Advertisement

ಸೀರೆ ಕದ್ದ ಕತೆ ಉಂಟು, ರವಿಕೆ ಕದ್ದ ಕತೆ ಉಂಟಾ?

06:00 AM Jun 08, 2018 | |

ರವಿಕೆ ಅಂದರೆ ಹೆಣ್ಣಿನ ಮೋಹಕ ಎದೆಯನ್ನು ಮುಚ್ಚುವ ಉಡುಪು ಎಂದು ಗೊತ್ತಿರುವುದೇ. ಇದಕ್ಕೆ ಕುಪ್ಪಸ, ಕಂಚುಕ, ಕುಬಸ ಎಂಬ ಹೆಸರೂ ಇದೆ. ಇಂದು ಹೆಚ್ಚಾಗಿ ರವಿಕೆಯನ್ನು “ಬ್ಲೌಸ್‌’ ಎಂಬ ಇಂಗ್ಲಿಷ್‌ ಹೆಸರಿನಿಂದ ಕರೆಯುತ್ತಾರೆ. ರವಿಕೆಯಲ್ಲೂ ಎಷ್ಟು ವಿಧ! ಉದ್ದ ತೋಳಿನ ರವಿಕೆ, ಗಿಡ್ಡ ತೋಳಿನ ರವಿಕೆ, ತೋಳೆ ಇರದ ಕಂಕುಳು ಪ್ರದರ್ಶನ ಮಾಡುವ ರವಿಕೆ, ಹಿಂಭಾಗ ವಿಧವಿಧ ಡಿಸೈನ್‌ ಹೊಂದಿದ ರವಿಕೆ.

Advertisement

ನಾನು ಚಿಕ್ಕವಳಿರುವಾಗ ಈಗಿನಂತೆ ಚೂಡಿದಾರ್‌, ಜೀನ್ಸ್‌ ಇತ್ಯಾದಿಗಳನ್ನು ಧರಿಸುವ ಪದ್ಧತಿ ಇರಲಿಲ್ಲ. ಮೈನರೆಯುವಲ್ಲಿವರೆಗೆ ಮೊಣಗಂಟಿನವರೆಗೆ ಬರುವ ಗಿಡ್ಡ ಲಂಗ, ರವಿಕೆ ಆಮೇಲೆ ಉದ್ದ ಲಂಗ, ರವಿಕೆ ಹಾಕಿಕೊಳ್ಳುತ್ತಿದ್ದೆವು. ರವಿಕೆ ಎಂದರೆ ಈಗಿನವರು ದಾವಣಿಯ ಮೇಲೆ ಧರಿಸುವ ಹೊಕ್ಕಳು ಕಾಣುವ ಉಡುಪು ಆಗಿರಲಿಲ್ಲ. ಅದು ತುಂಬ ಉದ್ದವಿತ್ತು. ಎಷ್ಟೆಂದರೆ ನಮ್ಮ ಸೊಂಟ ಮುಚ್ಚುವಷ್ಟು. ಮದುವೆ ಆದ ಮೇಲೆ ಪರ್ಮನೆಂಟ್‌ ಸೀರೆ, ರವಿಕೆ. 

ಹೌದು. ಸೀರೆ, ರವಿಕೆ ಹಳೆಕಾಲದ ಉಡುಪು. ಪುರಾಣಕಾಲದಲ್ಲೂ ಇತ್ತು ಎಂಬುದಕ್ಕೆ ಸಾಕ್ಷಿ ದ್ರೌಪದಿಯ ವಸ್ತ್ರಾಪಹರಣದ ಕತೆ. ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆದಾಗ ಅದು ಉದ್ದವಾಗುತ್ತಲೇ ಹೋಯಿತಂತೆ. ಸದ್ಯ ಆ ದುಶ್ಯಾಸನ ಅವಳ ರವಿಕೆಗೆ ಕೈಹಾಕಲು ಹೋಗಲಿಲ್ಲ. ಕೃಷ್ಣನೂ ಗೋಪಿಕೆಯರ ಸೀರೆ, ರವಿಕೆ ಕದ್ದ ವಿಷಯ ಮಹಾಭಾರತದಲ್ಲಿ ಬರುತ್ತದೆ. ದೇವಿ, ದೇವತೆ, ಗಂಧರ್ವ ಕನ್ನಿಕೆಯರೆಲ್ಲ ಸೀರೆ, ರವಿಕೆಯಲ್ಲೇ ಇರುವ ಫೋಟೊ ನಮಗೆ ನೋಡಲು ಸಿಗುತ್ತದೆಯೇ ಹೊರತು ಯಾವ ದೇವಾನುದೇವತೆಯರೂ ಪ್ಯಾಂಟ್‌, ಬನಿಯನ್‌, ಶರ್ಟ್‌ ಧರಿಸಿದ ನಿದರ್ಶನ ಕಾಣಸಿಗುವುದಿಲ್ಲ. 

