Advertisement

ಹರ್ಷ ಹತ್ಯೆ ಪ್ರಕರಣ ತನಿಖೆ ಎನ್‌ಐಎಗೆ

12:56 AM Mar 25, 2022 | Team Udayavani |

ಬೆಂಗಳೂರು/ಹೊಸದಿಲ್ಲಿ: ದೇಶಾದ್ಯಂತ ಸುದ್ದಿ ಮಾಡಿದ್ದ  ಬಜರಂಗದಳದ ಕಾರ್ಯಕರ್ತ ಶಿವಮೊಗ್ಗದ  ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲಾಗಿದೆ.

Advertisement

ಬುಧವಾರವೇ ಈ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಯು ಹೊಸದಿಲ್ಲಿಯ ವಿಶೇಷ ಕೋರ್ಟ್‌ ನಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಹೀಗಾಗಿ ಸದ್ಯ ಬಂಧಿತರಾಗಿರುವ ಹತ್ತು ಮಂದಿಯನ್ನು ಶೀಘ್ರವೇ ಎನ್‌ಐಎ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಕರಣದ ಬಗ್ಗೆ ಎನ್‌ಐಎ ತನಿಖೆಯಾಗಬೇಕು. ಹರ್ಷರಿಗೆ ಮುಸ್ಲಿಂ ಸಂಘಟನೆಗಳಿಂದ ಬೆದರಿಕೆ

ಇತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಫೆ.22ರಂದು ಪತ್ರ ಬರೆದಿದ್ದರು. ಅದಕ್ಕೆ ಫೆ.28ರಂದು ಸಮ್ಮತಿ ಸೂಚಿಸಿದ್ದ ಗೃಹ ಸಚಿವರು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ಶಿಫಾರಸು ಮಾಡಿದ್ದರು.

ಹತ್ಯೆಗೆ ಸಂಬಂಧಿಸಿ ಹರ್ಷನ ತಾಯಿ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದರು. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಕೇಸು ದಾಖಲಿಸಿದ್ದ ಪೊಲೀಸರು 10 ಮಂದಿಯನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಮುಸ್ಲಿಂ ಸಂಘಟನೆಗಳ ಕೈವಾಡ ಇರಬಹುದು ಎಂಬ ಅನುಮಾನವನ್ನು  ರಾಜ್ಯ ಸರಕಾರವೂ ವ್ಯಕ್ತಪಡಿಸಿತ್ತು. ರಾಜ್ಯದ ಬಿಜೆಪಿ ಮುಖಂಡರೂ  ಹಲವು ಸಂದರ್ಭಗಳಲ್ಲಿ  ಪ್ರಕರಣದ ಬಗ್ಗೆ ಸಿಬಿಐ ಅಥವಾ ಎನ್‌ಐಎಯಿಂದಲೇ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

Advertisement

ಪ್ರಕರಣದ ಹಿನ್ನೆಲೆ :

ಫೆ.20ರಂದು ಹರ್ಷನನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಶಿವಮೊಗ್ಗದ ಕೆಲವೆಡೆ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.  ತನಿಖೆ ಚುರುಕುಗೊಳಿಸಿದ್ದ ಪೊಲೀಸರು 10 ಮಂದಿಯನ್ನು ಬಂಧಿಸಿದ್ದರು. ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಬೆಂಗಳೂರಿಗೆ ಕರೆತರಲು ಸಿದ್ಧತೆ:

ಬಂಧಿತರನ್ನು ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲಾಗಿದೆ. ಈಗ ಅವರನ್ನು  ಬೆಂಗಳೂರಿಗೆ ಕರೆದುಕೊಂಡು ಹೋಗಲು ಪೊಲೀಸ್‌ ಇಲಾಖೆ ವಿಶೇಷ ಕ್ರಮ ಕೈಗೊಳ್ಳುತ್ತಿದೆ.

ಶಿವಮೊಗ್ಗ ಪೊಲೀಸರು ಯುಎಪಿಎ ಅನ್ವಯವೂ ಕೇಸು ದಾಖಲಿಸಿದ್ದಾರೆ. ಹೀಗಾಗಿ, ಅದು ಎನ್‌ಐಎ ವ್ಯಾಪ್ತಿಗೂ ಬರುತ್ತದೆ. ಮುಂದಿನ ತನಿಖೆ ನಿಮಿತ್ತ  ಎನ್‌ಐಎ ಶಿವಮೊಗ್ಗ  ಪೊಲೀಸರ ಜತೆಗೆ ಸಂಪರ್ಕ ಸಾಧಿಸಿದೆ. – ಆರಗ  ಜ್ಞಾನೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next