ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ಆಡಲಾದ ಕಳೆದ ವರ್ಷದ ಐಸಿಸಿ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಎನಿಸಿಕೊಂಡ ಭಾರತ ತಂಡಕ್ಕೆ ಇನ್ನೂ ಬಹುಮಾನದ ಮೊತ್ತ ಕೈಸೇರಿಲ್ಲ ಎಂಬುದು ಕೆಲವು ದಿನಗಳಿಂದ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ರವಿವಾರ ಇದಕ್ಕೆ ಸ್ಪಂದಿಸಿದ ಬಿಸಿಸಿಐ, ಈ ವಾರಾಂತ್ಯದೊಳಗೆ ಬಹುಮಾನ ಮೊತ್ತವನ್ನು ನೀಡಲಾಗುವುದು ಎಂದಿದೆ.
ಕಳೆದ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಂದ್ಯಾವಳಿ ಮುಗಿದರೂ ಬಿಸಿಸಿಐ ತನ್ನ ತಂಡಕ್ಕೆ ಇನ್ನೂ ಪಂದ್ಯದ ಸಂಭಾವನೆ ನೀಡಿಲ್ಲ ಎಂಬ “ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ಕ್ರಿಕೆಟರ್ ಅಸೋಸಿಯೇಶನ್’ (ಎಫ್ಐಸಿಎ) ಹೇಳಿಕೆಯನ್ನು ಲಂಡನ್ನಿನ “ಟೆಲಿಗ್ರಾಫ್’ ವರದಿ ಮಾಡಿತ್ತು. ಇದು ಬಿಸಿಸಿಐಗೆ ತೀವ್ರ ಮುಜುಗರ ಉಂಟುಮಾಡಿತ್ತು. ಸಂಭಾವನೆಯ ಮೊತ್ತ 5 ಲಕ್ಷ ಡಾಲರ್ ಆಗಿದೆ.
ವಿಳಂಬವಾಗಿ ಕೈಸೇರಿತ್ತು
“ಸಂಭಾವನೆಯ ಮೊತ್ತವನ್ನು ಈ ವಾರಾಂತ್ಯದೊಳಗೆ ಆಟಗಾರ್ತಿಯರು ಪಡೆಯಲಿದ್ದಾರೆ. ಈ ಮೊತ್ತ ಕಳೆದ ವರ್ಷಾಂತ್ಯವಷ್ಟೇ ನಮ್ಮ ಕೈಸೇರಿತ್ತು. ಇದನ್ನು ನೀವು ಪರಿಶೀಲಿಸಬಹುದು. ಇದರ ವಿತರಣೆಗೆ ಬಿಸಿಸಿಐ ಮೂರರಿಂದ ನಾಲ್ಕು ತಿಂಗಳು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ’ ಎಂಬುದಾಗಿ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಕೇವಲ ವನಿತೆಯರಿಗೆ ಸಂಭಾವನೆ ನೀಡುವುದೊಂದೇ ನಮ್ಮ ಜವಾಬ್ದಾರಿಯಲ್ಲ. ಪುರುಷರ ಸೆಂಟ್ರಲ್ ಕಾಂಟ್ರಾಕ್ಟ್, ಅಂತಾರಾಷ್ಟ್ರೀಯ ಪಂದ್ಯಗಳ ಫೀಸ್, ಪುರುಷರ ಹಾಗೂ ವನಿತೆಯರಿಗೆ ದೇಶಿ ಕ್ರಿಕೆಟ್ ಸಂಭಾವನೆ… ಇವೆಲ್ಲದರ ವಿತರಣೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಇಲ್ಲಿ ಪುರುಷರಿಗೆ, ವನಿತೆಯರಿಗೆ ಎಂಬ ಯಾವುದೇ ತಾರತಮ್ಯ ಇಲ್ಲ’ ಎಂದು ಅವರು ಹೇಳಿದರು.
“ಕೋವಿಡ್ ಕಾಲಕ್ಕೂ ಮೊದಲು ಮಾರ್ಚ್‌ನಲ್ಲಿ ನಮ್ಮ ದೇಶಿ ಕ್ರಿಕೆಟ್ ಸರಣಿ ಮುಗಿಯುತ್ತಿದ್ದರೂ ಸಂಭಾವನೆ ನೀಡುವಾಗ ಸೆಪ್ಟಂಬರ್ ಆಗುತ್ತಿತ್ತು’ ಎಂದೂ ಅವರು ಮಾಹಿತಿಯಿತ್ತರು.