ಯಾವ ವಿಧದ ರವಿಕೆಯಾದರೂ ಸರಿ ಸೀರೆ ಉಡಬೇಕಾದರೆ ರವಿಕೆ ಬೇಕೇ ಬೇಕು. ಸೀರೆ-ರವಿಕೆ ಒಂದನ್ನು ಬಿಟ್ಟು ಒಂದು ಇಲ್ಲ. ಸೀರೆೆ ಎಷ್ಟೇ ಚೆನ್ನಾಗಿದ್ದರೂ ರವಿಕೆ ಚೆನ್ನಾಗಿಲ್ಲವೆಂದರೆ ಸೀರೆಯ ಅಂದ ಕೆಡುತ್ತದೆ. ಇದರಿಂದ ರವಿಕೆಯ ಮಹತ್ವ ಎಷ್ಟೆಂಬುದು ಅರಿವಾಗುತ್ತದೆ. ಒಟ್ಟಿನಲ್ಲಿ ರವಿಕೆ ಸೀರೆಯ ಅಂದವನ್ನು ಹೆಚ್ಚಿಸುತ್ತದೆ. ಯಾವ ಸೀರೆಗೆ ಯಾವ ತರಹದ ರವಿಕೆ ಹಾಕಬೇಕು ಎಂದು ತಿಳಿದಿರುವುದೂ ಅತೀ ಮುಖ್ಯ. ಹಿಂದೆಯೆಲ್ಲ ಇಂದಿನಂತೆ ಸೀರೆಯ ಜೊತೆಯಲ್ಲೇ ಬ್ಲೌಸ್‌ ಪೀಸ್‌ ಬರುತ್ತಿರಲಿಲ್ಲ. ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕಿತ್ತು. ಸೀರೆಯೇನೋ ಬೇಗ ಆರಿಸಿಯಾಗುತ್ತಿತ್ತು. ಆದರೆ ಅದಕ್ಕೆ ಮ್ಯಾಚ್‌ ಆಗುವ ರವಿಕೆ ಅರಿವೆ ತೆಗೆಯಬೇಕಾದರೆ ಪ್ರಾಣಕ್ಕೆ ಬರುತ್ತಿತ್ತು. ಸೀರೆ ತೆಗೆದ ಅಂಗಡಿಯಲ್ಲೇ ಬ್ಲೌಸ್‌ ಪೀಸ್‌ ಸಿಗುವುದು ಖಾತ್ರಿ ಇರಲಿಲ್ಲ. ಸೀರೆಯನ್ನು ಹಿಡಿದುಕೊಂಡು ಮ್ಯಾಚಿಂಗ್‌ ಬ್ಲೌಸ್‌ ಪೀಸ್‌ಗಾಗಿ ಅಂಗಡಿ ಅಂಗಡಿ ಅಲೆಯಬೇಕಾಗಿತ್ತು. ಕೆಲವೊಮ್ಮೆ ಯಾವ ಅಂಗಡಿಯಲ್ಲೂ ಬ್ಲೌಸ್‌ ಪೀಸ್‌ ಸಿಗದೆ ಸೀರೆಯನ್ನು ವಾಪಸು ಮನೆಗೆ ಒಯ್ಯಬೇಕಾಗುತ್ತಿತ್ತು. ಕೊನೆಗೆ ಯಾವುದೋ ಬಣ್ಣದ ಸೀರೆಗೆ ಯಾವುದೋ ಬಣ್ಣದ ರವಿಕೆ ಹಾಕಬೇಕಾದ ಅನಿವಾರ್ಯತೆ. ಆದರೆ, ನನ್ನ ಅಮ್ಮ, ಅತ್ತೆ, ಅಜ್ಜಿ ಮುಂತಾದ ಹಿರಿಯರೆಲ್ಲ ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಂಡದ್ದೇ ಇಲ್ಲ. ಹೇಗೂ ಅವರ ಬಳಿ ಬಿಳಿ ರವಿಕೆ ಇದ್ದೇ ಇರುತ್ತಿತ್ತು. ಹೊರಗೆ ಹೋಗುವಾಗ ಯಾವ ಬಣ್ಣದ ಸೀರೆಯಾದರೂ ಸರಿ ಮ್ಯಾಚಿಂಗ್‌ ಕಲರ್‌ ರವಿಕೆ ಇಲ್ಲದಿದ್ದರೆ ಅದನ್ನೇ ಹಾಕಿಕೊಳ್ಳುತ್ತಿದ್ದರು. 

