೂ. 1 ರಿಂದಲೇ ಕೆಲಸ ಬಿಟ್ಟು ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಜನರಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ ಎಂಬ ಮನೋಭಾವ ಬಾರದಿರಲಿ ಎಂಬ ಕಾರಣಕ್ಕಾಗಿ ರಮೇಶ ಮುಂಜೋಜಿ ಸ್ವತಃ ಕಸ ತುಂಬುವ ಟ್ರ್ಯಾಕ್ಟರ್ ಚಾಲನೆ ಮಾಡಿದರು.
ಕಸದ ವಾಹನ ಚಾಲನೆ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು ಕೆಲಸಕ್ಕೆ ಬರುತ್ತಿಲ್ಲ. ಪ್ರತಿಭಟನೆ ಆರಂಭಿಸಿ 10 ದಿನಗಳಾಗಿದ್ದು ನಗರದಲ್ಲಿ ಕಸ ಎಲ್ಲೆಂದರಲ್ಲಿ ಬಿದ್ದಿದೆ. ಪ್ರಮುಖ ಪ್ರದೇಶದಲ್ಲಿ ಬಿದ್ದಿರುವ ಒಂದಿಷ್ಟು ಕಸವನ್ನಾದರೂ ಸಾಗಿಸಲು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದರು. ಆದ್ದರಿಂದ ನಾನೇ ಇಂದು ಟ್ರ್ಯಾಕ್ಟರ್ ಚಾಲನೆ ಮಾಡಿ ನಗರದ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿದೆ. –
ರಮೇಶ ಮುಂಜೋಜಿ,ಪ್ರಭಾರ ಆರೋಗ್ಯ ನಿರೀಕ್ಷಕರು.