Advertisement

ಸುಖ –ದುಃಖ ಎರಡೂ ತಾತ್ಕಾಲಿಕ

01:16 AM Oct 14, 2019 | Sriram |

ಜೀವನದಲ್ಲಿ ಎಲ್ಲವನ್ನೂ ಎಷ್ಟು ಬೇಕು ಅಷ್ಟನ್ನೇ ಅನುಭವಿಸಬೇಕು. ಅದು ಅತಿಯಾದ ಖುಷಿಯೇ ಇರಲಿ ಅಥವಾ ದುಃಖವೇ ಇರಲಿ. ಖುಷಿಯನ್ನು ಅನುಭವಿಸಿ ಥಟ್ಟನೆ ಮರೆತು ಬಿಡುವ ನಾವು, ದುಃಖವನ್ನೇಕೆ ಥಟ್ಟನೆ ಮರೆಯುವುದಿಲ್ಲ? ಏಕೆಂದರೆ ನಮ್ಮ ಖುಷಿಯಲ್ಲಿ ನೂರು ಕಿವಿಗಳು, ನೂರು ಕಣ್ಣುಗಳು ನಮ್ಮ ಜತೆಗಿರುತ್ತವೆ. ಅದೇ ದುಃಖ ಅನ್ನುವುದು ಒಂಟಿತನ ಹಾಗೂ ಮೌನದ ನಡುವೆ ಹುಟ್ಟುವ ಗಾಢ ಸೇತುವೆ! ಅಲ್ಲಿ ನಮ್ಮ ಜತೆ ನಾವೇ ಇರುತ್ತೇವೆ. ನಮ್ಮ ಆಲೋಚನೆಗಳಿಗೆ ನಾವೇ ದಿಕ್ಕು.

Advertisement

ಅತಿಯಾದ ಖುಷಿ ವಿಷ
ಸಂಭ್ರಮಗಳಿಗೆ ಹಾರುವ ರೆಕ್ಕೆಗಳು ಹೆಚ್ಚು. ಹಾರುವ ಖುಷಿಗೆ ವೇಗವನ್ನು, ಎತ್ತರವನ್ನು ಮರೆಯುತ್ತೇವೆ. ಸೂತಕಕ್ಕೆ ರೆಕ್ಕೆಗಳಿವೆ. ಆದರೆ ನಾವು ಅದನ್ನು ಮರೆತು ಹಾರಲು ಪ್ರಯತ್ನ ಮಾಡುವುದಿಲ್ಲವಷ್ಟೇ. ಸಂಭ್ರಮವಿರಲಿ, ಸೂತಕವಿರಲಿ ಸನ್ನಿವೇಶಗಳಲ್ಲಿ ನಾವು ಹೆಚ್ಚು ಕುಗ್ಗಬಾರದು, ಹಿಗ್ಗಬಾರದು. ನೆನಪಿರಲಿ ಪಾಯಸ ಇರಲಿ, ನೀರು ಇರಲಿ ಮಿತಿ ಮೀರಿ ಸೇವಿಸಿದರೆ ಕೊನೆಗೆ ಆಗುವುದು ವಾಂತಿಯೇ! ಜೀವನವು ಹೀಗೆ ದುಃಖ- ಸುಖ ಎರಡೂ ತಾತ್ಕಾಲಿಕ. ಅಂದ ಹಾಗೆ ನಮ್ಮ ಬದುಕು ಕೂಡ ತಾತ್ಕಾಲಿಕ. ಇಲ್ಲಿ ಬರುವುದು ಹೋಗುವುದು ಎಲ್ಲ ಪಾತ್ರಗಳು ಕ್ಷಣಿಕ.

