Advertisement

ಹಾಸನ ಟಿಕೆಟ್‌ ಬಿಕ್ಕಟ್ಟು: ಮೂಡದ ಒಮ್ಮತ; ಭವಾನಿಗೆ ಅವಕಾಶ ನೀಡಲು ಹೆಚ್ಚಿದ ಒತ್ತಡ

12:22 AM Apr 03, 2023 | Team Udayavani |

ಬೆಂಗಳೂರು: ಹಾಸನ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಿವಾಸದಲ್ಲಿ ಸಭೆ ನಡೆದರೂ ಒಮ್ಮತ ಮೂಡಿಲ್ಲ.

Advertisement

ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ದೇವೇಗೌಡರು ಮಾತನಾಡಿದರೂ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಭವಾನಿ ರೇವಣ್ಣಗೆ ಟಿಕೆಟ್‌ಗೆ ಒತ್ತಡ ಹೆಚ್ಚಾಗಿದ್ದರೆ, ಸ್ವರೂಪ್‌ಗೆ ಟಿಕೆಟ್‌ ಕೊಡಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ಹಠ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಭಾನುವಾರ ಸಂಜೆ ದೇವೇಗೌಡರ ನಿವಾಸದಲ್ಲಿ ಸಭೆ ಕರೆಯಲಾಗಿತ್ತಾದರೂ ರಾತ್ರಿ 9.30 ಕಳೆದರೂ ರೇವಣ್ಣ, ಭವಾನಿ ರೇವಣ್ಣ ಆಗಮಿಸಿರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಬಂದು ತಡರಾತ್ರಿವರೆಗೂ ಮಾತುಕತೆ ನಡೆಸಿದರು.

ಹೀಗಾಗಿ, ಸೋಮವಾರ ಮತ್ತೆ ಸಭೆ ಸೇರುವ ಸಾಧ್ಯತೆಯಿದೆ. ಹಾಸನ ಟಿಕೆಟ್‌ ಅಂತಿಮವಾಗದೇ ಎರಡನೇ ಪಟ್ಟಿ ಬಿಡುಗಡೆ ಅನುಮಾನ ಎಂದು ಹೇಳಲಾಗಿದೆ.

ಈ ನಡುವೆ ಕೊನೇ ಹಂತದಲ್ಲೂ ಹಾಸನ ಟಿಕೆಟ್‌ ಭವಾನಿ ರೇವಣ್ಣ ಅವರಿಗೆ ಪಡೆಯುವ ಒತ್ತಡ ತಂತ್ರ ಮುಂದುವರಿದಿದೆ. ಹಾಸನ ಮಹಿಳಾ ಕಾರ್ಯಕರ್ತೆಯರ ತಂಡ ಭಾನುವಾರ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಭವಾನಿ ರೇವಣ್ಣಗೆ ಟಿಕೆಟ್‌ ಕೊಡುವಂತೆ ಒತ್ತಾಯಿಸಿತು.

Advertisement

ಬಿಜೆಪಿ ಶಾಸಕ ಪ್ರೀತಂ ಗೌಡ ರೇವಣ್ಣ ಕುಟುಂಬಕ್ಕೆ ಪಂಥಾಹ್ವಾನ ನೀಡಿದ್ದಾರೆ. ಹೀಗಾಗಿ, ಅವರನ್ನು ಸೋಲಿಸಲು ಭವಾನಿ ಅವರೇ ಸೂಕ್ತ. ಭವಾನಿ ಅವರು ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಹೀಗಾಗಿ, ಟಿಕೆಟ್‌ ಕೊಡಬೇಕು ಎಂದು ಆಗ್ರಹಿಸಿದರು.

ಸ್ವರೂಪ್‌ ಅವರ ಕುಟುಂಬಕ್ಕೆ ಆರು ಬಾರಿ ಟಿಕೆಟ್‌ ನೀಡಲಾಗಿದೆ. ಅವರ ತಂದೆ ಪ್ರಕಾಶ್‌ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಹೀಗಿರುವಾಗ ಸ್ವರೂಪ್‌ ಸಾಮಾನ್ಯ ಕಾರ್ಯಕರ್ತ ಹೇಗಾಗುತ್ತಾರೆ ಎಂದು ಮಹಿಳಾ ಕಾರ್ಯಕರ್ತೆಯರು ಪ್ರಶ್ನಿಸಿದರು.

ದೇವೇಗೌಡರ ಜತೆ ಸಭೆಯ ನಂತರ ಮಾತನಾಡಿದ ಕುಮಾರಸ್ವಾಮಿ, “ರಾಷ್ಟ್ರೀಯ ಅಧ್ಯಕ್ಷರು ಬರಲು ಹೇಳಿದ್ದರು. ಬಂದು ಮಾತನಾಡಿದ್ದೇನೆ. ಹಾಸನ ಅಭ್ಯರ್ಥಿ ಇನ್ನೂ ಫೈನಲ್‌ ಆಗಿಲ್ಲ. ಚರ್ಚೆ ಮಾಡಿದ್ದೇವೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಜೆಡಿಎಸ್‌ ಫೈನಲ್‌ ಲಿಸ್ಟ್‌ ಬಗ್ಗೆ ಸೋಮವಾರ ಮಾತನಾಡುತ್ತೇನೆ’ ಎಂದು ಹೇಳಿದರು.

ಹಾಸನ ವಿಚಾರದಲ್ಲಿ ದೇವೇಗೌಡರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅವರ ತೀರ್ಮಾನಕ್ಕೆ ಎಲ್ಲರೂ ತಲೆಬಾಗುತ್ತೇವೆ. ದೇವೇಗೌಡರು ನೊಂದು ಹೇಳಿದ್ದಾರೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬೇಡ ಎಂದು. ಅವರ ಆರೋಗ್ಯ ಮತ್ತು ಆಯುಷ್ಯ ನನಗೆ ಮುಖ್ಯ. ಅವರು ಮಧ್ಯಸ್ಥಿಕೆ ವಹಿಸಿರುವುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಪಟ್ಟಿ ಬಿಡುಗಡೆಯಾಗುತ್ತಾ?
ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಎರಡನೇ ಪಟ್ಟಿ ಸೋಮವಾರ ಅಥವಾ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. 60 ಕ್ಷೇತ್ರಗಳ ಪಟ್ಟಿ ಅಂತಿಮಗೊಂಡಿದೆಯಾದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಪಟ್ಟಿಯ ನಂತರವೇ ಬಿಡುಗಡೆಯಾಗಲಿದೆ ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next