ರವಿಕೆಗೆ ಬೇಕಾಗಿರುವುದು ತುಂಡು ಬಟ್ಟೆ. ಆದರೆ ಅದನ್ನು ಹೊಲಿಸಲು ಕೆಲವೊಮ್ಮೆ ಸೀರೆಯ ಬೆಲೆಗಿಂತಲೂ ಅಧಿಕ ದುಡ್ಡು ಕೊಡಬೇಕಾಗುತ್ತದೆ. ಈಚೆಗೆ ಗೆಳತಿಯೊಬ್ಬಳು ಹೇಳಿದ್ದಳು ಅವಳ ಬ್ಲೌಸ್‌ ಹೊಲಿದದ್ದಕ್ಕೆ ದರ್ಜಿ ಹೇಳಿದ ಬೆಲೆ ಮೂರು ಸಾವಿರ ರೂಪಾಯಿಗಳಂತೆ. ಇದನ್ನು ಕೇಳಿ ಬಡ ರೈತಳಾದ ನನ್ನ ತಲೆ ತಿರುಗಿತ್ತು. ಟೈಲರುಗಳು ಕೇಳಿದ ದುಡ್ಡು ಕೊಟ್ಟರೂ ಅವರು ಹೇಳಿದ ದಿನಕ್ಕೆ ರವಿಕೆಯನ್ನು ಹೊಲಿದು ಕೊಡುವುದಿಲ್ಲ. ಮಾತ್ರವಲ್ಲ ಅವರು ಹೇಳಿದ ಸಮಯ ಕಳೆದು ಹೋದರೂ ರವಿಕೆ ರೆಡಿ ಆಗಿರುವುದಿಲ್ಲ. ಪ್ರತಿ ಸಾರಿ ಹೋದಾಗಲೂ “ಗುಬ್ಬಿ ಇಟ್ಟು ಆಗಲಿಲ್ಲ, ಕೈ ಹೊಲಿಗೆ ಬಾಕಿ ಇದೆ, ಇಸ್ತ್ರಿ ಮಾಡಬೇಕಷ್ಟೆ’… ಹೀಗೆ ಒಂದೊಂದು ಕಾರಣ ಕೊಡುತ್ತಾರೆ. ಕೊನೆಗೊಂದು ದಿನ ರವಿಕೆ ಸಿಕ್ಕಾಗ ಅದು ನಮ್ಮ ದೇಹಕ್ಕೆ ತಕ್ಕುದಾದ ಅಳತೆ ಹೊಂದಿರುವುದಿಲ್ಲ. ಒಂದೋ ಸಡಿಲ ಇಲ್ಲವೇ ಹಾಕಲು ಸಾಧ್ಯವಾಗದಷ್ಟು ಬಿಗಿ. ಅಪವಾದವೂ ಇದೆ; ಇಲ್ಲವೆಂದಲ್ಲ. ಅಂದ ಹಾಗೆ ಈಗ ರೆಡಿಮೇಡ್‌ ಬ್ಲೌಸ್‌ಗಳೂ ಸಿಗುತ್ತವೆ. ಆದರೆ ಅವುಗಳು ಅಳತೆ ತೆಗೆದು ಹೊಲಿಸಿದ ಬ್ಲೌಸ್‌ಗಳಂತೆ ಕಂಫ‌ರ್ಟ್‌ ಆಗಿರುವುದಿಲ್ಲ.

