ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂಭಾಗದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಹಾರಾಷ್ಟ್ರದ ಸಂಸದೆ ನವ್ ನೀತ್ ರಾಣಾ ಹಾಗೂ ಪತಿ, ಪಕ್ಷೇತರ ಶಾಸಕ ರವಿ ರಾಣಾಗೆ ಮುಂಬಯಿ ವಿಶೇಷ ಕೋರ್ಟ್ ಬುಧವಾರ (ಮೇ 04) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೆಹಲಿಯಿಂದ ಸೂಚನೆ ಬಂದ ನಂತರ ಕ್ಯಾಬಿನೆಟ್ ವಿಸ್ತರಣೆ: ಸಿಎಂ ಬೊಮ್ಮಾಯಿ
ನವ್ ನೀತಿ ರಾಣಾ ಹಾಗೂ ರವಿ ರಾಣಾ ಅವರನ್ನು ಷರತ್ತಿನ ಆಧಾರದ ಮೇಲೆ ಬಿಡುಗಡೆಗೊಳಿಸಲು ಅವಕಾಶ ನೀಡಿರುವುದಾಗಿ ಕೋರ್ಟ್ ಹೇಳಿದೆ.
ಸಿಎಂ ಉದ್ಧವ್ ಠಾಕ್ರೆ ಮಾತೋಶ್ರೀ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿ, ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ನವ್ ನೀತ್ ಹಾಗೂ ರವಿ ರಾಣಾ ಅವರನ್ನು ಏಪ್ರಿಲ್ 23ರಂದು ಪೊಲೀಸರು ಬಂಧಿಸಿದ್ದರು.
ನಂತರ ಭಾನುವಾರ ಮುಂಬಯಿ ಕೋರ್ಟ್ ಸಂಸದೆ ನವ್ ನೀತ್ ರಾಣಾ ಹಾಗೂ ರವಿ ರಾಣಾಗೆ ಮೇ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಮತ್ತೊಂದೆಡೆ ಜಾಮೀನು ನೀಡುವಂತೆ ಕೋರಿ ರಾಣಾ ದಂಪತಿ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದರು.
ರಾಣಾ ದಂಪತಿ ತನಿಖೆಗೆ ಸಹಕರಿಸಬೇಕು. ಒಂದು ವೇಳೆ ಪೊಲೀಸರು ವಿಚಾರಣೆಗೆ ಕರೆದಾಗ ಇಬ್ಬರು ಹಾಜರಾಗಬೇಕು ಎಂದು ವಿಶೇಷ ಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿರುವುದಾಗಿ ವರದಿ ತಿಳಿಸಿದೆ.