Advertisement

ಭತ್ತ ಬೆಳೆಗಾರರಿಗೆ ಮರೀಚಿಕೆಯಾದ ಬೆಂಬಲ ಬೆಲೆ

11:31 AM May 29, 2020 | Naveen |

ಹರಿಹರ: ಲಾಕ್‌ಡೌನ್‌ನಿಂದ ಭತ್ತದ ಬೆಲೆ ಪಾತಾಳಕ್ಕಿಳಿದಿದ್ದು, ಸಂಕಷ್ಟ ಸಮಯದಲ್ಲಿ ಸರ್ಕಾರ ಘೋಷಿಸಿದ್ದ ಕನಿಷ್ಠ ಬೆಂಬಲ ಬೆಲೆಯೂ ಸಿಗದೆ ಜಿಲ್ಲೆಯ ಭತ್ತ ಬೆಳೆಗಾರರು ಕಣ್ಣೀರಿಡುವಂತಾಗಿದೆ.

Advertisement

ಬೇಸಿಗೆ ಹಂಗಾಮಿಗೆ ಜಿಲ್ಲೆಯ 55 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು, ಅಂದಾಜು 25 ಲಕ್ಷ ಕ್ವಿಂಟಲ್‌ಗ‌ೂ ಅಧಿಕ ಉತ್ಪನ್ನ ಬಂದಿದೆ. ಆದರೆ ಕಳೆದ ಅವಧಿಯಲ್ಲಿ ಕ್ವಿಂಟಲ್‌ಗೆ 2 ಸಾವಿರಕ್ಕೂ ಹೆಚ್ಚಿದ್ದಬೆಲೆ ಈಗ ಕೇವಲ 1350 ರಿಂದ 1600 ರೂ.ಗೆ ಇಳಿದಿದೆ. ಕಳೆದ ಡಿಸೆಂಬರ್‌ನಲ್ಲಿ ಮಳೆಗಾಲದ ಬೆಳೆಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ಘೋಷಿಸಿದ್ದ 1815 ರೂ. ಬೆಂಬಲ ಬೆಲೆಯನ್ನೇ ಪ್ರಸಕ್ತ ವರ್ಷದ ಬೇಸಿಗೆ ಬೆಳೆಗೂ ಮುಂದುವರಿಸಲಾಗಿದೆ. ಮಾಹಿತಿ ಕೊರತೆ ಹಾಗೂ ಖರೀದಿ ಕೇಂದ್ರಗಳ ಗೊಂದಲದಿಂದಾಗಿ ಜಿಲ್ಲೆಯ ಶೇ.1 ರಷ್ಟು ರೈತರಿಗೂ ಅದರ ಫಲ ದೊರೆತಿಲ್ಲ. ಜಿಲ್ಲಾದ್ಯಂತ ಮೇ 28 ರವರೆಗೆ ಕೇವಲ 127 ಜನರ ರೈತರು 3740 ಕ್ವಿಂಟಲ್‌ ಭತ್ತ ಖರೀದಿಗೆ ನೋಂದಣಿ ಮಾಡಿಸಿದ್ದರೂ ಕೇವಲ 680 ಕ್ವಿಂಟಲ್‌ ಮಾತ್ರ ಖರೀದಿಯಾಗಿದೆ.

ಕಾಟಾಚಾರದ ಖರೀದಿ: ಜಿಲ್ಲೆಯಲ್ಲಿ ಹಿಂಗಾರು ಭತ್ತ ಕಟಾವು ಅರ್ಧದಷ್ಟು ಮುಗಿದ ನಂತರ ವಿಳಂಬವಾಗಿ ಅಂದರೆ ಮೇ 15 ರಂದು ಸರ್ಕಾರ ಭತ್ತ ಖರೀದಿಗೆ ಆದೇಶಿಸಿದೆ. ಅದರಲ್ಲೂ ಜಿಲ್ಲೆಯಲ್ಲಿ ಮತ್ತೆ 7-8 ದಿನ ತಡವಾಗಿ ನೋಂದಣಿ ಆರಂಭಿಸಲಾಗಿದೆ. ಎಪಿಎಂಸಿಗಳಲ್ಲಿ ಹೆಸರಿಗಷ್ಟೇ ಖರೀದಿ ಕೇಂದ್ರಗಳಿದ್ದು, ಅಲ್ಲಿ ನೋಂದಣಿ ಮಾತ್ರ ಮಾಡಲಾಗುತ್ತದೆ. ಫ್ರೂಟ್ಸ್‌ ಐಡಿ ನಂಬರ್‌ ಪಡೆಯಲು ಕೃಷಿ ಇಲಾಖೆಗೆ, ಮಾದರಿ ಪರೀಕ್ಷೆಗೆ ಹಾಗೂ ಅಕ್ಕಿ ಮಾರಾಟಕ್ಕೆ ದೂರದ ಅಕ್ಕಿ ಗಿರಣಿಗಳಿಗೆ ರೈತರು ಅಲೆದಾಡಬೇಕಿದೆ. ಖರೀದಿ ಕೇಂದ್ರಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಪ್ರಚಾರ ಮಾಡಿಲ್ಲ, ಏನಾದರೂ ಮಾಹಿತಿ ಕೇಳಿದರೂ ಕೃಷಿ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎನ್ನುತ್ತಾರೆ. ಎಪಿಎಂಸಿ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯತ್ತ ಕೈ ತೋರಿಸುತ್ತಾರೆ. ಅಕ್ಕಿ ಗಿರಣಿಗಳ ನಿಗದಿ  ಮಾಡುವಲ್ಲೂ ಅಧಿಕಾರಿಗಳು ನಿರಾಸಕ್ತಿ ತೋರಿದ್ದು, ಭತ್ತವನ್ನು ಎಲ್ಲಿಗೆ ಸಾಗಿಸಬೇಕೆಂಬುದೇ ಗೊಂದಲವಾಗಿದೆ ಎಂಬುದು ರೈತರ ಆರೋಪ.

