Advertisement

ಹ್ಯಾಂಗ್‌ಮ್ಯಾನ್‌ ಒಬ್ಬನ ಆತ್ಮಕತೆ

10:10 AM Jan 19, 2020 | Lakshmi GovindaRaj |

ಜಗತ್ತಿನ ವಿಶೇಷ ವೃತ್ತಿಗಳಲ್ಲಿ ಹ್ಯಾಂಗ್‌ಮ್ಯಾನ್‌ ಕೆಲಸವೂ ಒಂದು. ಪಾಪಿಗಳನ್ನು ನೇಣಿಗೇರಿಸಿ, ಅವರ ಬದುಕಿಗೆ ಅಂತ್ಯ ಬರೆಯುವಾತನೆ ಹ್ಯಾಂಗ್‌ಮ್ಯಾನ್‌. ನಿರ್ಭಯಾ ಹಂತಕರ ಕುಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ನಮ್ಮ ನಾಡಿನ ಹ್ಯಾಂಗ್‌ಮ್ಯಾನ್‌ ಯಾಕೋ ನೆನಪಾಗುತ್ತಾನೆ. ಕರ್ನಾಟಕದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ಗಲ್ಲಿಗೇರಿಸುವ ಏಕೈಕ ಜೈಲು, ಬೆಳಗಾವಿಯ ಹಿಂಡಲಗಾ ಜೈಲು. ಅಲ್ಲಿ ಕೆಲಸ ಮಾಡಿ, 11 ಅಪರಾಧಿಗಳ ಜೀವಕ್ಕೆ ಮುಕ್ತಿ ಕಾಣಿಸಿ, ಈಗ ನಿವೃತ್ತರಾದ ಹ್ಯಾಂಗ್‌ಮ್ಯಾನ್‌ ಒಬ್ಬರು, ಆ ಕೆಲಸದ, ಗಲ್ಲಿಗೇರಿಸುವ ಕ್ಷಣದ ಸವಿವರವನ್ನು ಮುಂದಿಟ್ಟಿದ್ದಾರೆ. “ಸ್ವರೂಪಾನಂದ ಎಂ. ಕೊಟ್ಟೂರು’ ನಿರೂಪಿಸಿದ್ದಾರೆ…

Advertisement

ಗಲ್ಲು! ಶಾಲಾ ದಿನಗಳಲ್ಲಿ ಈ ಶಬ್ದ ಕೇಳಿದಾಗ, ಮೈಯೆಲ್ಲ ಉರಿಯುತ್ತಿತ್ತು. ನಮ್ಮ ನೆಲದ ಅಪ್ಪಟ ದೇಶಭಕ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು, ನಂದಗಡದಲ್ಲಿ ಕಾನೂನುಬಾಹಿರವಾಗಿ ಗಲ್ಲಿಗೇರಿಸಿದ ಕತೆಯೇ ಕಣ್ಣೆದುರು ಚಿತ್ರವಾಗಿ ನಿಲ್ಲುತ್ತಿತ್ತು. 1973ರಲ್ಲಿ ಯಾವಾಗ ನಾನು ಹೊಟ್ಟೆಪಾಡಿಗೆ, ಕಾರಾಗೃಹ ಇಲಾಖೆಗೆ ಸೇರಿದೆನೋ, “ಗಲ್ಲು’ ಶಬ್ದ ನನ್ನೊಳಗೆ ಬೇರೆ ಅರ್ಥದಲ್ಲಿ ತೂಗತೊಡಗಿತು. ಸೀನಿಯರ್‌ಗಳು, “ಬಾರೋ ತಮ್ಮಾ… ಹ್ಯಾಂಗಿಂಗ್‌ ಕೆಲ್ಸ ಕಲಿಸ್ತೀವಿ’ ಎಂದು ಕರೆದಾಗ, ನನ್ನ ವೃತ್ತಿಯ ಬಗ್ಗೆ ನನಗೇನೋ ಹೆಮ್ಮೆ ಮೂಡಿತ್ತು. ಕ್ರಾಂತಿವೀರರಿಗೆ ಗಲ್ಲು ಆಗುವ ಕಾಲ ಇದಲ್ಲ; ಈಗೇನಿದ್ದರೂ ಅಪರಾಧಿಗಳಿಗೆ ಗಲ್ಲು ಆಗುವ ಕಾಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ.

