ಹಾವೇರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಂಘಗಳ ಅಭಿವೃದ್ಧಿಗೆ ಈಗಾಗಲೇ ಹಲವು ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯವಾಗಿದೆ. ಜಿಲ್ಲಾ ಪಂಚಾಯಿತಿ ಜೊತೆಗೂ ಕೈಜೋಡಿಸುವ ಮೂಲಕ
ಯೋಜನೆಯ ಸೌಲಭ್ಯವನ್ನು ಎಲ್ಲರಿಗೂ ತಲುಪಿಸೋಣ ಎಂದು ಜಿಪಂ ಸಂಜೀವಿನಿ-ಎನ್‌ಆರ್‌ಎಲ್ ಯೋಜನಾ ನಿರ್ದೇಶಕ ಎಸ್.ಜಿ. ಕೊರವರ ಹೇಳಿದರು.
ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ಹಾವೇರಿ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಸಂಜೀವಿನಿ-ಎನ್‌ಆರ್ ಎಲ್‌ಎಂಗೆ ಸಂಬಂಧಿಸಿದಂತೆ ಲೋಕೋಸ್ ಮೊಬೈಲ್ ಅಪ್ಲಿಕೇಶನಲ್ಲಿ ಎಸ್‌ಕೆಡಿಆರ್ ಡಿಪಿ ಸಂಘಗಳ ಮಾಹಿತಿ ದಾಖಲಿಸುವ ಬಗ್ಗೆ ಜಿಲ್ಲೆಯ 8 ತಾಲೂಕುಗಳ ಮೇಲ್ವಿಚಾರಕರ ಶ್ರೇಣಿಯ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆ ಯಾಗಿದ್ದು, ಗ್ರಾಮೀಣ ಮಹಿಳೆಯರನ್ನು ಸೇರಿಸಿ ಜೀವನೋಪಾಯ ಸಂವರ್ಧನೆಗೆ ಅನುಷ್ಠಾನ ಗೊಳಿಸಲಾದ ಉತ್ಪಾದಕ ಗುಂಪುಗಳ ರಚನೆ ಹಾಗೂ ಮೌಲ್ಯವರ್ಧನೆಗೆ ಮಹಿಳಾ ಸ್ವಸಹಾಯ ಸಂಘಗಳನ್ನು ರಾಷ್ಟ್ರೀಯ ಜೀವನೋಪಾಯ ಯೋಜನೆಯಡಿ ತರುವುದರೊಂದಿಗೆ ಸಂಘದ ಸದಸ್ಯರನ್ನು ಮಾನಸಿಕ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ನಿಟ್ಟಿನಲ್ಲಿ ಈಗಾಗಲೇ ಹಲವು ರೀತಿಯ ರ್ಯಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಲ್ಲಿ ಅತೀ ಹೆಚ್ಚು ಸ್ವ ಸಹಾಯ ಸಂಘಗಳನ್ನು ಸೇರ್ಪಡೆ ಮಾಡುವ ಮೂಲಕ ಗ್ರಾಮೀಣ ಮಹಿಳೆಯರಿಗೆ ಎನ್‌ಆರ್‌ಎಲ್ ಎಂ ಸೌಲಭ್ಯ ತಲುಪಿಸುವ ಕಾರ್ಯ ಮಾಡೋಣ ಎಂದು ಕರೆ ನೀಡಿದರು.
ಲೋಕೋಸ್ ಅಪ್ಲಿಕೇಶನ್ ಆ್ಯಪ್ ಬಳಕೆಯ ಕುರಿತು ಜಿಲ್ಲಾ ಪಂಚಾಯತಿ ಸಂಜೀವಿನಿ ಎನ್‌ಆರ್‌ಎಲ್ ಎಂ ಕಾರ್ಯಕ್ರಮದ ತಾಂತ್ರಿಕ ವಿಭಾಗದ ಪ್ರಬಂಧಕ ರಮೇಶ ದಾಸರ್ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಬಾರ್ಕಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲೆಯ ಎಲ್ಲಾ ತಾಲೂಕಿನ ಯೋಜನಾಧಿಕಾರಿಗಳು ಹಾಗೂ ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ಸಂಯೋಜಕರು, ಕ್ಲಸ್ಟರ್ ಮೇಲ್ವಿಚಾರಕರು ಇತರರು ಪಾಲ್ಗೊಂಡಿದ್ದರು.
ಜಿಲ್ಲಾ ಯೋಜನಾಧಿಕಾರಿ ನಾರಾಯಣ ಸ್ವಾಗತಿಸಿ, ಎನ್‌ಆರ್‌ಎಲ್ ಎಂ ಸಮನ್ವಯಾ ಧಿಕಾರಿ ಕೃಷ್ಣಮೂರ್ತಿ ಎನ್. ನಿರೂಪಿಸಿ, ಜಿಲ್ಲಾ ಆಡಿಟ್ ಪ್ರಬಂಧಕ ಮುರುಗೇಶ ವಂದಿಸಿದರು.