ಹರಪನಹಳ್ಳಿ: ಕೆರೆ ಏರಿಯಿಂದ ಕೆಳಗೆ ಜಾರುತ್ತಿದ್ದ ಸಾರಿಗೆ ಬಸ್ಸನ್ನು ಚಾಲಕನ ಸಮಯ ಪ್ರಜ್ಞೆಯಿಂದ ನಿಲ್ಲಿಸಿ ದೊಡ್ಡ ಅನಾಹುತವನ್ನು ತಪ್ಪಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ ಅನೇಕರು ಪಾರಾದ ಘಟನೆ ತಾಲೂಕಿನ ಅಲಮರಸಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಹರಪನಹಳ್ಳಿ ಘಟಕದ ಬಸ್ ಕಾಲೇಜು ವಿದ್ಯಾರ್ಥಿಗಳನ್ನು ಹೊತ್ತು ಮಾಡ್ಲಗೇರಿ ತಾಂಡದಿಂದ ಹರಪನಹಳ್ಳಿ ಕಡೆಗೆ ಬೆಳಿಗ್ಗೆ 10 ಗಂಟೆಗೆ ಸಂಚರಿಸುತ್ತಿತ್ತು.
ಅಲಮರಸಿಕೇರಿ ಗ್ರಾಮದ ಕೆರೆಯ ಏರಿಯ ತಿರುವಿನಲ್ಲಿ ಎದುರಿಗೆ ವಾಹನಗಳು ಬಂದಿದ್ದರಿಂದ ಚಾಲಕ ಬಲಭಾಗಕ್ಕೆ ಬಸ್ ಕೊಂಡೊಯ್ಯಬೇಕಾಯಿತು, ಆಗ ನಿಯಂತ್ರಣ ತಪ್ಪಿದ ಬಸ್ಸು ಕೆರೆ ಏರಿಯಿಂದ ಕೆಳಗೆ ಜಾರಲಾರಂಭಿಸಿತು, ಕೂಡಲೇ ಎಚ್ಚೆತ್ತುಕೊಂಡ ಚಾಲಕ ಮೌನೇಶ ಬಸ್ ನಿಲ್ಲಿಸಿ ವಿದ್ಯಾರ್ಥಿಗಳ ಸಹಿತ 3೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೆಳಗಿಳಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ ಎಂದು ಬಸ್ಸಿನ ಪ್ರಯಾಣಿಕರು ತಿಳಿಸಿದ್ದಾರೆ.
ಗೌರಿಹಳ್ಳಿ ಕ್ರಾಸ್ ನಿಂದ ಮಾಡ್ಲಗೇರಿ ತಾಂಡದವರೆಗೆ ಡಾಂಬರ್ ರಸ್ತೆ ಕಾಮಗಾರಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು, ಆದರೆ ಗುತ್ತಿಗೆದಾರರು ರಸ್ತೆ ಕಾಮಗಾರಿ ಅಪೂರ್ಣ ಮಾಡಿ ತಡೆಗೋಡೆ ನಿರ್ಮಿಸದೆ ಹಾಗೆ ಬಿಟ್ಟಿರುವ ಪರಿಣಾಮ ಇಂತಹ ಘಟನೆಗಳು ಸಂಭವಿಸಲಿವೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಹಾಗೂ ಕೂಡಲೇ ಕೆರೆ ಏರಿಯ ಮೇಲೆ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮದ ಮುಖಂಡ ಎಂ.ಕೋಟೆಪ್ಪ ಒತ್ತಾಯಿಸಿದ್ದಾರೆ.