Advertisement

ಗೋಮಾಂಸ ವಿಚಾರಕ್ಕೆ ಕುಟುಂಬಗಳ ನಡುವೆ ಹಳೇ ವೈಷಮ್ಯ: ಯುವಕನಿಗೆ ಚೂರಿ ಇರಿದು ಕೊಲೆಗೈದ ಗ್ಯಾಂಗ್

10:19 PM Mar 17, 2022 | Team Udayavani |

ಸಕಲೇಶಪುರ: ಗೋಮಾಂಸ ಮಾರಾಟ ಮಾಡುವುದಕ್ಕೆ ಅಡ್ಡಿ ಪಡಿಸಿದ ಎಂಬ ವಿಷಯವಾಗಿ ಎರಡು ಗುಂಪುಗಳ ನಡುವಿನ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮಟ ಮಟ ಮಧ್ಯಾಹ್ನ ಯುವಕನೋರ್ವನಿಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ಕುಶಾಲನಗರ ಬಡಾವಣೆಯ ನಿವಾಸಿ ಅಪ್ಸರ್ ಪಾಶ (32) ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಪಟ್ಟಣದಲ್ಲಿ ಗೋಮಾಫಿಯಾದಲ್ಲಿ ಭಾಗಿಯಾಗಿರುವ ಹಾಜಿ ಖುರೇಷಿ ಎಂಬುವರ ಕುಟುಂಬ ಹಾಗೂ ಕೊಲೆಯಾದ ಅಪ್ಸರ್ ಕುಟುಂಬದ ನಡುವಿನ ವೈಷಮ್ಯ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.

ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಹಾಜಿ ಖುರೇಷಿ ಕುಟುಂಬದವರು ಗೋವನ್ನು ಕಡಿದ ನಂತರ ಸ್ವಚ್ಛ ಮಾಡಿದ ನೀರನ್ನು ಚರಂಡಿಯಲ್ಲಿ ಹರಿಯ ಬಿಡುತ್ತಿದ್ದರು. ಇದು ಅಪ್ಸರ್ ಮನೆಯ ಮುಂದೆ ನಿಲ್ಲುತ್ತಿದ್ದ ಕಾರಣ ವಿಪರೀತ ದುರ್ವಾಸನೆ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ಈ ಕಾರಣಕ್ಕೆ ಅಪ್ಸರ್ ಹಾಗೂ ಮನೆಯವರು ಹಾಜಿ ಖುರೇಷಿ ಕುಟುಂಬಕ್ಕೆ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಜಗಳವಾಗಿತ್ತು. ಇದಾದ ನಂತರ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಪೋಲಿಸರು ಎರಡು ಮೂರು ಬಾರಿ ಹಾಜಿ ಖುರೇಷಿರವರ ಅಂಗಡಿಯಿಂದ ಅಕ್ರಮ ಗೋ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ಇದಕ್ಕೆ ಅಪ್ಸರ್ ಕುಟುಂಬವೇ ಕಾರಣವೆಂದು ಆಗಾಗ ಅಪ್ಸರ್ ಕುಟುಂಬದ ಜೊತೆ ಹಾಜಿ ಖುರೇಷಿ ಗ್ಯಾಂಗ್ ನವರು ಜಗಳ ಕಾಯುತ್ತಿದ್ದರು.  ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಪ್ಸರ್ ತಮ್ಮ ಇಮ್ರಾನ್ ಎಂಬಾತನ ಮೇಲೆ ಗುರುವಾರ ಬೆಳಿಗ್ಗೆ ಆಜಾದ್ ರಸ್ತೆಯಲ್ಲಿ ಹಾಜಿ ಖುರೇಷಿ ಮತ್ತವರ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ.

Advertisement

ಈ ವಿಚಾರ ತಿಳಿದ ಅಪ್ಸರ್ ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ಗುಂಪಿಗೆ ಯಾರು ಹೊಡೆದಿದ್ದು ಎಂದು ಕೇಳಿದ್ದಾನೆ. ಈ ಸಂರ್ಧಭದಲ್ಲಿ ಏಕಾಏಕಿ ಬಂದ ಹಾಜಿಖುರೇಷಿ ಗ್ಯಾಂಗ್ ಅಪ್ಸರ್ ಮೇಲೆ ಹಲ್ಲೆ ನಡೆಸಿದೆ. ಹಾಜಿ ಖುರೇಷಿ ಗ್ಯಾಂಗ್ನ ಎಸಾನ್ ಖುರೇಷಿ ಎಂಬಾತ ಚೂರಿಯಿಂದ ಅಪ್ಸರ್ಗೆ ಇರಿದಿದ್ದು  ತಕ್ಷಣ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಅಪ್ಸರ್ನನ್ನು ಕ್ರಾಪರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಇದೇ ವೇಳೆ ಅಪ್ಸರ್ ಹಾಗೂ ಹಾಜಿ ಖುರೇಷಿ ಗ್ಯಾಂಗ್ ನಡುವೆ ಮತ್ತೆ ಹೊಡೆದಾಟವಾಗಿ ಭಯದ ವಾತಾವರಣ ಉಂಟಾಗಿತ್ತು. ಚೂರಿ ಇಳಿತಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಪ್ಸರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರದೊಯ್ಯುವಾಗ ಮಾರ್ಗ ಮಧ್ಯದಲ್ಲೆ ಮೃತಪಟ್ಟಿದ್ದಾನೆ.

ಕೊಲೆಯ ಗಲಭೆ ದೃಶ್ಯ ಆಜಾದ್ ರಸ್ತೆಯಲ್ಲಿನ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದ್ದು ಸಿಡಿ ಪೆಡ್ರೈವ್ ನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಪಟ್ಟಣದಲ್ಲಿ ಗೋ ಮಾಂಸ ಮಾಫಿಯಕ್ಕೆ ಒಂದು ಹೆಣ ಬಿದ್ದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಆಡಳಿತ ಹಾಗೂ ಪೋಲಿಸರು ಅಕ್ರಮ ಗೋ ಮಾಂಸ ಮಾರಾಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ರೀತಿಯ ಘಟನೆ ಉಂಟಾಗಲು ಕಾರಣವಾಗಿದೆ ಎಂದು ಕುಶಾಲನಗರ ಬಡಾವಣೆಯ ಮುಸ್ಲಿಂ ಸಮುದಾಯ ಸೇರಿದಂತೆ ಇತರ ಸಮುದಾಯವದರು ಆರೋಪಿಸಿದ್ದಾರೆ.

ಅಕ್ರಮ ಗೋ ಮಾಂಸ ಮಾರಾಟ ಮಾಡುವವರ ವಿರುದ್ದ 10ರಿಂದ 15 ಪ್ರಕರಣಗಳು ದಾಖಲಾಗಿದ್ದು ಜೊತೆಗೆ ಗೋ ಮಾಂಸ ಮಾರಾಟಕ್ಕೆ ರಾಜ್ಯದಲ್ಲಿ ನಿರ್ಬಂಧವಿದ್ದರೂ ಸಹ ಈ ರೀತಿಯ ಘಟನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೆ ಅಕ್ರಮ ಗೋ ಮಾಂಸ ಮಾರಾಟಗಾರರನ್ನು ತಾಲೂಕಿನಿಂದ ಗಡಿಪಾರು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ಅಧೀಕ್ಷಕಿ ನಂದಿನಿ ಖುದ್ದು ಭೇಟಿ ನೀಡಿ ಪ್ರಕರಣದ ಮಾಹಿತಿ ತೆಗೆದುಕೊಂಡಿದ್ದಾರೆ.  ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next