ಬಸ್ರೂರು: ಹಟ್ಟಿಕುದ್ರು ದ್ವೀಪವಾಸಿಗಳ ಏಳು ದಶಕಗಳ ಕನಸು ಈಗ ನನಸಾಗಿದೆ. ಎರಡು ವರ್ಷ ಕೊರೊನಾ ಕಾರಣ ನಿಂತ ಸೇತುವೆ ಕಾಮಗಾರಿ ಕಳೆದ ನಾಲ್ಕು ತಿಂಗಳ ಹಿಂದೆಯೇ ಮುಗಿದಿತ್ತು. ಸುಮಾರು 340 ಮೀ. ಉದ್ದದ ಈ ಸೇತುವೆಗೆೆ 14 ಕೋಟಿ 59 ಲಕ್ಷ ರೂ. ಅನುದಾನ ವಾರಾಹಿ ನೀರಾವರಿ ನಿಗಮದಿಂದ ಮಂಜೂರಾ ಗಿತ್ತು. ಬಸ್ರೂರು ಗ್ರಾ.ಪಂ. ವ್ಯಾಪ್ತಿಗೆ ಬರುವ ಹಟ್ಟಿಕುದ್ರು ನಿವಾಸಿಗಳು ತಾಲೂಕಿಗೆ ಬರಬೇಕಾದರೆ ಸುಮಾರು 70 ವರ್ಷಗಳಿಂದ ದೋಣಿಯನ್ನೇ ನಂಬಿದ್ದರು. ಜನ ಅನಾರೋಗ್ಯಕ್ಕೊಳ ಗಾದರೆ ದೋಣಿಯಲ್ಲಿ ಬಸ್ರೂರಿಗೆ ಬಂದೇ ತಾಲೂಕು ಕೇಂದ್ರಕ್ಕೆ ಬರಬೇಕಾಗಿತ್ತು. ಇಲ್ಲವೆಂದರೆ ಹಟ್ಟಿಕುದ್ರುವಿನಿಂದ ಹಟ್ಟಿಯಂಗಡಿ ಮಾರ್ಗವಾಗಿ ಸುತ್ತಿ ಬಳಸಿ ಸಾಗಬೇಕಾದ ಅನಿವಾರ್ಯತೆ ಇತ್ತು.
ಪ್ರಸ್ತುತ ಈ ಎಲ್ಲ ಸಮಸ್ಯೆಗಳಿಂದ ಹಟ್ಟಿಕುದ್ರು ಜನರು ದೂರವಾಗಿದ್ದು ಸೇತುವೆ ಬಹೂಪಯೋಗಿಯಾಗಿ ನಿರ್ಮಾಣಗೊಂಡಿದೆ.
ಒಟ್ಟು 18 ಪಿಲ್ಲರ್‌ಗಳು, ಎರಡು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಸೇತುವೆ ಅಗಲವಾಗಿದ್ದು ಘನ ವಾಹನಗಳೂ ಈಗ ಸಾಗುತ್ತಿವೆ. ಆದರೆ ಬಸ್ರೂರು ಭಾಗದಲ್ಲಿ ದೇವಸ್ಥಾನದಿಂದ ಸೇತುವೆ ತನಕದ ರಸ್ತೆ ಅಗಲ ಕಿರಿದಾಗಿದ್ದು ಒಮ್ಮೆ ಒಂದು ವಾಹನ ಮಾತ್ರ ಸಾಗಬಹುದಾಗಿದೆ. ಎರಡೂ ಬದಿಗಳಲ್ಲಿ ಮನೆಗಳಿರುವುದರಿಂದ ಈ ರಸ್ತೆಯನ್ನು ವಿಸ್ತರಣೆಗೊಳಿಸುವುದೂ ಕಷ್ಟಸಾಧ್ಯವಾಗಿದೆೆ. ಈಗ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ.
ಕಾಮಗಾರಿ ಮುಗಿದಾಕ್ಷಣ ಉದ್ಘಾಟನೆಯ ಬಗ್ಗೆ ಮಾತು ಕೇಳಿ ಬಂದಿದ್ದರೂ ಇನ್ನೂ ಉದ್ಘಾಟನೆ ಆಗಿಲ್ಲ. ಒಟ್ಟಿನಲ್ಲಿ ಹಟ್ಟಿಕುದ್ರು ಸೇತುವೆಯಿಂದ ದ್ವೀಪವಾಸಿಗಳ ಕನಸು ನನಸಾಗಿದೆ. ಸೇತುವೆಯ ಒಂದು ಬದಿಯಲ್ಲಿ ಪಾದಚಾರಿಗಳಿಗೆ ನಡೆದು ಹೋಗಲು ದಾರಿ ನಿರ್ಮಿಸಿ ಕೊಡಲಾಗಿದೆ.