ಕಲಬುರಗಿ: ಅನುಮತಿ ಇಲ್ಲದ ಧ್ವನಿವರ್ಧಕಗಳನ್ನು ಮಸೀದಿಗಳಿಂದ ರಾಜ್ಯ ಸರ್ಕಾರ ಇದೇ ಮೇ 8ರೊಳಗೆ ತೆರವುಗೊಳಿಸದಿದ್ದರೆ ಪರ್ಯಾಯವಾಗಿ ಮೇ 9 ರಿಂದ ಮಸೀದಿಗಳ ಮುಂಭಾಗದಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡಲಾಗುವುದು ಎಂದು ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಮಸೀದಿಗಳ ಮೇಲಿನ ಧ್ವನಿವರ್ಧಕ ತೆರುವುಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶವನ್ನು ಅನುಷ್ಠಾನಕ್ಕೆ ತನ್ನಿ ಎಂದು ಸರ್ಕಾರಕ್ಕೆ ಮೇ 8ರ ವರೆಗೆ ಗಡುವು ನೀಡಿದ್ದೆವು. ಆದರೆ, ಅಲ್ಲಿಯ ವರೆಗೆ ಮಸೀದಿ ಮೇಲಿನ ಮೈಕ್ ತೆರವಿಗೆ ಮುಂದಾಗದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಿಂದುಗಳಿಗೊಂದು ನ್ಯಾಯ, ಮುಸ್ಲಿಂರಿಗೊಂದು ನ್ಯಾಯ ಎನ್ನುವಂತೆ ಸರ್ಕಾರ ನಡೆದುಕೊಳ್ಳಬಾರದು. ಹಿಂದುಗಳ ದೇವಾಲಯದಲ್ಲಿನ ಧ್ವನಿವರ್ಧಕ ತೆರವು ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುವುದಾದರೆ ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವಿಗೆ ಮೃದು ಧೋರಣೆ ಏಕೆ ಎಂದು ಸ್ವಾಮೀಜಿ ಪ್ರಶ್ನಿಸಿದರು.
ತಾವೂ ಕೂಡಾ ಮೈಕ್‌ಗಳನ್ನು ಹಚ್ಚಿ ಹನುಮಾನ್ ಚಾಲೀಸ್ ಓದುತ್ತೇವೆ. ಮಸೀದಿ ಗಳ ಮುಂದೆ ದೊಡ್ಡ ದೊಡ್ಡ ಸೌಂಡ್ ಬಾಕ್ಸ್‌ಗಳನ್ನು ಹಚ್ಚಿ ಓದುತ್ತೇವೆ. ಈ ಸಂದರ್ಭದಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಲಿದೆ ಎಂದರು.
ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಹೋಬಳಿ ಕೇಂದ್ರಗಳಲ್ಲಿಯೂ ಶ್ರೀರಾಮ ಸೇನೆ ಈ ರೀತಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಮೈಕ್ ತೆಗೆಯಲು ಸಾಧ್ಯವಾದರೆ, ಬಸವರಾಜ ಬೊಮ್ಮಾಯಿ ಅವರಿಂದ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಏನೇ ಆದರೂ ಸರಿ ಮೇ 9ರಂದು ರಾಜ್ಯಾದ್ಯಂತ ಶ್ರೀರಾಮ ಸೇನೆ ವತಿಯಿಂದ ಅಭಿಯಾನ ಪ್ರಾರಂಭವಾಗಲಿದೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.