ನಾಲ್ಕು ಕಣ್ಣಿನ ಸಮಾಜ
ನಾವು ಏನಾಗಿದ್ದೇವೆ? ಏನು ಮಾಡುತ್ತಿದ್ದೇವೆ? ನಮ್ಮ ಜೀವನವೇ ಹಾಗೆ. ಇಲ್ಲಿ ನಮ್ಮ ಬಗ್ಗೆ ನಾವು ಪ್ರಶ್ನೆ ಮಾಡಿಕೊಳ್ಳಲು ಸಮಯವಿಲ್ಲ. ನಮ್ಮ ಜೀವನದ ಬಗ್ಗೆ ಇನ್ನೊಬ್ಬರು ಹೇಳಿದರೆ ಮಾತ್ರ ನಾವು ನಮ್ಮ ಜೀವನದ ಬಗ್ಗೆ ಸ್ವಲ್ಪ ಯೋಚಿಸುವುದು ವಿನಾಃ ನಾವು ಹೆಚ್ಚಾಗಿ ಯೋಚಿಸುವುದು, ಪ್ರಶ್ನಿಸುವುದು ಅಥವಾ ಕೆಣಕುವುದು, ಸಂಶಯ ಪಡುವುದು ಇನ್ನೊಬ್ಬರ ಬಗ್ಗೆ. ನಾವು ಒಳ್ಳೆಯದನ್ನು ಮಾಡಲು ಹೋದಾಗ ನಮ್ಮತನವನ್ನು ಪ್ರಶ್ನಿಸುವವರು ತುಂಬಾ ಜನ ಸಿಗುತ್ತಾರೆ, ಅದುವೇ ಸಮಾಜ. ಸಮಾಜಕ್ಕೆ ನಾಲ್ಕು ಕಣ್ಣುಗಳಿವೆ. ಅದರಲ್ಲಿ ಎರಡು ಕಣ್ಣು ನಿನ್ನ ಬಗ್ಗೆ ಯೋಚಿಸುತ್ತದೆ. ಇನ್ನೆರಡು ಕಣ್ಣು ನಿನ್ನ ಯೋಗ್ಯತೆಯನ್ನು ಪ್ರಶ್ನಿಸುತ್ತದೆ. ಅವರ ಬಗ್ಗೆ ನಾವು ಯೋಚಿಸುತ್ತಾ ಕಾಲಹರಣ ಮಾಡಿದರೆ ನಾವು ಮೂರ್ಖರೇ ಸರಿ! ಸಮಾಜದಲ್ಲಿ ಹರಕು ಬಾಯಿಯವರು, ಹರಕು ಬಟ್ಟೆಯವರು, ಕೊಳಕು ಮನಸ್ಸಿನವರು ಎಲ್ಲರೂ ಇದ್ದಾರೆ. ಇದರಲ್ಲಿ ನಾವು ಒಂದು ವಿಧಕ್ಕೆ ಸೇರಿದ್ದೇವೆ, ಯಾವುದು ಅನ್ನುವುದು ಪರಿಸ್ಥಿತಿ ಮೇಲೆ ಇನ್ನೊಬ್ಬರು ನಿರ್ಧರಿಸಿದ ಮೇಲೆಯೇ ತಿಳಿಯುತ್ತದೆ.

ನೀನು ಓಡಿದರೆ, ಒಬ್ಬ ಹಾರುತ್ತಾನೆ, ಮತ್ತೂಬ್ಬ ಬೀಳುತ್ತಾನೆ ನಾನೊಬ್ಬ ಒಳ್ಳೆಯವನಾಗಿದ್ದರೆ ಸಾಕು. ಮತ್ತೂಬ್ಬನ ಬಗ್ಗೆ ನಾನ್ಯಾಕೆ ಯೋಚನೆ ಮಾಡಬೇಕು ಎಂಬ ಮನಃಸ್ಥಿತಿ ನಮ್ಮಲ್ಲಿ ನೂರರಲ್ಲಿ ತೊಂಬತ್ತು ಮಂದಿಗೆ ಇದೆ. ನಾನು ತುಂಬಾ ಖುಷಿಯಲ್ಲಿ ಇದ್ದೇನೆ, ಅದೇ ನನ್ನ ಪಕ್ಕದಲ್ಲಿ ಇದ್ದಾನೆ ಅಲ್ಲ. ಅವನು ತುಂಬಾ ದುಃಖದಲ್ಲಿ ಇದ್ದಾನೆ, ಇನ್ನೊಬ್ಬ ಯಾವುದು ಬೇಡ ಅನ್ನುವ ಹಾಗೆ ಒಂಟಿ ಆಗಿಯೇ ಇದ್ದಾನೆ. ಒಮ್ಮೆ ಎಲ್ಲರೂ ಜತೆಗೂಡುತ್ತಾರೆ. ಒಂದಿಷ್ಟು ಕ್ಷಣ ಹರಟೆ ಹೊಡೆದು, ಮತ್ತೆ ಎಲ್ಲರೂ ಅವರವರ ಭಾವದಲ್ಲಿ ಲೀನರಾಗುತ್ತಾರೆ. ನಮ್ಮ ಸ್ನೇಹವೂ ಹೀಗೆ ಆಯಾ ಪರಿಸ್ಥಿತಿಗೆ ಅನುಗುಣ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ, ಒಂದಿಷ್ಟು ಹೊತ್ತು ಆತ್ಮೀಯರಾಗುತ್ತೇವೆ. ಕೊನೆಗೆ ಅದೇ ಆತ್ಮೀಯತೆಯನ್ನು ಪಕ್ಕಕ್ಕಿಟ್ಟು ನಮ್ಮ ನಮ್ಮ ಭಾವನೆಗಳನ್ನು ಮನಸ್ಸಿನಲ್ಲಿಟ್ಟು ಬಿಡುತ್ತೇವೆ.

-  ಸುಹಾನ್‌ ಶೇಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next