Advertisement

ಜನಪದ ಸಂಸ್ಕೃತಿ ಬೆಳಗುವ ದೀಪಾವಳಿ

04:14 PM Nov 05, 2018 | |

ಹಾವೇರಿ: ರೈತಾಪಿ ವರ್ಗವೇ ಪ್ರಮುಖವಾಗಿರುವ ಜಿಲ್ಲೆಯಲ್ಲಿ ದೀಪಾವಳಿಯೇ ‘ದೊಡ್ಡ ಹಬ್ಬ’. ಈ ಹಬ್ಬವನ್ನು ರೈತರು ವಿಶಿಷ್ಟವಾಗಿ ಹಾಗೂ ಸಾಂಪ್ರದಾಯಿಕವಾಗಿ ಮೂರು ದಿನ ಆಚರಿಸುತ್ತ ಬಂದಿದ್ದು, ದೊಡ್ಡ ಹಬ್ಬದ ತಯಾರಿ ಬಲು ಜೋರಾಗಿಯೇ ನಡೆದಿದೆ. ಅಪ್ಪಟ ಜನಪದ ಸಂಸ್ಕೃತಿಯ ಪ್ರತಿಬಿಂಬಿಸುವ ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳಿಂದಲೇ ಸಡಗರದ ಸಿದ್ಧತೆ ಆರಂಭವಾಗಿದ್ದು, ಈಗ ಹಬ್ಬದಾಚರಣೆಗಾಗಿ ದಿನಗಣನೆ ಶುರುವಾಗಿದೆ. ಈ ಬಾರಿ ನ. 6, 7 ಹಾಗೂ 8ರಂದು ಹಬ್ಬದಾಚರಣೆ ನಡೆಯಲಿದ್ದು, ಮನೆ ಮನೆಗಳಲ್ಲಿ ಹಣತೆಗಳು ಬೆಳಗಲಿವೆ.

Advertisement

ದೀಪಾವಳಿಯ ಮೊದಲ ದಿನವನ್ನು ಹಳ್ಳಿಗಳಲ್ಲಿ ‘ನೀರು ತುಂಬುವ ಹಬ್ಬ’ ಅಥವಾ ‘ಎರೆದುಕೊಳ್ಳುವ ಹಬ್ಬ’ ಎಂದು ಆಚರಿಸುತ್ತಾರೆ. ಅಂದು ಗ್ರಾಮಸ್ಥರು ಶಿವಲಿಂಗಾಕೃತಿಯ ಕಾಯಿಗಳನ್ನು ಹೊಂದಿರುವ ಮಾಲಿಂಗನ ಬಳ್ಳಿಯನ್ನು ಹುಡುಕಿ ತರುತ್ತಾರೆ. ನೀರು ಕಾಯಿಸುವ ಹಂಡೆಯನ್ನು ಕೆಮ್ಮಣ್ಣು ಹಚ್ಚಿ ಸಿಂಗರಿಸುತ್ತಾರೆ. ಜತೆಗೆ ಈ ಹಂಡೆಯ ಮೇಲೆ ಸುಣ್ಣದಿಂದ ಜನಪದ ಸೊಗಡು, ಸಂಸ್ಕೃತಿ ಬಿಂಬಿಸುವ ಚಿತ್ತಾರ ಬಿಡಿಸುತ್ತಾರೆ. ಹೀಗೆ ಅಲಂಕೃತಗೊಂಡ ಹಂಡೆಗೆ ಮಾಲಿಂಗನ ಬಳ್ಳಿ ಸುತ್ತಿ ಅಭ್ಯಂಗ ಸ್ನಾನ ಮಾಡುತ್ತಾರೆ. ಮನೆ ಗೋಡೆ, ಬಾಗಿಲು, ಹೊಸ್ತಿಲು ಎಲ್ಲದರ ಮೇಲೂ ಹಳ್ಳಿ ರೈತ ಜೀವನದ ಚಿತ್ರಗಳನ್ನು ಕೆಮ್ಮಣ್ಣು, ಸುಣ್ಣದಿಂದ ಚಿತ್ರಿಸುತ್ತಾರೆ. 

