Advertisement

ಹರಿಕಥಾ ಲೋಕದ ಕೀರ್ತನ ಕೇಸರಿ ಸಂತ ಭದ್ರಗಿರಿ ಅಚ್ಯುತ ದಾಸರು 

11:08 AM May 06, 2018 | |

ಕನ್ನಡದ ಹರಿದಾಸ ಪರಂಪರೆಯನ್ನು ಶ್ರೀಮಂತಗೊಳಿಸಿದ ಹಲವು ಶ್ರೇಷ್ಠ ಕೀರ್ತನಕಾರರು ನಮ್ಮನ್ನಗಲಿದ್ದಾರೆ. ಅಂತಹವರಲ್ಲಿ ಮೇಲ್ಪಂಕ್ತಿಯ ಹೆಸರು ಕೀರ್ತನ ಕೇಸರಿ ಸಂತ ಭದ್ರಗಿರಿ ಅಚ್ಯುತ ದಾಸರದ್ದು. 

Advertisement

ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿಯ ಹೆದ್ದಾರಿ ಬದಿಯಲ್ಲಿರುವ ಭದ್ರಗಿರಿ ಎಂಬ ಹಳ್ಳಿಯಲ್ಲಿ  ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವೆಂಕಟರಮಣ ಪೈ ಮತ್ತು ರುಕ್ಮಿಣಿ ದಂಪತಿಯ ಪುತ್ರನಾಗಿ (1931 ರಲ್ಲಿ ) ಜನಿಸಿದ ಅಚ್ಯುತ ದಾಸರು ಕಲಿತದ್ದು ಕೇವಲ 3 ನೇ ತರಗತಿ ಆದರೆ ಅವರ ವಾಕ್ಚಾತುರ್ಯ ಪಿಎಚ್ಡಿ ಪದವೀಧರನಿಂದಲೂ ಸರಿಗಟ್ಟಲು ಅಸಾಧ್ಯ.

ಯಕ್ಷಗಾನದ ವಾತಾವರಣವಿದ್ದ ಬ್ರಹ್ಮಾವರದಲ್ಲಿ ಅಚ್ಯುತದಾಸರಿಗೆ ತಾನೂ ಆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹುಟ್ಟಿತ್ತಂತೆ. ಮನೆ ಸಮೀಪದಲ್ಲಿ ಎಲ್ಲೇ ಯಕ್ಷಗಾನ ವಿದ್ದರೂ ಅಚ್ಯುತ ದಾಸರು ತಂದೆಯೊಂದಿಗೆ ಅಲ್ಲಿ ಹಾಜರಿರುತ್ತಿದ್ದರಂತೆ. ಯಕ್ಷಗಾನದ ಮೂಲಕ ಪುರಾಣ ಕಥೆಗಳತ್ತ ಆಸಕ್ತರಾದ ಅವರಿಗೆ ಸಂಗೀತದಲ್ಲಿ ಹಿಡಿತ ಸಾಧಿಸಲು  ತಾಯಿಯೇ ಮೊದಲ ಗುರುವಾದರು. ತಾಯಿ ಆ ಕಾಲಕ್ಕೆ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರಂತೆ. 

ಹರಿಕಥಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಯಕ್ಷಗಾನದ ಅರ್ಥಗಾರಿಕೆಯತ್ತ ಆಸಕ್ತಿ ವಹಿಸಿದ್ದ ಅವರು ನಾಟಕ ಕ್ಷೇತ್ರಕ್ಕೂ ಕಾಲಿರಿಸಿ ರಂಗಗೀತೆಗಳನ್ನು ಹಾಡಿದ್ದರಂತೆ. ಪುರಾಣ ಪುಸ್ತಕಗಳತ್ತ ಅಪಾರ ಆಸಕ್ತಿ ಹೊಂದಿದ್ದ ಅವರು ಹಲವು ಗ್ರಂಥಗಳನ್ನು ಸಂಗ್ರಹಿಸಿ ಓದಿ ತನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು. 

ಮಲ್ಪೆ ಸಾಮಗರ ಬದಲಿಗೆ ಬಂದವರು !

Advertisement

1951 ರಲ್ಲಿ ಭದ್ರಗಿರಿಯ ಕಾಮೇಶ್ವರ ದೇವಸ್ಥಾನದಲ್ಲಿ ಹರಿಕಥಾ ಕಾಲಕ್ಷೇಪ ಆಯೋಜಿಸಲಾಗಿತ್ತು. ಅಂದಿನ ಪ್ರಖ್ಯಾತ ಕೀರ್ತನಕಾರರಾದ ಮಲ್ಪೆ ಶಂಕರನಾರಾಯಣ ಸಾಮಗರು ಕಾರ್ಯಕ್ರಮಕ್ಕೆ ಬರುವುದು ಅಸಾಧ್ಯವಾಗಿತ್ತು. ಅಂದು ಸಾಮಗರ ಬದಲಿಗೆ ಕಲಾಕ್ಷೇಪವನ್ನು ಅಚ್ಯುತ ದಾಸರು ನಡೆಸಿಕೊಟ್ಟಿದ್ದು ನೆರೆದ ಎಲ್ಲರೂ ಮೆಚ್ಚಿಕೊಂಡಿದ್ದು , ದಾಸರು ಮತ್ತೆ ಹಿಂತಿರುಗದೆ ಹರಿಕಥಾ ಕ್ಷೇತ್ರದಲ್ಲಿ  ಮೇರು ಗಿರಿಯಂತೆ ಬೆಳೆದಿದ್ದು ಈಗ ಇತಿಹಾಸಪುಟದಲ್ಲಿ ದಾಖಲಾಗಿದೆ. 

ಲೋಕಜ್ಞಾನದ ಮೂಲಕ ಕಲಿತದ್ದು ಅಪಾರ 

3 ನೇ ತರಗತಿ ಕಲಿತದ್ದಾದರೂ ಅಚ್ಯುತ ದಾಸರು ಓದಿ ತಿಳಿದದ್ದು ಅಪಾರ. ಪುಸ್ತಕದ ಹುಳುವಾಗಿದ್ದ ಅವರು ರನ್ನ , ಪಂಪ, ಕುಮಾರವ್ಯಾಸದ ಮಹಾ ಕಾವ್ಯಗಳನ್ನು ಓದಿ ಪೌರಾಣಿಕ ಕಥೆಗಳಲ್ಲಿ ಅಪಾರ ಹಿಡಿದ ಸಾಧಿಸಿಕೊಂಡಿದ್ದರು. 

ಕಂಚಿನ ಕಂಠ 

ಕಂಚಿನ ಕಂಠದ ಕೀರ್ತನೆ ಗಳಿಂದ ದಾಸವರೇಣ್ಯರ ಕೀರ್ತನೆಗಳನ್ನು , ಭಾವಪೂರ್ಣವಾಗಿ  ಬದುಕಿನ ಮೌಲ್ಯಗಳೊಂದಿಗೆ ಶೋತ್ರುಗಳಿಗೆ ತಲುಪಿಸಿದ್ದ  ಕೀರ್ತಿ ಅಚ್ಯುತ ದಾಸರದ್ದು. ಅವರ ಕಲಾಕ್ಷೇಪಗಳಿಗೆ ಅಪಾರ ಸಂಖ್ಯೆಯ ಪ್ರೇಕ್ಷಕರು ಆಕರ್ಷಿತರಾಗಲೂ ಅವರು ಪ್ರಸ್ತುತಿಯೆ ಪ್ರಮುಖ ಎನ್ನುತ್ತಾರೆ ಅವರ ಅಭಿಮಾನಿಗಳು ಮತ್ತು ಭಕ್ತರು. 

