Advertisement

ನಿಗಮ ಕೊಟ್ಟ ಸರಕಾರ ಹಣ ಕೊಡದಿರುವುದೇ? ಟೀಕಾಕಾರರಿಗೆ ಹರಿಕೃಷ್ಣ ಬಂಟ್ವಾಳ ತಿರುಗೇಟು

12:37 AM Feb 23, 2023 | Team Udayavani |

ಮಂಗಳೂರು: ರಾಜ್ಯ ಸರಕಾರವು ನಾರಾಯಣಗುರು ಅಭಿವೃದ್ಧಿ ನಿಗಮವನ್ನು ಘೋಷಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದೆ. ಇಷ್ಟು ಮಾಡಿರುವ ಸರಕಾರಕ್ಕೆ ಹಣ ಒದಗಿಸುವ ತಾಕತ್ತಿಲ್ಲವೇ. ಈವರೆಗೆ ನಿಗಮಕ್ಕಾಗಿ ಯಾವುದೇ ಧನಾತ್ಮಕ ಯತ್ನ ಮಾಡದೆ ಕೇವಲ ಹೇಳಿಕೆ ನೀಡುತ್ತಿದ್ದವರು ಈಗ ಗೊಂದಲ ಮೂಡಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ವಕ್ತಾರ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ನಾರಾಯಣಗುರು ಅಭಿವೃದ್ಧಿ ನಿಗಮವನ್ನು ವಿಳಂಬವಾಗಿ ಚುನಾವಣೆಯ ಕಾರಣಕ್ಕೆ ಘೋಷಿಸಲಾಗಿದೆ ಎಂದು ಕೆಲವರು ಆರೋಪಿಸಿರುವುದು ಸರಿಯಲ್ಲ. ನಿಗಮ ರಚನೆ ಪ್ರಕ್ರಿಯೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಆರಂಭವಾಗಿತ್ತು. ಆಗ ಆರ್ಯ ಈಡಿಗ ಸಂಘದ ನಾರಾಯಣಸ್ವಾಮಿ ಈ ಬಗ್ಗೆ ಪ್ರಯತ್ನಿಸಿದ್ದರೂ ಫ‌ಲಕಾರಿ ನೀಡಿರಲಿಲ್ಲ. ಈಗ ನಮ್ಮ ಸರಕಾರ ಘೋಷಿಸಿದೆ, ಮುಂದಕ್ಕೆ ಅನುದಾನವನ್ನೂ ಒದಗಿಸುತ್ತದೆ. ನಿಗಮ ರಚನೆಯ ಹಿಂದೆ ಅನೇಕ ವರ್ಷಗಳಿಂದ ಹೋರಾಟ ಮಾಡಿದ ಬಿಲ್ಲವ ಮುಖಂಡರು, ಸಂಘಟನೆಗಳು ಇವೆ ಎಂದರು.

ಕಾಂಗ್ರೆಸ್‌ ಮಾಡಿದ್ದೇನು?
ಕರಾವಳಿಯಲ್ಲಿ ನಾರಾಯಣಗುರು ವಸತಿ ಶಾಲೆ, ಕೋಟಿಚೆನ್ನಯ ಸೈನಿಕ ಶಾಲೆ, ಪುತ್ತೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಕೋಟಿ ಚೆನ್ನಯ ನಿಲ್ದಾಣ ಹೆಸರಿಗೆ ಅನುಮೋದನೆ, ಮಂಗಳೂರಿನ ಲೇಡಿಹಿಲ್‌ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರು ಹೀಗೆ ಎಲ್ಲವೂ ಬಿಜೆಪಿ ಸರಕಾರ ಇರುವಾಗ ಆಗಿವೆ. ಹಾಗಿದ್ದರೆ ಹಿಂದಿನ ಕಾಂಗ್ರೆಸ್‌ ಸರಕಾರ ಅವಧಿಯಲ್ಲಿ ಯಾಕೆ ಈ ಸಾಧನೆ ಮಾಡಿಲ್ಲ, ಅದನ್ನು ಯಾಕೆ ಅವರು ಪ್ರಶ್ನಿಸುವುದಿಲ್ಲ ಎಂದರು.

ಸಚಿವ ಡಾ| ಅಶ್ವತ್ಥನಾರಾಯಣ ಕ್ಷಮೆ ಕೇಳಿದ ಬಳಿಕವೂ ಸಿದ್ದರಾಮಯ್ಯ ಆರೋಪಿಸುತ್ತಲೇ ಇದ್ದಾರೆ. ಸಿದ್ದರಾಮಯ್ಯರನ್ನು ಹೊಡೆದುಹಾಕಬೇಕು ಎಂದರೆ, ಸೋಲಿಸಬೇಕು ಎಂಬ ಅರ್ಥದಲ್ಲಿ ಅಶ್ವತ್ಥನಾರಾಯಣ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಮಾಜಿ ಸಚಿವ ರಾಜ್‌ ಪಟೇಲ್‌ ಎಂಬಾತ ಪ್ರಧಾನಿ ಮೋದಿ ಅವರನ್ನು ಕೊಲ್ಲಬೇಕು ಎಂದು ಹೇಳಿರುವುದನ್ನು ಖಂಡಿಸದೆ ಇದೇ ಕಾಂಗ್ರೆಸಿಗರು ಮೌನವಾಗಿರುವುದು ಕಾಂಗ್ರೆಸಿನ ಯಾವ ನೀತಿ ಎಂದು ಹರಿಕೃಷ್ಣ ಪ್ರಶ್ನಿಸಿದರು.

ವಕ್ತಾರ ರಾಧಾಕೃಷ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣೇಶ್‌ ಹೊಸಬೆಟ್ಟು, ಸಂದೇಶ್‌ ಶೆಟ್ಟಿ, ರಣದೀಪ್‌ ಕಾಂಚನ್‌ ಉಪಸ್ಥಿತರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next