ಹಿಸ್ಸಾರ್ : ಅತ್ಯಾಚಾರಿ ಡೇರಾ ಸಚ್ಚಾ ಸೌದಾದ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್‌ಗೆ ಹರ್ಯಾಣದ ರೋಹಟಕ್ ಸಿಬಿಐ ವಿಶೇಷ ಕೋರ್ಟ್ ಸೋಮವಾರ 20 ವರ್ಷಗಳ ಸೆರೆವಾಸ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಮಂಗಳವಾರ ಹರ್ಯಾಣದ ಇನ್ನೋರ್ವ ಸ್ವಘೋಷಿತ ಬಾಬಾ ರಾಂಪಾಲ್‌ನ ಕುರಿತಾಗಿ ಹಿಸ್ಸಾರ್ ಕೋರ್ಟ್ ತೀರ್ಪು ಪ್ರಕಟಿಸಲಿದೆ.
11 ವರ್ಷಗಳ ಹಿಂದಿನ 2 ನಿಗೂಢ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ 67 ರ ಹರೆಯದ ರಾಂ ಪಾಲ್‌ಗೆ ಶಿಕ್ಷೆ ಪ್ರಮಾಣವನ್ನು ಇಂದು ಕೋರ್ಟ್ ಪ್ರಕಟಿಸಲಿದೆ. ಅಗಸ್ಟ್ 24 ರಂದು ಪ್ರಕಟಿಸಬೇಕಾಗಿದ್ದ ತೀರ್ಪನ್ನು ಇಂದಿಗೆ ಮುಂದೂಡಲಾಗಿದೆ.
ಅತಿ ವಿವಾದಿತ ದೇವಮಾನವರಲ್ಲೊಬ್ಬನಾದ ರಾಂ ಪಾಲ್ ಐಷಾರಾಮಿ ಜೀವನಕ್ಕೆ ಹೆಸರಾಗಿದ್ದ. ಹರ್ಯಾಣಾದ ಬರಾÌಲ್‌ನಲ್ಲಿ 12 ಎಕರೆ ಆಶ್ರಮ ಸೇರಿ ವಿವಿಧೆಡೆ ಆಶ್ರಮ ಹೊಂದಿದ್ದ ಈತ ತನಗೆ ವಿಶೇಷ ಶಕ್ತಿ ಇದೆ ಎಂದು ನಂಬಿಸಿಕೊಂಡಿದ್ದ. ಹರ್ಯಾಣಾದ ಹಿಸ್ಸಾರ್‌ನ ಸತ್ಲೋಕ್‌ನ ಆಶ್ರಮದಲ್ಲಿ 1999ರಲ್ಲಿ ಐವರು ಮಹಿಳೆಯರು ಮತ್ತು 18 ತಿಂಗಳಿನ ಮಗುವಿನ ಶವ ಪತ್ತೆಯಾಗಿತ್ತು. ಇದರೊಂದಿಗೆ ಹಲ್ಲೆ, ಕೊಲೆಯತ್ನ ಪ್ರಕರಣವೂ ಈತನ ಮೇಲಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಈತನ ಬಂಧನಕ್ಕೆ ತೆರಳಿದ್ದಾಗ ಪೊಲೀಸ್ ಪಡೆಯ ಮೇಲೆಯೇ ಈತನ ಅನುಯಾಯಿಗಳು ಹಿಂಸಾತ್ಮಕ ದಾಳಿ ನಡೆಸಿದ್ದರು.ಘಟನೆಯಲ್ಲಿ ಆರು ಮಂದಿ ಅನುಯಾಯಿಗಳು ಮೃತಪಟ್ಟಿದ್ದರು.
ಇದೀಗ ರಾಂ ಲಾಲ್ ಹಿಸ್ಸಾರ್ ಜೈಲಿನಲ್ಲಿ ಅನುಯಾಯಿಗಳೊಂದಿಗೆ ಕಂಬಿ ಎಣಿಸುತ್ತಿದ್ದಾನೆ.
ಶಿಕ್ಷೆ ಪ್ರಮಾಣ ಇಂದು ಪ್ರಕಟವಾಗುವ ಹಿನ್ನಲೆಯಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಬಸ್ ಮತ್ತು ರೈಲುಗಳ ಸಂಚಾರ ಸ್ತಬ್ದಗೊಂಡಿದೆ. ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಹಿಸ್ಸಾರ್‌ನಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.