Advertisement

Hanumasagara: ಮೀಸಲಾತಿ ಹೋರಾಟ ಚುರುಕು: ಕೂಡಲಸಂಗಮ ಶ್ರೀ

06:09 PM Nov 16, 2023 | Team Udayavani |

ಹನುಮಸಾಗರ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಹೆದ್ದಾರಿ ಬಂದ್‌ ಮಾಡಿ ಲಿಂಗಪೂಜೆ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಗುರುಪೀಠದ ಶ್ರೀಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಚಳವಳಿಯ ಆರನೇ ಹಂತದ ಹೋರಾಟ ಪ್ರಾರಂಭಿಸಬೇಕಾಗಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಲಿಂಗಾಯತ ಸಮಾಜದ ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡಲು ರಾಜ್ಯ ಸರಕಾರ ಕ್ರಮ ಕೈಕೊಳ್ಳಬೇಕೆಂದು ಮತ್ತೂಮ್ಮೆ ಹೋರಾಟ ಶುರು ಮಾಡಲಾಗಿದೆ.

ಹಿಂದಿನ ಬಿಜೆಪಿ ಸರಕಾರದವರು ಕೊನೆ ಗಳಿಗೆಯಲ್ಲಿ ಪ್ರಧಾನಿ ಮೋದಿ ಅವರ ಮಧ್ಯಸ್ಥಿಕೆಯಲ್ಲಿ 2ಡಿ ಎಂದು ಮೀಸಲಾತಿ ಘೋಷಣೆ ಮಾಡಿತ್ತು. ಅದನ್ನು ಸ್ವಾಗತ ಮಾಡಿ ಅಲ್ಪ ತೃಪ್ತರಾಗಿದ್ದೇವೆ. ಆದರೆ ಇಲ್ಲಿಯವರೆಗೂ 2ಡಿ ಅನುಷ್ಠಾನಕ್ಕೆ ಬರಲಿಲ್ಲ. ಆದ್ದರಿಂದ ನಮ್ಮ ಸಮುದಾಯದ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು 2ಎ ಗೆ ಸೇರಿಸಲು ಹಕ್ಕು ಮಂಡಿಸಬೇಕೆಂದು ಒತ್ತಾಯ ಮಾಡಿದ್ದೇವೆ.

ಮುಖ್ಯಮಂತ್ರಿಗಳು ಬಜೆಟ್‌ ಅಧಿವೇಶನದ ನಂತರ ಕ್ರಮ ಕೈಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಬಜೆಟ್‌ ಅಧಿವೇಶನ ಮುಗಿದು ನಾಲ್ಕು ತಿಂಗಳಾದರೂ ಆ ಬಗ್ಗೆ ಗಮನಹರಿಸದೇ ಇರುವುದರಿಂದ ಹೋರಾಟ ಚುರುಕುಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ಸರಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಡಿ. 4ರಿಂದ ಪ್ರಾರಂಭವಾಗಲಿರುವ ಅಧಿವೇಶನಕ್ಕೂ ಮುಂಚೆಯೇ ಇದಕ್ಕೆ ಸಂಬಂಧಪಟ್ಟಂತೆ ಸಮಾಜದ ಶಾಸಕರ ಸಭೆ ಕರೆದು ಕಾನೂನು ಅಡೆತಡೆಗಳನ್ನು ನಿವಾರಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಲು ತಿಳಿಸಲಾಗುವುದು. ಇಲ್ಲದಿದ್ದಲ್ಲಿ ಸುವರ್ಣ ವಿಧಾನಸೌಧದ ಅಂಗಳದಲ್ಲಿಯೂ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂದರು.

Advertisement

ಲೋಕಸಭೆ ಚುನಾವಣೆಯೊಳಗೆ ಸರಕಾರ ಮೀಸಲಾತಿ ನೀಡಿದರೆ ತಮ್ಮ ಪಕ್ಷಕ್ಕೇ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಜನಾಂಗದವರು
ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. ನಮ್ಮ ಜನಾಂಗದ ಎಲ್ಲ ಶಾಸಕರು, ಮುಖಂಡರು, ಸಚಿವರು, ಮಾಜಿ ಶಾಸಕರು, ಸಚಿವರು ಪಕ್ಷ ಬೇಧ ಮರೆತು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಮನಸ್ತಾಪಗಳಿಲ್ಲ. ನಮ್ಮ ಸಮಾಜದ ಎಲ್ಲ ಶಾಸಕರು ಪಕ್ಷಾತೀತವಾಗಿ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಮಹಾಂತೇಶ ಅಗಸಿಮುಂದಿನ, ಬಸವರಾಜ ಹಳ್ಳೂರ, ದೇವೇಂದ್ರಪ್ಪ ಬಳೂಟಗಿ, ವೀರೇಶ ಯರಿಗೋನಾಳ, ಶೇಖಪ್ಪ ದೋಟಿಹಾಳ, ವಿಶ್ವನಾಥ ಕನ್ನೂರ, ಕರಿಸಿದ್ದಪ್ಪ ಕುಷ್ಟಗಿ, ಕರಿಸಿದ್ದಪ್ಪ ಅಗಸಿಮುಂದಿನ, ಜಿಪಂ ಮಾಜಿ ಸದಸ್ಯ ಭೀಮಣ್ಣ ಅಗಸಿಮುಂದಿನ, ಚಂದಪ್ಪ ಅಗಸಿಮುಂದಿನ, ಮಹಾಂತಯ್ಯ ಕೋಮಾರಿ, ವೀರಣ್ಣ ಹುನಗುಂಡಿ, ಉಮೇಶ ಬಾಚಲಾಪುರ, ಕರಿಸಿದ್ಧಪ್ಪ ನಿಡಗುಂದಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next