Advertisement
ಗಿನ್ನೆಸ್ ದಾಖಲೆ1942ರ ಜುಲೈ 7ರಂದು ಜನಿಸಿದ ರಿಶಿಯವರಿಗೆ, ಬಾಲ್ಯದಿಂದಲೇ ಸಾಹಸ ಗಳನ್ನು ಮಾಡಿ ದಾಖಲೆ ವೀರನಾಗಬೇಕು ಎಂಬ ಹಂಬಲವಿತ್ತು. ಮೊದಲ ಬಾರಿಗೆ ಅದು ಸಾಧ್ಯವಾಗಿದ್ದು 1991ರಲ್ಲಿ. ಅತಿ ದೀರ್ಘ ಸಮಯ, ಸ್ಕೂಟರ್‌ನಿಂದ ಕೆಳಗಿಳಿಯದೆ ಪ್ರಯಾಣ ಮಾಡುವ ಸಾಹಸ ಕಾರ್ಯ ಕೈಗೊಂಡಿದ್ದರು.
ಮೈಮೇಲೆ ಜಾಗತಿಕ ನಾಯಕರ ಹಚ್ಚೆ
ರಿಶಿ ಅವರಿಗೆ ಹಚ್ಚೆಯ ಗೀಳು ಕೂಡಾ ಇದೆ. ದೇಹವಿಡೀ ಹಚ್ಚೆ ಹಾಕಿಸಿಕೊಳ್ಳುವ ಮೂಲಕವೂ ರಿಶಿ ಜಾಗತಿಕ ದಾಖಲೆಯ ಗೌರವ ಗಳಿಸಿದ್ದಾರೆ. ಅವರ ಶರೀರದಲ್ಲಿ 150ಕ್ಕೂ ಹೆಚ್ಚಿನ ರಾಷ್ಟ್ರಧ್ವಜಗಳ ಹಚ್ಚೆ ಇವೆ. ಅದಷ್ಟೇ ಅಲ್ಲದೆ 2985 ಅಕ್ಷರಗಳು ಮತ್ತು ಜಾಗತಿಕ ನಾಯಕರ ಭಾವಚಿತ್ರಗಳನ್ನೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇವರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಇಂಗ್ಲೆಂಡಿನ ಎಲಿಜಬೆತ್ ರಾಣಿ ಮೊದಲಾದವರಿದ್ದಾರೆ. ದೇಹದೆಲ್ಲೆಡೆ ಹಚ್ಚೆ ಹಾಕಿಸಿಕೊಂಡಿರುವ ಅವರು ಬೆನ್ನನ್ನು ಮಾತ್ರ ಖಾಲಿ ಬಿಟ್ಟಿದ್ದಾರೆ. ಆ ಭಾಗದಲ್ಲಿ ಒಂದೇ ಒಂದು ಹಚ್ಚೆಯನ್ನೂ ಬರೆಸಿಕೊಂಡಿಲ್ಲ. ಅದಕ್ಕೆ ಕಾರಣವೂ ಇದೆ. ಅದೇನೆಂದು ಕೇಳಿದಾಗ ನಿರ್ದಿಷ್ಟವಾಗಿ ಹೇಳದಿದ್ದರೂ ಆ ಜಾಗವನ್ನು ತಮ್ಮ ಕನಸಿನ ಯೋಜನೆಗೆ ಮುಡಿಪಿಟ್ಟಿರುವುದಾಗಿ ಹೇಳಿ ನಗುತ್ತಾರೆ.