Advertisement

ಮನೆಗೆ ಬಂದ ಅತಿಥಿ ಸ್ತ್ರೀಯಾಗಿದ್ದರೆ ಹೋಗುವಾಗ ಮನೆಯ ಮುತ್ತೆ„ದೆಯರು ಅರಸಿನ, ಕುಂಕುಮದ ಜೊತೆಗೆ ರವಿಕೆ ಕಣ ಕೊಡುವ ಪದ್ಧತಿ ಹೆಚ್ಚಿನ ಮನೆಗಳಲ್ಲಿದೆ. ಮದುವೆ ಕಾರ್ಯಕ್ರಮದಲ್ಲೂ ಆಗಮಿಸಿದ ಹೆಂಗಸರಿಗೆ ರವಿಕೆ ಕಣ ಕೊಡುವುದನ್ನು ಕಾಣಬಹುದು. ಹೀಗೆ ಪಡಕೊಂಡ ವರು ಅದನ್ನು  ರವಿಕೆ ಹೊಲಿಸಿ ಹಾಕಿಕೊಳ್ಳುತ್ತಾರೆಂದು ಹೇಳಲು ಬರುವು ದಿಲ್ಲ. ಅದನ್ನು ಇನ್ನೊಬ್ಬರಿಗೆ ಕೊಡಲು ಉಪಯೋಗಿಸುವವರೇ ಹೆಚ್ಚು.

ಮೊನ್ನೆ ಅಪರೂಪಕ್ಕೆ ಬಾಲ್ಯದ ಗೆಳತಿ ಒಬ್ಬಳು ಸಿಕ್ಕು ಅದೂಇದೂ ಮಾತಾಡುತ್ತ ತನ್ನ ಗಂಡ ತುಂಬ ರಸಿಕನೆಂದೂ, ತಾನು ಸೀರೆ ಉಡುವ ರೀತಿ ಅವನಿಗೆ ಸಮಾಧಾನ ಇಲ್ಲವೆಂದೂ ಹೇಳಿದಳು. ಅವನು ಅವಳಿಗೆ “ಇದೇನು ಅಜ್ಜಿಯಂದಿರು ಹಾಕುವಂತೆ ದೇಹಪೂರ್ತಿ ಮುಚ್ಚುವ ಬ್ಲೌಸ್‌ ತೊಟ್ಟಿದ್ದೀಯಾ? ಸ್ವಲ್ಪವಾದರೂ ಬ್ಯೂಟಿ ಸೆನ್ಸ್‌ ಬೇಡವೇ? ರವಿಕೆಯ ಮುಂಭಾಗ ಆಳವಾಗಿರಬೇಕು. ಹಿಂಭಾಗ ಇಡೀ ಬೆನ್ನು ಕಾಣುವಂತಿರಬೇಕು. ಹೊಕ್ಕಳು ತೋರುವಂತೆ ಸೀರೆ ಉಡಬೇಕು. ಸೌಂದರ್ಯ ಇರುವುದು ಮುಚ್ಚುವುದಕ್ಕಲ ಎಂದು ಹೇಳುತ್ತಿರುತ್ತಾನಂತೆ. ಅವನ ಮಾತು ಒಪ್ಪತಕ್ಕದ್ದೇ ಬಿಡಿ. 

ಸೀರೆ, ರವಿಕೆ ಪುರಾತನ ಕಾಲದ ಉಡುಪಾದರೂ ಇಂದಿಗೂ ತನ್ನ ತಾಜಾತನ ಕಳೆದುಕೊಂಡಿಲ್ಲ. ಕಾಲಕ್ಕೆ ತಕ್ಕಂತೆ ಹೊಸ ಸ್ಪರ್ಶ ಪಡೆಯುತ್ತ ಹೆಂಗಳೆಯರ ಮೈಯನ್ನು ಹಿಡಿದಿಟ್ಟಿದೆ ಎಂಬುದರಲ್ಲಿ ಸಂಶಯವಿಲ್ಲ.

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next