ಬೆಂಗಳೂರು: ಮದುವೆಯಾಗುವಂತೆ ಪೀಡಿಸುತ್ತಿದ್ದ ಸಹೋದ್ಯೋಗಿಯ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬರು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಪಂಗಿರಾಮನಗರದಲ್ಲಿ ನಡೆದಿದ್ದು, ಈ ಸಂಬಂಧ ದೊಮ್ಮಲೂರಿನ ಬಿಡಿಎ ಲೇಔಟ್ ನಿವಾಸಿ ಕಿರಣ್ ಕುಮಾರ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಮೀರಾ (22- ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಗಂಭೀರ ಸ್ಥಿತಿಯಲ್ಲಿರುವ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಕಿರಣ್ ಕುಮಾರ್‌ಗೆ ಈಗಾಗಲೇ ಮದುವೆಯಾಗಿದೆ. ಹಾಗಿದ್ದರೂ ತಾನು ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಳ್ಳುವಂತೆ ನಿತ್ಯ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಂಗಿರಾಮನಗರದಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಸಮೀರಾ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅದೇ ಕಂಪೆನಿಯಲ್ಲಿ ಒಂದು ವರ್ಷಗಳಿಂದ ಕೆಲಸ ಮಾಡುತ್ತಿರುವ ಆರೋಪಿ ಕಿರಣ್ ಕುಮಾರ್, ಸಮೀರಾರನ್ನು ಪ್ರೀತಿಸುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ, ಸಮೀರಾ ನಿರಾಕರಿಸಿದ್ದರು. ಆದರೂ ಸುಮ್ಮನಾಗದ ಕಿರಣ್, ಕೆಲ ದಿನಗಳ ಹಿಂದೆ ಸಮೀರಾ ಮನೆಗೆ ತೆರಳಿ ಆಕೆಯ ಪೋಷಕರ ಬಳಿ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ.
ಆದರೆ, ಆತನಿಗೆ ಈಗಾಗಲೇ ಮದುವೆಯಾಗಿರುವುದರಿಂದ ಪೋಷಕರು ಕೂಡ ನಿರಾಕರಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಆರೋಪಿ ಸಮೀರಾಗೆ ನಿತ್ಯ ಕಚೇರಿಯಲ್ಲಿ ಕಿರುಕುಳ ನೀಡುತ್ತಿದ್ದ. ಅಲ್ಲದೆ, “ನನ್ನನ್ನು ಪ್ರೀತಿಸಿ ನೀನು ಬೇರೆಯವರನ್ನು ಮದುವೆಯಾಗಿ ಹೇಗೆ ಬದುಕುತ್ತಿಯಾ? ಅದಕ್ಕಿಂತಲೂ ಸಾಯುವುದೇ ಮೇಲು’ ಎಂದು ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ.
ಇದರಿಂದ ಬೇಸತ್ತ ಸಮೀರಾ ಫೆ.27ರಂದು ಸಂಜೆ 5.45ರ ಸುಮಾರಿಗೆ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸಹೋದ್ಯೋಗಿಗಳು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸಮೀರಾ ತಾಯಿ ದೂರು ನೀಡಿದ್ದು ಸಂಪಂಗಿರಾಮನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.