Advertisement

ಹಾವೇರಿ: ಸ್ಕ್ಯಾನಿಂಗ್‌ ವಿಭಾಗದ ಬಳಿ ಕ್ಯಾಮೆರಾ ಅಳವಡಿಸಿ

04:28 PM Feb 10, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗಳ ಸ್ಕ್ಯಾನಿಂಗ್‌ ವಿಭಾಗದ ಬಳಿ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಎಚ್‌.ಎಸ್‌. ರಾಘವೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಶುಕ್ರವಾರ ಜರುಗಿದ ಪಿಸಿ ಮತ್ತು ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಂಭತ್ತು ಸರ್ಕಾರಿ ಹಾಗೂ 72 ಖಾಸಗಿ ಒಳಗೊಂಡಂತೆ 81 ಸ್ಕ್ಯಾನಿಂಗ್‌ ಸೆಂಟರ್‌ಗಳಿದ್ದು, ನಿಯಮಾನುಸಾರ ಪ್ರತಿ ತಿಂಗಳು ಸ್ಕ್ಯಾನಿಂಗ್‌ ವರದಿ ನೀಡದ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದರು.

ಸ್ಕ್ಯಾನ್‌ ಸೆಂಟರ್‌ಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿ ಹಾಗೂ ಕಾರ್ಯ ನಿರ್ವಹಿಸುವ ಸಮಯವನ್ನು ಸೂಚನಾ ಫಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜಿಲ್ಲಾದ್ಯಂತ ಕಾರ್ಯನಿರ್ವಹಿಸುವ ಸ್ಕ್ಯಾನ್‌ ಸೆಂಟರ್‌ಗಳಲ್ಲಿ ಪ್ರಸವ ಪೂರ್ವ ಲಿಂಗಪತ್ತೆ ಬಗ್ಗೆ ತೀವ್ರ ನಿಗಾವಹಿಸಬೇಕು. ಸ್ಕ್ಯಾನಿಂಗ್‌ ಸೆಂಟರ್‌ಗಳು ಹಾಗೂ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು.

ಸ್ಕ್ಯಾನ್‌ ಸೆಂಟರ್‌ಗಳಿಗೆ ಆಗಮಿಸುವ ಗರ್ಭಿಣಿ ಹಾಗೂ ಕುಟುಂಬಸ್ಥರು ಒಂದು ವೇಳೆ ಭ್ರೂಣಪತ್ತೆಗೆ ಒತ್ತಾಯಿಸಿದರೆ ವೈದ್ಯರು ಅಂಥವರಿಗೆ ಲಿಂಗಾನುಪಾತದ ಬಗ್ಗೆ ತಿಳಿವಳಿಕೆ ನೀಡಬೇಕು ಹಾಗೂ ಭ್ರೂಣ ಪತ್ತೆಗೆ ಇರುವ ದಂಡ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು.

Advertisement

ಇಂತಹ ಪ್ರಕರಣಗಳ ಮೇಲೆ ಸೂಕ್ಷ್ಮವಾಗಿ ನಿಗಾವಹಿಸಬೇಕು. ಭ್ರೂಣ ಪತ್ತೆ ನಿಖರ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ದಾಖಲೆಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರೆ 50 ಸಾವಿರ ರೂ. ನೀಡಲಾಗುವುದು ಹಾಗೂ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

ಒಬ್ಬರೇ ವೈದ್ಯರು ಎರಡು ಸ್ಥಳಗಳಲ್ಲಿ ಸೇವೆ ನೀಡುತ್ತಿದ್ದರೆ ಅವರು ಯಾವ ಸ್ಥಳದಲ್ಲಿ, ಎಷ್ಟು ಸಮಯ ಸಿಗುತ್ತಾರೆ ಎಂದು ಸಮಯ ನಮೂದಿಸುವುದು ಕಡ್ಡಾಯವಾಗಿದೆ. ಒಬ್ಬ ವೈದ್ಯರು ಎರಡು ಕಡೆಗಳಲ್ಲಿ ಮಾತ್ರ ಸೇವೆ ನೀಡಲು ಅವಕಾಶವಿದೆ. ನರ್ಸಿಂಗ್‌ ಹೋಂಗಳ ಸ್ಥಳ ಬದಲಾವಣೆ ಅರ್ಜಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.

ಆರೋಗ್ಯ ಇಲಾಖೆಯ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್‌ ಸೆಂಟರ್‌ ಗಳ ಮಾಹಿತಿ, ಆನ್‌ಲೈನ್‌ದಲ್ಲಿ ಎಫ್‌-ಫಾರ್ಮ್ ನಮೂದಿಸದೇ ಇರುವ ಸಂಸ್ಥೆಗಳು, ಹೊಸ ನೋಂದಣಿ ಹಾಗೂ ನವೀಕರಣ ಅರ್ಜಿಗಳ ಮಾಹಿತಿ ನೀಡಿದರು ಹಾಗೂ ಸ್ಕ್ಯಾನಿಂಗ್‌ ಸೆಂಟರ್‌ಗಳ ನೋಂದಣಿ, ನವೀಕರಣಕ್ಕಾಗಿ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯಡಿ ಡಿಸೆಂಬರ್‌-2023ರವರೆಗೆ 25.91 ಲಕ್ಷ ರೂ. ಸಂಗ್ರಹವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಅರ್ಜಿ ಪರಿಶೀಲನೆ: ಸಭೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯಡಿ ಹೊಸ ನೋಂದಣಿ, ನವೀಕರಣಕ್ಕಾಗಿ ಸ್ವೀಕೃತವಾಗಿರುವ ಅರ್ಜಿ ಪರಿಶೀಲಿಸಲಾಯಿತು. ಸಭೆಯಲ್ಲಿ ಪಿಸಿ ಮತ್ತು ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರಾದ ಕಾನೂನು ತಜ್ಞ ಎಂ.ವಿ. ಕುಂಠೆ, ಮಕ್ಕಳ ತಜ್ಞ ಡಾ| ವಿಲಾಸಗೌಡ ಹಿರೇಗೌಡರ, ರೇಡಿಯಾಲಜಿಸ್ಟ್‌ ಡಾ| ಸಿ.ಎಂ. ಮಲ್ಲಿಕಾರ್ಜುನ, ಡಾ| ಚಿನ್ಮಯ ಕುಲಕರ್ಣಿ, ಡಾ| ಅರುಣಕುಮಾರ ಮಲ್ಲಾಡದ, ಹಿರಿಯ ಸ್ತ್ರೀರೋಗ ಪ್ರಸೂತಿ ತಜ್ಞರಾದ ಡಾ| ತ್ರಿವೇಣಿ ಹೆಗ್ಗೇರಿ, ಇಡಾರಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಪರಿಮಳಾ ಜೈನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next