ಹಾಸ್ಯ ಆಕರ್ಷಣೆ 

 ತನ್ನ ಕಲಾಕ್ಷೇಪದಲ್ಲಿ ಕಥೆಯನ್ನು ಸಪ್ಪೆಯಾಗಲು ಎಂದೂ ಆಸ್ಪದ ನೀಡುತ್ತಿರಲಿಲ್ಲ.ನಡು ನಡುವೆ ಹಾಸ್ಯದ ಮೂಲಕ , ಹಲವು ಉಪಕಥೆಗಳು, ನಗೆ ಚಟಾಕಿಗಳನ್ನು ಸೇರಿಸಿ ,ಲೌಕಿಕ , ಪ್ರಸ್ತುತ ಬದಲಾಗುತ್ತಿರುವ ಬದುಕನ್ನು ಅವರು ಲೇವಡಿ ಮಾಡುತ್ತಿದ್ದರು. 2010 ರಲ್ಲಿ ಉಡುಪಿಯಲ್ಲಿ  ನಡೆದ ಕಾರ್ಯಕ್ರಮವೊಂದರಲ್ಲಿ   ಕಪ್ಪು ಅಂತ ಹೀಗಳೆಯದಿರಿ ಎಲ್ಲವೂ ಕಪ್ಪು ನಮಗೆ ಬೇಡವಾಗದ ಕಪ್ಪು ಎಂದರೆ ಅದು ಕಪ್ಪು ಹಣ ಮಾತ್ರ ಎಂದಿದ್ದರು. 

ಬಹು ಭಾಷಾ ವಲ್ಲಭ 

ಮಾತೃ ಭಾಷೆ ಕೊಂಕಣಿ, ಕನ್ನಡ, ಹಿಂದಿ , ಮರಾಠಿ , ತುಳುವಿನಲ್ಲಿ ಉತ್ತಮ ಹಿಡಿತ ಹೊಂದಿದ್ದ ಅವರು ಈ ಎಲ್ಲಾ ಭಾಷೆಗಳಲ್ಲಿ ದೇಶದ ಉದ್ದಗಲಕ್ಕೆ ಕಲಾಕ್ಷೇಪಗಳನ್ನು ನಡೆಸಿಕೊಟ್ಟಿದ್ದಾರೆ. 

ಕೋಟ್ಯಂತರ ಜನರು ಅವರ ಕೀರ್ತನೆಗಳನ್ನು ಕೇಳುತ್ತಾ ಭಾವಪರವಶವಾಗಿ ತಮ್ಮನ್ನು ತಾವು ಮರೆತವರಿದ್ದಾರೆ. ಹಲವರು ಕ್ಯಾಸೆಟ್ಗಳು ಧ್ವನಿ ಮುದ್ರಣಗೊಂಡಿದ್ದು ಇಂದಿಗೂ ಅವುಗಳನ್ನು ಆಲಿಸಿ ದಾಸ ಶ್ರೇಷ್ಠರನ್ನು ಸ್ಮರಿಸುವವರಿದ್ದಾರೆ. 

1956 ರಲ್ಲಿ ಕಾಶೀ ಮಠಾಧೀಶರಾದ ಬ್ರಹೈಕ್ಯ ಶ್ರೀ ಸುಧೀಂದ್ರ ತೀರ್ಥರು ಉಡುಪಿಯಲ್ಲಿ ಚಾತುರ್ಮಾಸ ವೃತ ಕೈಗೊಂಡಿದ್ದಾಗ ನಿರಂತರ ಕಥಾ ಕಲಾ ಕ್ಷೇಪವನ್ನು ಅಚ್ಯುತದಾಸರು ನಡೆಸಿಕೊಟ್ಟಿದ್ದರು. ಅವರ ಪಾಂಡಿತ್ಯಕ್ಕೆ ಬೆರಗಾಗಿದ್ದ ಶ್ರೀಗಳು ದಂಡಿಗೆ ಬೆತ್ತದ ಹಾಸ ದೀಕ್ಷೆ ನೀಡಿ ಚಕ್ರಾಂಕಪೂರ್ವಕ ಮೂಲನಾರಾಯಣ ಎಂಬ ಬಿರುದನ್ನು ನೀಡಿದ್ದರು. 