ಗಲ್ಲು ಶಿಕ್ಷೆಗೆ ಒಳಗಾದವರ ಕೊನೆಯ ವಾಸವೇ ಅಂಧೇರಿ ಕೋಣೆ. ಶಿಕ್ಷೆಗೆ ಗುರಿಯಾಗುವ 24 ಗಂಟೆ ಮೊದಲು, ಆತನನ್ನು ಈ ಕೋಣೆಯಲ್ಲಿ ಬಂಧಿಸಿಡುತ್ತಾರೆ. ಹಾಸಿಗೆ, ದಿಂಬು ಬಿಟ್ಟರೆ, ಅವನ ಬಳಿ ಯಾವ ವಸ್ತುವನ್ನೂ ಬಿಡುವುದಿಲ್ಲ. ಸುತ್ತಲೂ ಕಣ್ಗಾವಲು. ಬ್ರಿಟಿಷರ ಕಾಲದಲ್ಲಿ ಅಂಧೇರಿ ಕೋಣೆಯ ಒಳಗೋಡೆಗಳಿಗೆ ಕಪ್ಪು ಬಣ್ಣ ಬಳಿದು, ಸಂಪೂರ್ಣ ಕತ್ತಲು ಆವರಿಸುವಂತೆ ಮಾಡಲಾಗುತ್ತಿತ್ತು. ಈಗ ಆ ಕೋಣೆಯ ವಾತಾವರಣ ಬಹಳಷ್ಟು ಸುಧಾರಿಸಿದೆ. ಮೊದಲಿಗೆ, ಆ ಕೋಣೆಗೆ ಹೋದಾಗ, ತಲೆ ತಗ್ಗಿಸಿ ಕುಳಿತ ಕೈದಿಯ ಪಾಪಕೃತ್ಯ ತಿಳಿದು, ರಕ್ತ ಕೊತ ಕೊತ ಕುದಿಯುತ್ತಿತ್ತು. ಇಂಥ ಪಾತಕಿಗಳನ್ನು ನೇಣಿಗೇರಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದೇ ಭಾವಿಸಿಬಿಟ್ಟೆ.

ಹ್ಯಾಂಗ್‌ಮ್ಯಾನ್‌ ಕೆಲಸಕ್ಕೆ ಒಪ್ಪಿಕೊಂಡಾಗ ನನಗೆ ಆಗಿನ್ನೂ ಇಪ್ಪತ್ತರ ಹರೆಯ. ಸಹಜವಾಗಿ ಇತರರಿಗಿಂತ ಕೊಂಚ ಹೆಚ್ಚಾಗಿಯೇ ಧೈರ್ಯ, ಉತ್ಸಾಹ, ಕುತೂಹಲ ಇತ್ತು. ಪಾಸಿ ಕೈದಿಗಳನ್ನು ನೇಣು ಕಂಬಕ್ಕೇರಿಸುವ ಕೆಲಸ ಕಲಿಯಲು, ಗಟ್ಟಿ ಹೆಜ್ಜೆ ಇಟ್ಟೆ. ಆ ಕ್ಷಣದಿಂದ ಜೈಲಿನಲ್ಲಿ ಇತರ ಕೈದಿಗಳು ನನ್ನನ್ನು ನೋಡುವ ದೃಷ್ಟಿಕೋನವೇ ಬದಲಾಯಿತು. ದೂರದಿಂದಲೇ ನನ್ನತ್ತ ಬೆರಳು ತೋರಿಸಿ, “ಇವ್ನೇ ನೇಣಿಗೇರ್ಸೋನು’ ಅಂತ ಮಾತಾಡಿಕೊಳ್ಳುತ್ತಿದ್ದರು. ಕೈದಿಗಳ ಕಣ್ಣಿಗೆ ಅಕ್ಷರಶಃ ವಿಲನ್‌ ಆಗಿಬಿಟ್ಟೆ. ಅವರು ನನ್ನೊಟ್ಟಿಗೆ ಮಾತಾಡಲೂ ಅಂಜುತ್ತಿದ್ದರು.

ದಿನದಿಂದ ದಿನಕ್ಕೆ ಸೊರಗುತ್ತಾರೆ…: ನಾನು ನೋಡಿದಂತೆ ಪಾಸಿ ಶಿಕ್ಷೆ ಡೆತ್‌ ವಾರೆಂಟ್‌ ಪ್ರಕಟವಾಗಿ ಗರಿಷ್ಠ 15-20 ದಿನಗಳಷ್ಟೇ ಗಲ್ಲಿಗೇರಿಸಲು ಕಾಲಾವಕಾಶ ಇರುತ್ತೆ. ಅಷ್ಟರಲ್ಲಿ ಪಾಸಿ ಕೈದಿಗಳು ದಿನದಿಂದ ದಿನಕ್ಕೆ ಸೊರಗುತ್ತಾರೆ. ಒಂದು ರೀತಿ ಜೀವಂತ ಶವ ಅಂತಾರಲ್ಲ; ಹಾಗೆಯೇ ಕಾಣಿಸ್ತಾರೆ. ಅರ್ಧ ಸತ್ತಂತ್ತಿದ್ದ ಅವರ ಮನಃಸ್ಥಿತಿ ