ಸಿಟ್ಟ ತರಿಸಿದ ನಂತ್ರ ಸಮಾಧಾನ ಮಾಡೋ ಕಲಾ ಮಾತ್ರ ನಿನಗಷ್ಟ ಗೊತ್ತದ ನೋಡ. ಬಣ್ಣಬಣ್ಣದ್ದ ಮಾತ, ಮಾತಾಡಾಕತ್ತಿ ಅಂದ್ರ, 100 ಡಿಗ್ರಿ ಸೆಲ್ಸಿಯಸ್ ಕುದಿಯುವ ಸಿಟ್ಟ ಕೂಡ ತಣ್ಣಗ ಅಂದ್ರ ತಣ್ಣಗ ಆಗತೈತಿ.
ಆತ್ಮೀಯ ಮಾತುಗಾರ,
ಅಲ್ಲ, ಹೆಂಗ ಮಾತಾಡಬೇಕ ಅಂತ ನಿನ್ನಿಂದ ಕಲಿಬೇಕ ನೋಡ. ಅಷ್ಟ ಮೋಡಿ ಮಾಡತಿ, ಮಾತಿನ್ಯಾಗ ನೀ. ಆ ದೇವರ, ಮಾತಿನ ಭಂಡಾರ ಮಾತ್ರ ಬಾಳ ಕೊಟ್ಟಾನ ನಿನಗ. ಫೋನ್ ಮತ್ತ ಮೆಸೇಜ್‌ಗೆ ರಿಪ್ಲೆ„ ಮಾಡಲಿಲ್ಲಂದ್ರ ನನಗ ಸಿಟ್ಟ ಬರತೈತಿ ಅಂತ ಗೊತ್ತೈತಿ ನಿನಗ. ಅಂದ್ರೂ ನನ್ನ ಕಾಡೋದ ಬಿಡಲ್ಲ ನೀ. ಯಾಕ ರಿಪ್ಲೆ„ ಮಾಡಲ್ಲ? ಜಗತ್ತನ್ಯಾಗ ನೀ ಒಬ್ಬನ ಕೆಲಸಾ ಮಾಡತಿಯೇನ್? ಬೇಕಾದವರಿಗೆ ಸ್ವಲ್ಪಾದರೂ ವ್ಯಾಳಾ ತಗೊಂಡ, ಕಾಲ್, ಮೆಸೇಜ್ ಮಾಡಬೇಕ. ಯಾವಾಗರ ಒಮ್ಮೊಮ್ಮೆ ಆಗಿದ್ರ ಸುಮ್ಮನಿರತಿ¨ªೆ, ಆದ್ರ ಬಾಳ ಸತಿ ಉತ್ತರಾ ಕೊಡಲ್ಲ. ಆನಂದ ಆಗತದ ಏನ ನಿಂಗ ಕಾಡೊದ್ರಾಗ? ಸಿಟ್ಟ ತರಿಸಿದ ನಂತ್ರ ಸಮಾಧಾನ ಮಾಡೋ ಕಲಾ ಮಾತ್ರ ನಿನಗಷ್ಟ ಗೊತ್ತದ ನೋಡ. ಬಣ್ಣಬಣ್ಣದ್ದ ಮಾತ, ಮಾತಾಡಾಕತ್ತಿ ಅಂದ್ರ, 100 ಡಿಗ್ರಿ ಸೆಲ್ಸಿಯಸ್ ಕುದಿಯುವ ಸಿಟ್ಟ ಕೂಡ ತಣ್ಣಗ ಅಂದ್ರ ತಣ್ಣಗ ಆಗತೈತಿ. ಅಂಥಾ ಮಾತಿನ ಸರದಾರ ನೋಡ ನೀ.
