ಹರಿಹರ: ನಗರದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಿಮಿತ್ತ ಮಧ್ಯಾಹ್ನದ ನಂತರ ಅಂಗಡಿ ಬಂದ್ ಮಾಡಬೇಕೆಂಬ ನಿರ್ಣಯಕ್ಕೆ ಬಹುತೇಕ ವರ್ತಕರು ಅಸಹಕಾರ ತೋರಿದ್ದು, ಗುರುವಾರ ಎಂದಿನಂತೆ ವ್ಯಾಪಾರ-ವಹಿವಾಟು ನಡೆದವು.
ಕೆಲವೇ ಕೆಲವು ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿಕೊಂಡು ತೆರಳಿದರೆ, ಬಹುತೇಕ ವ್ಯಾಪಾರಸ್ಥರು ಮಧ್ಯಾಹ್ನದ ನಂತರವೂ ತಮ್ಮ ವ್ಯಾಪಾರ- ವಹಿವಾಟು ನಡೆಸಿದರು. ಅಂಗಡಿ ಬಂದ್ ಮಾಡಿದರೆ ಬಾಡಿಗೆ ಕಟ್ಟುವುದು ತಪ್ಪುವುದಿಲ್ಲ, ಹಿಂದೆ 2 ತಿಂಗಳ ಲಾಕ್ ಡೌನ್‌ನ ಆರ್ಥಿಕ ಭಾರದಿಂದ ಇನ್ನೂ ಹೊರ ಬಂದಿಲ್ಲ. ಹೀಗಿದ್ದಾಗ ಮತ್ತೆ ಅಂಗಡಿ ಮುಚ್ಚಿದರೆ ಬಾಡಿಗೆ ಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂಬುದು ಕೆಲವು ವ್ಯಾಪಾರಿಗಳ ವಾದ. ಮತ್ತೆ ಕೆಲವರು ಹಳ್ಳಿಗಾಡಿನ ಜನರಿಗೆ ಮೊದಲೇ ಸರಿಯಾಗಿ ಬಸ್ ಸೌಕರ್ಯವಿಲ್ಲ, ಮಧ್ಯಾಹ್ನದ ನಂತರ ಮಾಡಿದರೆ ಅವರಿಗೆ ತೊಂದರೆಯಾಗುತ್ತದೆ ಎಂಬ ವಾದ ಮುಂದಿಟ್ಟರು.
ಮಾಹಿತಿ ಇಲ್ಲ: ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಬುಧವಾರ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ವರ್ತಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂಪ್ರೇರಿತವಾಗಿ ವ್ಯಾಪಾರ ಬಂದ್ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ಸಭೆಗೆ ನಗರದ ಎಲ್ಲಾ ವರ್ತಕ ಸಂಘಟನೆಗಳನ್ನು ಆಹ್ವಾನಿಸಿಲ್ಲ, ಬಹುತೇಕ ವರ್ತಕರಿಗೆ ನಿರ್ಣಯದ ಬಗ್ಗೆ ಮಾಹಿತಿಯೇ ಇಲ್ಲ. ಎಲ್ಲಾ ವರ್ತಕರ ಸಂಘದವರ ವಿಶ್ವಾಸ ಪಡೆದು ಪೂರ್ವಸಿದ್ಧತೆ ಮಾಡಿದ್ದರೆ ಉತ್ತಮ ಸ್ಪಂದನೆ ಸಿಗುತ್ತಿತ್ತು ಎಂದು ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಉಪಾಧ್ಯ ಪ್ರತಿಕ್ರಿಯಿಸಿದರು. ಒಟ್ಟಿನಲ್ಲಿ ನಗರದಲ್ಲಿ ಪಾಸಿಟಿವ್ ಕೇಸ್‌ಗಳು ಪತ್ತೆಯಾದ ನಂತರ ಗ್ರಾಮೀಣ ಭಾಗದ ಬಹುತೇಕ ಜನರು ನಗರದ ಕಡೆಗೆ ಸುಳಿಯುತ್ತಿಲ್ಲ. ಇದರಿಂದಾಗಿ ನಗರದ ವ್ಯಾಪಾರ-ವಹಿವಾಟು ಕ್ಷೀಣಿಸಿದೆ ಎನ್ನಲಾಗುತ್ತಿದೆ.
2 ತಿಂಗಳ ಲಾಕ್‌ಡೌನ್‌ನ ಆರ್ಥಿಕ ಭಾರದಿಂದ ಇನ್ನೂ ಹೊರಬಂದಿಲ್ಲ. ಮಳಿಗೆಗಳ ಬಾಡಿಗೆ ಕಟ್ಟಲು ಸಾಲ ಮಾಡಿದ್ದೇವೆ. ಲಾಕ್‌ಡೌನ್ ತೆರವುಗೊಂಡ ನಂತರ ಚೇತರಿಸಿಕೊಳ್ಳುತ್ತಿದ್ದೇವೆ. ಸಣ್ಣ,ಪುಟ್ಟ ವ್ಯಾಪಾರಿಗಳ ಕಷ್ಟವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.
ಹೆಸರು ಹೇಳಲಿಚ್ಛಿಸದ ವ್ಯಾಪಾರಿ