ಹರಿಹರ: ಹೈರಿಸ್ಕ್ ಪ್ರದೇಶದಿಂದ ಆಗಮಿಸಿದ್ದ ನಾಲ್ವರನ್ನು ಕ್ವಾರಂಟೈನ್‌ನಲ್ಲಿಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಪರ್ಯಾಯ ಸ್ಥಳ ಹುಡುಕಲು ಅಧಿಕಾರಿಗಳು ಹರಸಾಹಸಪಟ್ಟ ಘಟನೆ ನಗರದಲ್ಲಿ ಭಾನುವಾರ ನಡೆಯಿತು.
ಗುಜರಾತ್‌ನಲ್ಲಿದ್ದ ಇಲ್ಲಿನ ಇಂದಿರಾನಗರದ ನಿವಾಸಿಗಳಾದ ಪತಿ, ಪತ್ನಿ ಹಾಗೂ ಮಗ ಶನಿವಾರ ವಾಪಸ್ ಬಂದಿದ್ದರು. ಇದೇ ರೀತಿ ಮತ್ತೊಬ್ಬ ವ್ಯಕ್ತಿ ಸಹ ಮಹಾರಾಷ್ಟ್ರದಿಂದ ನಗರಕ್ಕೆ ಆಗಮಿಸಿದ್ದರು. ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಕೋವಿಡ್‌ನ ಹೈರಿಸ್ಕ್ ಪ್ರದೇಶವೆಂದು ಗುರುತಿಸಲಾಗಿದೆ. ಹಾಗಾಗಿ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ಈ ನಾಲ್ವರನ್ನು ನಿಯಮಾವಳಿಯಂತೆ ಸಾಂಸ್ಥಿಕ ನಿಗಾವಣೆಯಲ್ಲಿಡಲು ನಗರ ಹೊರವಲಯದ ಗುತ್ತೂರು ಗ್ರಾಮದ ಸರ್ಕಾರಿ ಹಾಸ್ಟೆಲ್ ನಲ್ಲಿಡಲು ಕರೆದೊಯ್ದರು.
ಅಷ್ಟರಲ್ಲಿ ಸುದ್ದಿ ತಿಳಿದು ಸ್ಥಳದಲ್ಲಿ ಜಮಾಯಿಸಿದ್ದ ಗುತ್ತೂರು ಗ್ರಾಮಸ್ಥರು, ಶಂಕಿತರನ್ನು ಇಲ್ಲಿಡುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಮಾಜಿ ಶಾಸಕ ಬಿ.ಪಿ. ಹರೀಶ್ ಹಾಗೂ ಶಾಸಕ ಎಸ್. ರಾಮಪ್ಪ ಜನರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಡಿಆರ್‌ಆರ್ ತುಕಡಿಯನ್ನು ಸ್ಥಳಕ್ಕೆ ಕರೆಸಲಾಗಿತ್ತು. ನಂತರ ಅಧಿಕಾರಿಗಳ ತಂಡ ಕೊಂಡಜ್ಜಿ ಗ್ರಾಮದ ಸರ್ಕಾರಿ ಹಾಸ್ಟೆಲ್‌ನತ್ತ ಹೆಜ್ಜೆ ಹಾಕಿತು. ಆದರೆ ಗ್ರಾಮದ ದ್ವಾರಬಾಗಿಲಿಗೆ ಬೈಕ್‌ಗಳನ್ನು ಅಡ್ಡವಾಗಿಟ್ಟ ಗ್ರಾಮಸ್ಥರು, ಗ್ರಾಮದೊಳಗೆ ಕಾಲಿಡುವಂತಿಲ್ಲ ಎಂದು ತಾಕೀತು ಮಾಡಿದರು. ಕೊನೆಗೆ ಅಧಿಕಾರಿಗಳು ಈ ನಾಲ್ವರನ್ನು ನಗರದ ಲಾಡ್ಜೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇಡಬೇಕಾಯಿತು.
ಅನ್ಯ ರಾಜ್ಯಗಳಿಂದ ಬಂದಿರುವ ನಾಲ್ವರು ಕೋವಿಡ್ ಅಧಿಕವಾಗಿ ಬಾಧಿಸುತ್ತಿರುವ ಪ್ರದೇಶದಿಂದ ಬಂದವರೆಂಬ ಕಾರಣಕ್ಕೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಗುತ್ತೂರು ಹಾಸ್ಟೆಲ್ ಅನ್ನು ತಾಲೂಕಿನ ನಿಗಾವಣೆ ಕೇಂದ್ರವಾಗಿ ಘೋಷಿಸಲಾಗಿದೆ. ಜನರು ವದಂತಿಗಳನ್ನು ನಂಬಿ ಕ್ವಾರಂಟೈನ್‌ಗೆ ವಿರೋಧಿಸುತ್ತಿರುವುದು ವಿಪರ್ಯಾಸ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಮೋಹನ್ ಬೇಸರ ವ್ಯಕ್ತಪಡಿಸಿದರು. ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಶಿವಪ್ರಸಾದ್, ಪಿಎಸ್‌ಐ ರವಿಕುಮಾರ್ ಇತರರು ಇದ್ದರು.