ಚಾಮರಾಜನಗರ: ವಾಹನ ಸವಾರರಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಾಹನ ಸಾರಿಗೆ ನಿಯಮಗಳಡಿ ದೇಶಾದ್ಯಂತ ನಿಯಮ, ಉಲ್ಲಂಘನೆಯಡಿ ವಿವಿಧ ರೀತಿಯ ದಂಡಗಳನ್ನು ವಿಧಿಸುತ್ತಿದ್ದು, ಸಾಮಾನ್ಯ ನಾಗರಿಕರಿಗೆ ಹೊಸ ನಿಯಮಗಳ ಕುರಿತು ಅರಿವು ಇಲ್ಲದ ಕಾರಣದಿಂದಾಗಿ ತೊಂದರೆಯಾಗಿದೆ.
ವಾಹನ ಸವಾರರ ಹಿತದೃಷ್ಟಿಯಿಂದ ಹೊಸ ನಿಯಮ ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದರೂ ಕೂಡ ಭಾರತ ದೇಶದ ತಲಾದಾಯ, ಸಾಮಾಜಿಕ ಅರಿವಿನ ಮಟ್ಟ, ಸಾಕ್ಷರತಾ ಪ್ರಮಾಣ ಮತ್ತು ಶಾಲಾ ಕಾಲೇಜುಗಳಲ್ಲಿ ಸಿಗುತ್ತಿರುವ ಶಿಕ್ಷಣದ ಗುಣಮಟ್ಟ, ರಸ್ತೆಗಳ ಗುಣಮಟ್ಟ ಇವೆಲ್ಲವನ್ನು ನೋಡಿದಾಗ ನಮ್ಮ ದೇಶಕ್ಕೆ ತಕ್ಕಂತೆ ಈ ನಿಯಮ ಅಪ್ರಸ್ತುತ. ವಾಹನ ಸವಾರರಿಗೆ ಹಾಕುತ್ತಿರುವ ದಂಡ ತುಂಬಾ ದುಬಾರಿಯಾಗಿದೆ ಎಂದು ಬಿಎಸ್‌ಪಿ ಮುಖಂಡರು ತಿಳಿಸಿದರು.
ಜಾಗೃತಿ ಮೊದಲ ಆದ್ಯತೆಯಾಗಿರಬೇಕು: ಜನರ ಪರವಾಗಿರಬೇಕಾದ ಸರ್ಕಾರವೇ ಜನರಿಗೆ ದುಬಾರಿ ದಂಡ ವಿಧಿಸುವ ಮೂಲಕ ಶೋಷಣೆ ಮಾಡುತ್ತಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರ್‌ಟಿಒ ಇಲಾಖೆ ವತಿಯಿಂದ ಜಾಗೃತಿ ಮೊದಲ ಆದ್ಯತೆಯಾಗಿರಬೇಕು. ಆದರೆ ಇತ್ತೀಚಿಗೆ ಜಿಲ್ಲೆಯಾದ್ಯಂತ ಸವಾರರಿಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡದೆ ಉಲ್ಲಂಘನೆ ಎಂಬ ನೆಪದಲ್ಲಿ ದಂಡ ವಸೂಲಿ ತುಂಬಾ ಜೋರಾಗಿದೆ. ಆದರಿಂದ ಹೆಚ್ಚಾಗಿ ಸಾರ್ವಜನಿಕರು ಭಯದಿಂದ ಓಡಾಡುತ್ತಿದ್ದಾರೆ. ದಂಡದಿಂದ ತಪ್ಪಿಸಿಕೊಳ್ಳಲು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಹಲವಾರು ಸಂದರ್ಭದಲ್ಲಿ ಹಲವಾರು ಅವಘಡಗಳಿಗೆ ಕಾರಣಗಳಾಗಿವೆ ಎಂದರು.
ಸ್ನೇಹದ ವಾತಾವರಣ ನಿರ್ಮಾಣ ಮಾಡಬೇಕು: ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರ್‌ಟಿಓ ಇಲಾಖೆ ವತಿಯಿಂದ ಪಟ್ಟಣ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಒಂದೊಂದು ಪಂಚಾಯಿತಿ ವ್ಯಾಪ್ತಿಯ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ನೂತನ ಸಾರಿಗೆ ನಿಯಮ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಂಟಿಯಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಭಯದ ಬದಲಿಗೆ ಸ್ನೇಹದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಮುಖಂಡರಾದ ಕೃಷ್ಣಯ್ಯ, ನಾಗಯ್ಯ, ಬ.ಮ.ಕೃಷ್ಣಮೂರ್ತಿ, ಬ್ಯಾಡಮೂಡ್ಲುಬಸವಣ್ಣ, ಎಸ್.ಪಿ.ಮಹೇಶ್, ಹರಳೀಪುರ ಮಹದೇವಸ್ವಾಮಿ, ಚಂದಕವಾಡಿ ಕುಮಾರಸ್ವಾಮಿ, ರವಿ, ಸಿದ್ದರಾಜು, ಆಶ್ರಿತ್, ಶಿವಣ್ಣ, ರಂಗಸ್ವಾಮಿ ಇತರರು ಹಾಜರಿದ್ದರು.
20 ಎಸ್‌ಪಿ ಮನವಿ: ವಾಹನ ಸವಾರರಿಗೆ ರಸ್ತೆ ಸುರಕ್ಷತಾ ಹಾಗೂ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಇದ್ದರು.