ನವದೆಹಲಿ: ಕೆಮ್ಮು ಮತ್ತು ಶೀತದ ಸಿರಪ್ ಸೇವಿಸಿ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ನಂತರ ಹರ್ಯಾಣ ಸರ್ಕಾರ ಮೈಡನ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ನ ಕೆಮ್ಮು ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಒಂದು ವೇಳೆ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಸಿದರೆ ಎಚ್ಚರ: ರಷ್ಯಾಕ್ಕೆ ಜಿ 7 ದೇಶಗಳು
ಹರ್ಯಾಣ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಈ ಬಗ್ಗೆ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರ ಮತ್ತು ಹರ್ಯಾಣ ಆರೋಗ್ಯ ಇಲಾಖೆ ಜಂಟಿಯಾಗಿ ನಡೆಸಿದ ತಪಾಸಣೆ ವೇಳೆ ನಾಲ್ಕು ಸಿರಪ್ ಗಳಲ್ಲಿ ಸುಮಾರು 12 ಅಡ್ಡಪರಿಣಾಮ ಪತ್ತೆಯಾಗಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಕೆಮ್ಮು ಮತ್ತು ಶೀತದ ಎಲ್ಲಾ ನಾಲ್ಕು ಸಿರಪ್ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ತಯಾರಾದ ಕೆಮ್ಮು ಮತ್ತು ಶೀತದ ಸಿರಪ್ ಸೇವಿಸಿ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳು ಸಾವನ್ನಪ್ಪಿರುವ ಘಟನೆ ನಂತರ ಔಷಧ ನಿಯಂತ್ರಣ ಪ್ರಾಧಿಕಾರ ಈ ನಾಳ್ಕು ಸಿರಪ್ ಗಳ ಕುರಿತು ತನಿಖೆಗೆ ಆದೇಶ ನೀಡಿತ್ತು.
ಗ್ಯಾಂಬಿಯಾ ಪಶ್ಚಿಮ ಆಫ್ರಿಕಾಕ್ಕೆ ಸೇರಿದ ದೇಶವಾಗಿದ್ದು, ಇಲ್ಲಿಗೆ ಭಾರತದ ಮೈಡನ್ ಫಾರ್ಮಾಸ್ಯುಟಿಕಲ್ ನಿಂದ ಔಷಧಗಳನ್ನು ರಫ್ತು ಮಾಡಲಾಗುತ್ತಿದೆ. ಅಲ್ಲದೆ ಆಫ್ರಿಕಾ ದೇಶಗಳಿಗೆ ಹೆಚ್ಚಾಗಿ ಭಾರತದಿಂದಲೇ ಹೆಚ್ಚು ಔಷಧ ರಫ್ತಾಗುತ್ತಿದೆ. ಹೀಗಾಗಿ ಈ ಪ್ರಕರಣದಿಂದಾಗಿ ಭಾರತದ ಔಷಧ ಮಾರುಕಟ್ಟೆ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆರೋಪ ಕೇಳಿಬಂದಿರುವುದಾಗಿ ವರದಿ ತಿಳಿಸಿದೆ.