Advertisement

ಕ್ರೈಸ್ತ ಬಾಂಧವರಲ್ಲಿ ಸಂತಸ, ಸಡಗರ

09:29 AM Dec 25, 2017 | Team Udayavani |

ಮಹಾನಗರ: ಇಂದು ಯೇಸು ಕ್ರಿಸ್ತರ ಜನನದ ಹಬ್ಬ.ಎಲ್ಲೆಲ್ಲೂ ಸಡಗರ, ಸಂಭ್ರಮದ ವಾತಾವರಣ. ಜಗತ್ತಿನ ಎಲ್ಲೆಡೆ ನಡೆಯುವಂತೆ ‘ಪೂರ್ವದ ರೋಮ್‌’ ಎಂದು ಪರಿಗಣಿತವಾಗಿರುವ ಮಂಗಳೂರಿನಲ್ಲಿ ಕ್ರಿಸ್ಮಸ್‌ ಆಚರಣೆಗೆ ಸರ್ವ ಸಿದ್ಧತೆಗಳು ನಡೆದಿವೆ.

Advertisement

ಚರ್ಚ್‌ಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ಯೇಸು ಕ್ರಿಸ್ತರು ದನದ ಹಟ್ಟಿಯಲ್ಲಿ ಜನಿಸಿದರು ಎನ್ನುವುದರ ಸಂಕೇತವಾಗಿ ಚರ್ಚ್‌ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿ (ಕ್ರಿಬ್‌)ಗಳು ನಿರ್ಮಾಣಗೊಂಡಿವೆ. ಶನಿವಾರ ಮತ್ತು ರವಿವಾರ ಅಂಗಡಿಗಳಲ್ಲಿ ಮತ್ತು ಬೇಕರಿಗಳಲ್ಲಿ ಖರೀದಿಯ ಭರಾಟೆ ನಡೆದಿದೆ. ಇದರ ಜತೆ ಜತೆಗೆ ಕ್ರೈಸ್ತರ ಮನೆಗಳಲ್ಲಿಯೂ “ಕುಸ್ವಾರ್‌’ ತಯಾರಿ ನಡೆದಿದೆ. ಪರಊರಿನಲ್ಲಿರುವ ಮತ್ತು ವಿದೇಶಗಳಲ್ಲಿರುವ ಕುಟುಂಬದ ಸದಸ್ಯರು ಹಬ್ಬ ಆಚರಣೆಗೆ ತಮ್ಮ ಮನೆಗಳಿಗೆ ತಲುಪಿದ್ದಾರೆ. ಹಾಗಾಗಿ ಮನೆಗಳಲ್ಲಿ ಸಡಗರದ ವಾತಾವಾರಣ ಸೃಷ್ಟಿಯಾಗಿದೆ.

ಕ್ರೈಸ್ತ ಸಮುದಾಯದಲ್ಲಿ ಈ ಹಬ್ಬದ ಆಚರಣೆಗೆ ಆಧ್ಯಾತ್ಮಿಕವಾಗಿ ಸಿದ್ಧತೆಗಳು ಒಂದು ತಿಂಗಳ ಮುಂಚಿತವಾಗಿ ಆರಂಭವಾಗಿದ್ದು, ಬಾಹ್ಯ ಸಿದ್ಧತೆಗಳು ಹಬ್ಬಕ್ಕೆ ಒಂದು ವಾರ ಇರುವಾಗ ಪ್ರಾರಂಭವಾಗಿವೆ. ವಾಣಿಜ್ಯ ವಲಯದಲ್ಲಿ ಒಂದು ತಿಂಗಳಿಂದ ಪೂರ್ವ ತಯಾರಿಗಳು ನಡೆದಿವೆ.