ಮೂಲನಾರಾಯಣ ಎಂಬ ಅಂಕಿತನಾಮದಲ್ಲಿ ಅಚ್ಯುತದಾಸರು ನೂರಾರು ಕೀರ್ತನೆಗಳು ಮತ್ತು ಸುಳಾದಿಗಳನ್ನು ರಚಿಸಿದ್ದರು. 

1964 ರಲ್ಲಿ ರಾಜ್ಯಮಟ್ಟದ ಕೀರ್ತನಕಾರರ ಸಮ್ಮೇಳನ, 1965 ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಕೀರ್ತನಕಾರರನ್ನು ಒಗ್ಗೂಡಿಸಿ ರಾಷ್ಟ್ರಮಟ್ಟದ ಸಮ್ಮೇಳನ ನಡೆಸಿ ಅಂದಿನ ರಾಷ್ಟ್ರಪತಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರಿಂದ ಉದ್ಘಾಟಿಸಿದ ಶ್ರೇಯಸ್ಸು ಅಚ್ಯುತ ದಾಸರದ್ದು. 

ಹಲವು ಪ್ರಶಸ್ತಿಗಳು, ಸನ್ಮಾನಗಳು 
ಕರ್ನಾಟಕ ಸರ್ಕಾರದ ಕನಕ ಪುರಂದರ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ , ಕಾಶಿ ಮಠದ ಕೀರ್ತನಾಗ್ರೇಸರ ಬಿರುದು, ಗೋಕರ್ಣ ಪರ್ತಗಾಳಿ ಮಠದ ಕೀರ್ತನಾಚಾರ್ಯ ಬಿರುದು ಸೇರಿದಂತೆ ಹಲವು ಮಠ ಮಂದಿರಗಳಲ್ಲಿ ಅಭಿನಂದನೆಗಳು , ಸಾವಿರಾರು ಸನ್ಮಾನಗಳು ಕೀರ್ತಿ ಶೇಷ ಅಚ್ಯುತ ದಾಸರಿಗೆ ಸಂದಿವೆ. 

ಇವರ ಸಹೋದರ ದಿವಂಗತ ಕೇಶವ ದಾಸ ಅವರೂ ಕೀರ್ತನಕಾರರಾಗಿ ಪ್ರಖ್ಯಾತಿಯನ್ನು ಪಡೆದು ಸಹೋದರನಿಗೆ ಸಮನಾಗಿ ಬೆಳೆದವರು . 

ಅಸಂಖ್ಯಾತ ಜನರ ಅಭಿಮಾನಕ್ಕೆ ಪಾತ್ರರಾದ ಸಂತ ಶ್ರೇಷ್ಠ ಎನಿಸಿಕೊಂಡ ಕೀರ್ತನಕಾರ ಅಚ್ಯುತದಾಸರು ತನ್ನ 83 ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿ ಹರಿ ಪಾದವನ್ನು ಸೇರಿದರು. ಇಂದಿಗೂ ಹಲವು ಕೀರ್ತನಕಾರರಿಗೆಲ್ಲರಿಗೂ ಅವಿಸ್ಮರಣೀಯ. ಅವರ ಕೆಲ ಕೀರ್ತನೆಗಳು ಆಸಕ್ತರಿಗೆ ಜಾಲತಾಣವಾದ ಯೂಟ್ಯೂಬ್‌ ನಲ್ಲಿ ಲಭ್ಯವಿದೆ. ಹಲವು ಕ್ಯಾಸೆಟ್ಗಳು ಮಾರುಕಟ್ಟೆಗೆ ಬಂದಿವೆ. 

Advertisement

Udayavani is now on Telegram. Click here to join our channel and stay updated with the latest news.

Next