ಹರಿಹರದಲ್ಲಿ ಮೇ 22ರಿಂದ ನೊಂದಣಿ ಆರಂಭಿಸಲಾಗಿದೆ. ಕೇಂದ್ರದಲ್ಲಿ ಭತ್ತ ತೇವಾಂಶ ಮಾಪಕವೂ ಇಲ್ಲ. ದೂರದ ಹೊನ್ನಾಳಿ ಮಿಲ್‌ಗ‌ಳಿಗೆ ಭತ್ತ ಸಾಗಿಸಲು ಸೂಚಿಸಲಾಗುತ್ತಿದೆ. 30 ರೂ.ಗೆ ಚೀಲ ಕೊಂಡು ನಮ್ಮದೇ ಖರ್ಚಿನಲ್ಲಿ ಸಾಗಿಸಬೇಕು. ಅಲ್ಲೇನಾದರೂ ಗುಣಮಟ್ಟ ಕೊರತೆ ಇದೆ ಎಂದರೆ ಮತ್ತೆ ವಾಪಾಸ್‌ ತಂದು ನಷ್ಟ ಮಾಡಿಕೊಳ್ಳಬೇಕಾಗಿದೆ ಎಂದು ಭತ್ತ ಬೆಳೆಗಾರ ಬೆಣ್ಣೆ ಹಾಲಪ್ಪರ ರಾಜು ಬಿಳಸನೂರು ಅವರ ಅಳಲು.

ನೋಂದಣಿಗೆ ನಾಡಿದ್ದೇ ಕೊನೆ ದಿನ
ಬೆಂಬಲ ಬೆಲೆ ಖರೀದಿಗೆ ನೊಂದಾಯಿಸಲು ಮೇ 31 ಕಡೆ ದಿನವಾಗಿದ್ದು, ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಯಾವುದೇ ತಳಿಯ ಭತ್ತವಿದ್ದರೂ ಕನಿಷ್ಠ 1815 ರೂ. ಕನಿಷ್ಠ ಬೆಲೆಯಿದೆ. 50 ಕೆಜಿ ಸಾಮರ್ಥ್ಯದ ಗೋಣಿ ಚೀಲದಲ್ಲಿ ರೈತರು ನಿಗ ದಿತ ಅಕ್ಕಿ ಗಿರಣಿಗೆ ಸ್ವಂತ ಖರ್ಚಿನಲ್ಲಿ ಭತ್ತ ಸಾಗಿಸಬೇಕು. 7-8 ದಿನಗಳಲ್ಲಿ ರೈತರಿಗೆ ಹಣ ಜಮಾ ಮಾಡಲಾಗುತ್ತಿದೆ. ಎಕರೆಗೆ 16 ಕ್ವಿಂಟಲ್‌ನಂತೆ ಒಬ್ಬ ರೈತ ಗರಿಷ್ಟ 40 ಕ್ವಿಂಟಲ್‌ ಮಾರಾಟ ಮಾಡಬಹುದಾಗಿದೆ. ಭತ್ತದ ಬೆಲೆ ಇಳಿಮುಖಯಾಗಿದ್ದು, ರೈತರು ಯೋಜನೆ ಸದ್ಬಳಕೆ ಮಾಡಿಕೊಂಡು ನಷ್ಟದಿಂದ ಪಾರಾಗಬೇಕು ಎಂದು ಆಹಾರ ಇಲಾಖೆ (ಭತ್ತ ಸಂಗ್ರಹಣಾ ಏಜೆನ್ಸಿ) ಜೆಡಿ ಮಾಂಟೆಸ್ವಾಮಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next