ಏಕಚಿತ್ತದ ಸಿದ್ಧತೆ
ಅಧ್ಯಾತ್ಮಿಕ ಸಿದ್ಧತೆಯ ನಾಲ್ಕು ವಾರಗಳ ಅವಧಿಯನ್ನು ‘ಆಡ್ವೆಂಟ್‌’ ಎಂದು ಕರೆಯುತ್ತಾರೆ. ‘ಅಡ್ವೆಂಟ್‌’ ಎಂಬ ಪದ
ಲ್ಯಾಟಿನ್‌ ಭಾಷೆಯ ‘ಆಂದ್ವೆತುಸ್‌’ ಎಂಬ ಪದದಿಂದ ಬಂದಿದೆ. ಅಂದರೆ ಆಗಮನ ಎಂದರ್ಥ. ಈ ಸಮಯದಲ್ಲಿ ಕ್ರೈಸ್ತರು ಯೇಸು ಕ್ರಿಸ್ತರ ಆಗಮನವನ್ನು ನಿರೀಕ್ಷಿಸುತ್ತಾ ಆದಕ್ಕಾಗಿ ಪ್ರಾರ್ಥನೆ, ಧ್ಯಾನಮಾಡಿ ಏಕಚಿತ್ತದಿಂದ ಸಿದ್ಧತೆ ಮಾಡುತ್ತಿರುತ್ತಾರೆ. ಬಾಹ್ಯ ಆಚರಣೆಯಲ್ಲಿ ಪ್ರಮುಖವಾಗಿ ಹೊಸ ಉಡುಗೆ ತೊಡುಗೆಗಳ ಖರೀದಿ, ಕ್ರಿಸ್ಮಸ್‌ ಕ್ರಿಬ್‌ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಖರೀದಿ, ಜೋಡಣೆ ನಡೆಯುತ್ತದೆ.

ಬೇಕರಿಗಳಲ್ಲಿ ಕ್ರಿಸ್ಮಸ್‌ ಕೇಕ್‌ಗಳು, ಕ್ರಿಸ್ಮಸ್‌ ವಿಶೇಷ ತಿಂಡಿ ‘ಕುಸ್ವಾರ್‌’, ಕ್ರಿಸ್ಮಸ್‌ ಟ್ರೀ, ಸಾಂತಾಕ್ಲಾಸ್‌, ಕ್ರಿಬ್‌ಗ ಬೇಕಾದ ವಿವಿಧ ಪರಿಕರಗಳ ತಯಾರಿಗೆ ಒಂದು ತಿಂಗಳಿಂದ ಸಿದ್ಧತೆಗಳು ನಡೆದಿದ್ದು, ಈಗ ಪೂರ್ಣಗೊಂಡಿವೆ. ರವಿವಾರ ರಾತ್ರಿ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಸಂಭ್ರಮದ ಬಲಿಪೂಜೆ ನಡೆದಿದೆ. ಇಂದು ಹಬ್ಬದ ದಿನ. ಚರ್ಚ್‌ಗಳಲ್ಲಿ ಬಲಿ ಪೂಜೆ ಜರಗಲಿದ್ದು, ಬಳಿಕ ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ನಡೆಯಲಿದೆ. ಹಬ್ಬದ ಸಂಭ್ರಮಾಚರಣೆ ಅಂಗವಾಗಿ ತಿಂಡಿ ತಿನಿಸುಗಳ, ಶುಭಾಶಯ ವಿನಿಮಯ ನೆರವೇರಲಿದೆ.

Advertisement

ಸಾಂತಾಕ್ಲಾಸ್‌
ಕ್ರಿಸ್ಮಸ್‌ ಸಂಭ್ರಮದಲ್ಲಿ ಹಲವು ವಿಷಯಗಳು, ಕ್ರಿಸ್ಮಸ್‌ನ ಸಡಗರವನ್ನು ಇಮ್ಮಡಿಗೊಳಿಸುತ್ತವೆ. ‘ಸಾಂತಾಕ್ಲಾಸ್‌’ ವೇಷ ಕ್ರಿಸ್ಮಸ್‌ ಆಚರಣೆಯ ಆಕರ್ಷಣೆಗಳಲ್ಲೊಂದು. ಅವರನ್ನು ಕ್ರಿಸ್ಮಸ್‌ ತಾತಾ ಎಂದು ಸಂಬೋಧಿಸುತ್ತಾರೆ. ಕ್ರಿಸ್ಮಸ್‌ ಕಾರ್ಯಕ್ರಮದಲ್ಲಿ ಆನಂದದಿಂದ ಹೆಜ್ಜೆ ಹಾಕುತ್ತಾ, ಎಲ್ಲರನ್ನು ಪ್ರತ್ಯೇಕವಾಗಿ ಪುಟಾಣಿಗಳನ್ನು ಮನರಂಜಿಸುವ,
‘ಸಾಂತಾಕ್ಲಾಸ್‌’ ವೇಷಧಾರಿ ಕಣ್ಣಿಗೆ ಹಬ್ಬವನ್ನು ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next