ಮರುದಿನ ಅಮವಾಸ್ಯೆ. ಅಮವಾಸೆ ದಿನ ಲಕ್ಷ್ಮೀ ಪೂಜೆ ಮಾಡುತ್ತಾರೆ. ವ್ಯಾಪಾರಸ್ಥರಿಗೆ ಇದು ಮಹಾಲಕ್ಷ್ಮೀಯನ್ನು ವಿಶೇಷವಾಗಿ ಪೂಜಿಸಿ ಒಲಿಸಿಕೊಳ್ಳುವ ಹಬ್ಬ. ಅಂಗಡಿಕಾರರು ಈ ಅಮವಾಸ್ಯೆ ದಿನ ಲಕ್ಷ್ಮೀಗೆ ಚಿನ್ನಾಭರಣಗಳಿಂದ ಸಿಂಗರಿಸಿ, ಸೀರೆಯುಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಲಕ್ಷ್ಮೀ ಹಬ್ಬ ನಗರದ ಅಂಗಡಿಗಳಲ್ಲಿ ಹೆಚ್ಚು ಸಂಭ್ರಮ- ಸಡಗರದಿಂದ ನಡೆಯುತ್ತದೆ. ಸಂಜೆ ಹೊತ್ತು ಎತ್ತ ನೋಡಿದರತ್ತ ಬಣ್ಣ ಬಣ್ಣದ ಬೆಳಕು ಕಣ್ಣು ತುಂಬಿಕೊಳ್ಳುತ್ತದೆ. ಪಟಾಕಿ ಸದ್ದು ಮುಗಿಲು ಮುಟ್ಟಿರುತ್ತದೆ. ಇನ್ನು ಮನೆಗಳಲ್ಲಿಯೂ ಲಕ್ಷ್ಮೀ ಪೂಜೆ ಮಾಡುತ್ತಾರೆ.

ಹಟ್ಟಿ ಲಕ್ಕವ್ವ ಪೂಜೆ: ಮೂರನೇ ದಿನ ಬಲಿಪಾಡ್ಯ. ಈ ದಿನವೇ ಹಳ್ಳಿಗರಿಗೆ ನಿಜವಾದ ದೀಪಾವಳಿ. ಸಗಣಿಯಲ್ಲಿ ಪಾಂಡವರನ್ನು ಮಾಡಿ, ಚೆಂಡು ಹೂವಿನ ಐದು ಗಿಡಗಳ ನಡುವೆ ಪ್ರತಿಷ್ಠಾಪಿಸುತ್ತಾರೆ. ಇದರ ನಡುವೆ ಸಗಣಿಯಲ್ಲಿಯೇ ಲಕ್ಷ್ಮೀಯನ್ನೂ ಮಾಡಿ ಪ್ರತಿಷ್ಠಾಪಿಸುತ್ತಾರೆ. ಈ ಲಕ್ಷ್ಮೀಗೆ ‘ಹಟ್ಟಿ ಲಕ್ಕವ್ವ’ ಎಂದು ಗ್ರಾಮೀಣ ಜನತೆ ಕರೆಯುತ್ತಾರೆ. ಮನೆ, ಕೊಟ್ಟಿಗೆ, ವ್ಯಾಪಾರ, ಉದ್ಯೋಗಕ್ಕೆ ಬಳಸುವ ಎಲ್ಲ ವಸ್ತುಗಳ ಸಮೀಪವೂ ಅರಿಶಿಣ-ಕುಂಕುಮ, ಹೂಗಳಿಂದ ಸಿಂಗರಿಸಿದ ಸಗಣಿಯ ಉಂಡೆಗಳನ್ನು ಇಟ್ಟು ಪೂಜಿಸುತ್ತಾರೆ. ಈ ದೀಪಾವಳಿ ಆಚರಣೆಯ ಬಳಿಕವೇ ಗ್ರಾಮಗಳಲ್ಲಿ ಸಗಣಿಯ (ಬೆರಣಿ)ಕುಳ್ಳುಗಳನ್ನು ತಯಾರಿಸುವುದು ಸಂಪ್ರದಾಯ. ಇದೇ ಅಲ್ಲಲ್ಲಿ ಹೋರಿಗಳನ್ನು ಬೆದರಿಸಿ, ಸಂಭ್ರಮಿಸುತ್ತಾರೆ.

