ಕನಸುಗಳ ಬೆನ್ನತ್ತಿ ಓಡುತ್ತಿರುವ ಈಗಿನ ಯುವ ಜನಾಂಗಕ್ಕೆ ಸಂತೋಷ ಮಾತ್ರ ಕೊಂಡುಕೊಳ್ಳಲು ಸಿಗುವುದಿಲ್ಲ ಎಂಬುದೇ ದುಃಖದ ವಿಷಯ. ದಿನವೂ ಕೆಲಸ ಕೆಲಸ ಎಂದು ಒತ್ತಡದ ಜೀವನ ಸಾಗಿಸುತ್ತಿರುವವರು ಮನೆ, ಗೆಳೆಯ/ತಿ, ಮಕ್ಕಳು ಎಲ್ಲರಿಗಿಂತ ಮಿಗಿಲಾಗಿ ತಮ್ಮ ಕೆಲಸವನ್ನು ಪ್ರೀತಿಸಲು ಕಲಿತಿರುತ್ತಾರೆ. ಕೆಲಸ ಮಾಡುವುದು ತಪ್ಪಲ್ಲ ಆದರೆ ನನಗೆ ಸಂತೋಷವೆಂಬುದೇ ದೇವರು ಕೊಟ್ಟಿಲ್ಲ ಯಾವಾಗಲೂ ನಾನು ಒಂದೇ ರೀತಿಯ ಬದುಕು ನಡೆಸುತ್ತಿರುವೇ ಎನ್ನುವವರು ಸ್ವಲ್ಪ ಸಮಯವನ್ನು ಮೀಸಲಿರಿಸಲು ಕಲಿತಲ್ಲಿ ಸಂತೋಷ ತನ್ನಿಂದ ತಾನಾಗಿಯೇ ದೊರಕುತ್ತದೆ.
ಹಲವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಸಂತೋಷ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ಬದಲಾಗಿ ನಾವೇ ಅದನ್ನು ಅರಸಲು ಕಲಿಯಬೇಕು. ಇಂದಿನ ಸಮಯ ಕಳೆದು ಹೋಗುವುದಕ್ಕಿಂತ ಮುಂಚೆ ದಿನದ ಅನುಭವವನ್ನು ಮೇಲುಕು ಹಾಕಲು ಸಿದ್ಧಗೊಂಡಿರಬೇಕು. ಆ ನೆನಪುಗಳಲ್ಲಿ ನಮಗೆ ಸಂತೋಷದ ನೆನಪುಗಳೇ ಹೆಚ್ಚಿರಬೇಕು ಆಗ ಮಾತ್ರ ಬದುಕನ್ನು ನಾವಂದು ಕೊಂಡ ಹಾಗೇ ಜೀವಿಸಲು ಸಾಧ್ಯ. ಪ್ರತಿಯೊಬ್ಬರಿಗೂ ದುಖಃದ ಸನ್ನೀವೇಶ ಬಂದೇ ಬರುವುದು. ಆದರೆ ಅದನ್ನು ಹೇಗೆ ನಾವು ನಿಭಾಯಿಸಬಲ್ಲೇವು ಎಂಬುದರ ಮೇಲೆ ನಮ್ಮ ಬದುಕು ನಿರ್ಣಯವಾಗುತ್ತದೆ.
ಕಹಿ ನೆನಪುಗಳನ್ನು ಮರೆವಷ್ಟು ಗಟ್ಟಿ ಮನಸ್ಸು ಸಿಹಿ ನೆನಪುಗಳ ಮೇಲುಕು ಹಾಕುವಷ್ಟು ಮೃದು ಮನಸ್ಸು ಎರಡು ಅವಶ್ಯಕ. ಯಾವುದಾದರೂ ಒಂದರಲ್ಲಿ ಏರಿಳಿತವಾದಲ್ಲಿ ಬದುಕು ಏರುಪೇರಾಗಲು ಶುರುವಾಗುತ್ತದೆ. ನಗರಗಳಲ್ಲಿ ಅತಿ ಹೆಚ್ಚು ಮಾನಸಿಕ ರೋಗಗಳು ಕಾಣಸಿಗುವುದು ಈ ಕಾರಣಕ್ಕೆ. ಮನುಷ್ಯನಿಗೆ ಯಾವಾಗ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೋ ಆಗ ಕಾಯಿಲೆಗಳ ಪ್ರವೇಶವಾಗುತ್ತದೆ.
ಯೋಚನೆಗಳು ಅಷ್ಟೇ ಸಮಸ್ಯೆಯನ್ನು ಬಗೆಹರಿಸುವಂತದ್ದಾಗಿದ್ದರೆ ಮಾತ್ರ ಒಳ್ಳೆಯದು ಇಲ್ಲವಾದಲ್ಲಿ ನಿಮ್ಮ ಯೋಚನೆಗಳೇ ಸಾವಿರ ಸಮಸ್ಯೆಗಳನ್ನು ಹುಟ್ಟುಹಾಕಿದಲ್ಲಿ ಸಂತೋಷ ಮೂರು ಮೈಲಿ ದೂರದಲ್ಲಿ ನಿಂತಿರುತ್ತದೆ. ಪ್ರತಿ ಬಾರಿ ನೀವು ಸೋತಾಗಲು ಬೇಸರ ಪಟ್ಟುಕೊಳ್ಳದೆ ಅನುಭವ ಎಂದು ತೆಗೆದುಕೊಳ್ಳಿ ಆಗ ನೀವು ನಿಮ್ಮನ್ನು ಗಟ್ಟಿ ಮಾಡಿಕೊಳ್ಳುವುದಲ್ಲದೇ ಸಕಾರಾತ್ಮಕವಾಗಿ ಯೋಚಿಸಲು ಕಲಿಯುತ್ತೀರಿ ಅಂದಾಗ ಮಾತ್ರ ಬದುಕು ಒಳ್ಳೆಯ ರೀತಿಯಲ್ಲಿ ಸಾಗಲು ಸಾಧ್ಯ.
ಎಲ್ಲಿಯವರೆಗೆ ನಾವು ನಕಾರಾತ್ಮಕ ಚಿಂತನೆಯನ್ನು ಹೆಚ್ಚು ಹೆಚ್ಚು ಮಾಡುತ್ತೇವೆ ಅಲ್ಲಿವರೆಗೆ ನಮಗೆ ಸಂತೋಷದ ಸುಳಿವಿರುವುದಿಲ್ಲ ಆದ್ದರಿಂದ ಸಕಾರಾತ್ಮಕತೆಯನ್ನು ಮೈಗೂಡಿಸಿಕೊಳ್ಳಿ. ಆಗ ಪ್ರತಿದಿನವೂ ನಿಮಗೆ ಹೊಸ ದಿನವಾಗುತ್ತದೆ ಇದರಲ್ಲಿ ಸಂಶಯವಿಲ್ಲ.
-ಅನುಪ್ರೀತ್ ಭಟ್, ಶಿರಸಿ