Related Articles
ದಾಖಲೆಗಳ ನಿರ್ಮಾಣವೇ ಒಂದು ಹವ್ಯಾಸವಾಗಿರುವ ರಿಶಿಯ ಸಾಹಸಗಳಿಗೆ ಅವರ ಮಡದಿ ಬಿಮ್ಲಾ ಪ್ರೋತ್ಸಾಹವೇ ಸ್ಫೂರ್ತಿಯಂತೆ. ದೆಹಲಿಯಿಂದ 10,286 ಮೈಲು ದೂರದಲ್ಲಿರುವ ಸ್ಯಾನ್‌ಫ್ರಾನ್ಸಿಸ್ಕೋಗೆ ಅತಿ ಶೀಘ್ರವಾಗಿ ಒಂದು ಪಿಜ್ಜಾವನ್ನು ತಲುಪಿಸುವಲ್ಲಿ ವಿಶ್ವದಾಖಲೆ ಮಾಡಿದ ರಿಶಿ ಟೊಮಾಟೊ ಕೆಚಪ್ ಕುಡಿಯುವುದರಲ್ಲಿಯೂ ಅಳಿಸಲಾಗದ ದಾಖಲೆ ಮಾಡಿದ್ದಾರೆ. ಒಂದು ಲೀಟರ್ ಕೆಚಪ್ ಸೀಸೆ ಖಾಲಿ ಮಾಡಲು ಅವರು ತೆಗೆದುಕೊಂಡಿದ್ದು 40 ಸೆಕೆಂಡ್‌ಗಳಷ್ಟೆ! ನಗರಪಾಲಿಕೆಯ ಚುನಾವಣೆಗೆ ಸ್ಪರ್ಧಿಸಿ ಒಂದೇ ಒಂದು ಮತ ಪಡೆಯದ ದಾಖಲೆಗೆ ಯತ್ನಿಸಿದ್ದರು. ಆದರೆ ದುರಾದೃಷ್ಟವಶಾತ್ ಒಂದು ಮತ ಬಿದ್ದು ಅವರಾಸೆ ಕೈಗೂಡಲಿಲ್ಲ.
Advertisement
ಜಗತ್ತಿನ ಅತಿ ಚಿಕ್ಕ ಉಯಿಲುರಿಶಿ ಹಲವು ಸಾಹಸಗಳನ್ನು ಮೆರೆದಿದ್ದಾರೆ. ಬಾಯಿಯೊಳಗೆ ಅತ್ಯಧಿಕ ಸ್ಟ್ರಾಗಳನ್ನು (500) ತೂರಿಸಲೆಂದು ಮೂವತ್ತೆರಡು ಹಲ್ಲುಗಳನ್ನೂ ಕೀಳಿಸಿದರು. ಇದರಿಂದಾಗಿ ಐನೂರು ಸ್ಟ್ರಾಗಳು ಸಲೀಸಾಗಿ ಒಳಗೆ ತುಂಬಿಕೊಂಡವು. ಇದೂ ಒಂದು ದಾಖಲೆ ಆಯಿತು. ಅವರ ಮಡದಿ ಬಿಮ್ಲಾ, ತನ್ನ ದತ್ತು ಮಗನ ಹೆಸರಿಗೆ ಬರೆದ ವೀಲುನಾಮೆ ಜಗತ್ತಿನ ಅತೀ ಸಂಕ್ಷಿಪ್ತ ಉಯಿಲು ಎಂದು ದಾಖಲೆ ಸ್ಥಾಪಿಸಿದೆ. ಅದರಲ್ಲಿರುವುದು ಒಂದೇ ವಾಕ್ಯ, “ಎಲ್ಲವೂ ಮಗನಿಗೆ’. ಮಗನ ಮದುವೆಯ ಕರೆಯೋಲೆಯನ್ನು ಅರ್ಧ ಇಂಚು ಉದ್ದ ಮತ್ತು ಅಷ್ಟೇ ಅಗಲವಿರುವ ಕಾಗದದಲ್ಲಿ ಮುದ್ರಿಸಿದ್ದರು. ಸಕ್ಕರೆಯ ಕ್ಯೂಬ್‌ನಿಂದ ಅತಿ ಎತ್ತರದ ಗೋಪುರ ನಿರ್ಮಿಸಿ ರಿಶಿ ಹೊಸ ದಾಖಲೆ ಬರೆದಿದ್ದರು. ಈ ಟವರ್‌ನ ಎತ್ತರ 64 ಇಂಚುಗಳಷ್ಟಿತ್ತು. – ಪ. ರಾಮಕೃಷ್ಣ ಶಾಸ್ತ್ರಿ