ಜಾನುವಾರುಗಳಿಗೆ ಸಿಂಗಾರ: ಕೊಟ್ಟಿಗೆಯಲ್ಲಿನ ದನ-ಕರುಗಳ ಮೈ ತೊಳೆದು ಹೊಸದಾಗಿ ಮಾರುಕಟ್ಟೆಯಿಂದ ತಂದ ಹಗ್ಗ, ರಿಬ್ಬನ್‌, ಗಂಟೆ, ಗೆಜ್ಜೆಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಎತ್ತುಗಳ ಕೊರಳಿಗೆ ಕೊಬ್ಬರಿ ಸರವನ್ನೂ ಕಟ್ಟುತ್ತಾರೆ. ಎತ್ತಿನ ಗಾಡಿಯನ್ನೂ ಬಣ್ಣ ಹಚ್ಚಿ ಸಿಂಗರಿಸಿ ಪೂಜಿಸುತ್ತಾರೆ. ಪೂಜೆಯ ಬಳಿಕ ಅವುಗಳನ್ನು ಹೊರಗೆ ಬಿಡುತ್ತಾರೆ.

Advertisement

ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಟ್ಟಿ ಲಕ್ಕವ್ವನನ್ನು ಪ್ರತಿಷ್ಠಾಪಿಸಿದ ಸ್ಥಳದಿಂದ ಹೊರ ಅಂಗಳದ ವರೆಗೆ ಕೆಮ್ಮಣ್ಣು ಹಾಗೂ ಸುಣ್ಣದಿಂದ ಆಕಳಿನ ಹೆಜ್ಜೆ ಬಿಡಿಸುತ್ತಾರೆ. ಈ ಹೆಜ್ಜೆಗಳ ಮೇಲೆಯೇ ಆಕಳನ್ನು ಮನೆಯೊಳಗೆ ತರುವ ಆಚರಣೆ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಿದೆ. ಹಬ್ಬದ ಮೂರೂ ದಿನ ಹೋಳಿಗೆ, ಕಡಬು ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿ, ಊಟ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಒಟ್ಟಾರೆ ಗ್ರಾಮೀಣ ಜನಪದ ಸಂಸ್ಕೃತಿಯ ಪ್ರತೀಕವಾಗಿ ದೀಪಾವಳಿ ಹಬ್ಬವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಂಡು ಬರಲಾಗಿದೆ.

ಇಂದಿನ ಆಧುನಿಕತೆಯ ಬಿರುಗಾಳಿಯಲ್ಲಿ ಹಲವು ಹಬ್ಬಗಳ ಅನೇಕ ಸಂಪ್ರದಾಯ, ಆಚರಣೆಗಳು ಕಣ್ಮರೆಯಾಗುತ್ತಿವೆ. ಕೆಲವೊಂದು ಕಡೆಗಳಲ್ಲಿ ಸಂಪ್ರದಾಯಗಳನ್ನು ಶಾಸ್ತ್ರಕ್ಕೆ ಎಂಬಂತೆ ಚುಟುಕಾಗಿ ನಡೆಯುತ್ತಿವೆ. ಆದರೆ, ದೀಪಾವಳಿ ಹಬ್ಬವನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ವೈಶಿಷ್ಟ್ಯ ಪೂರ್ಣವಾಗಿ, ಸಂಪ್ರದಾಯ ಬದ್ಧವಾಗಿ ಈಗಲೂ ಆಚರಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ತನ್ಮೂಲಕ ದೀಪಾವಳಿ ಹಬ್ಬವು ಜನಪದ ಸಂಸ್ಕೃತಿಯ ರಕ್ಷಣೆ ಮಾಡಿದಂತಾಗಿದೆ.
 . ನಿಂಗಪ್ಪ ದೊಡ್ಡ ತಳವಾರ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next