ಜಗಳ ಅತಿರೇಕಕ್ಕ ಹೋಗಿ, ನಾ ಮಾತಾಡೋದ ಬಿಟ್ಟಿನೀ ಅಂದ್ರ, “ದೇವ್ರ, ಸಿಟ್ಟಾಗತಿ ಸಿಟ್ಟಾಗ, ಬೈಯತಿ ಬೈ. ಆದ್ರ ನನ್ನ ಜೊತಿ ಮಾತ ಮಾತ್ರ ಬಿಡಬ್ಯಾಡ. ನಿನ್ನ ಮಾತ ಕೇಳದಿದ್ರ ಮನಸ್ಸಿಗೆ ಖುಷಿ ಇರುದಿಲ್ಲಲೇ… ಜಗಳಾ ತಗದ್ರೂ ನನ್ನ ಜೊತಿ ತಗಿ, ಆದ್ರ ಮಾತ ಬಿಡಬ್ಯಾಡ. ಮಾತ ಬಂದ್ ಅಂದ್ರ, ನನ್ನ ಉಸರ ನಿತಂಗ ಆಗತೈತಿ. ಹಂಗ ಮಾಡಬ್ಯಾಡ. ಕೆಲಸ ಅಂದ್ರ ಸ್ವಲ್ಪ ಬಿಜಿ ಇರತೇನಿ, ಅನುಸರಿಸಿಕೊ. ಸಂತೋಷದಿಂದ ಮಾತಾಡಲೇ ನನ್ನ ಜೊತಿ’ ಅಂದ ಅಗದೀ ಕರುಣಾ ಬರೋವಂಗ ಮಾತಾಡತಿ. ಬಾಳ ಕಾಡಬ್ಯಾಡ, ನನ್ನ ಭಾವನೆಗಳಿಗೆ ಕಿಮ್ಮತ್ತ ಕೊಡುತ ಬಾ ಅಂದ್ರ, “ಅಯ್ಯೋ ಹುಚ್ಚಿ, ನಿನ್ನಲ್ಲಿ ನನಗ ಬಾಳ ಸೇರಿದ್ದ, ನಿನ್ನ ಭಾವನೆಗೊಳ. ನಾ ಯಾಕ ನಿನ್ನ ಭಾವನೆಗೊಳ ಜೊತಿ ಆಟಾ ಆಡ್ಲಿ? ನನ್ನ ನಿನ್ನ ಪ್ರೀತಿ ತಳಪಾಯ ಈ ಭಾವನೆಗೊಳನ, ಇವಿಲ್ಲದ ಜೀವನ ನಡೆಯೊಲ್ಲ. ಮ್ಯಾಲ ನನ್ನ ಬಿಟ್ಟ ಯಾರ ಜೊತಿ ಜಗಳಾ ತಗಿತಿ ನೀ? ತಗಿ ಎಷ್ಟ ಜಗಳ ಬೇಕೊ ಅಷ್ಟ. ನಾ ಏನೂ ಅನ್ನಲ್ಲ. ನೀನ ಕರೆಕ್ಟ್. ಆತಿಲೋ? ಸಾಯೋವರೆಗೂ ನಾ ನಿನ್ನ ಜೊತಿ ಮಾತಾಡಬೇಕ ಅಷ್ಟ’ ಅಂದ ನಾ ಅಳುವಂಗ ಮಾಡತಿ.
ಹೌದ, ನೀ ಹೇಳಿದಂಗ ನನಗ ಸಿಟ್ಟ ಬಾಳ. ತಡಕೊಳ್ಳಾಕ ಆಗಲ್ಲ. ಆದ್ರ ನಿನ್ನ ಮಾತು ಏನ್ ಅದಾವಲಾ ಅವ, ಏಕದಮ್ ನನ್ನ ಸಿಟ್ಟ ಕರಗಿಸಿ ಬಿಡತಾವ ನೋಡ. ಅದಕ್ಕ ಅನ್ನಾತೇನಿ, ಮಾತಿನ ಭಂಡಾರ ನಿನಗ ಒಲದೈತಿ, ಹಂಗಾಗಿ ನನ್ನ ಸಮಾಧಾನ ಮಾಡೊದ್ರಾಗ ನಿಂದ ಎತ್ತಿದ ಕೈ.
ನಿನ್ನ ಮಾತಗಳಿಗೆ ಮರುಳಾದಕಿ
ಪೂವು
ಮಾಲಾ ಮ. ಅಕ್ಕಿಶೆಟ್ಟಿ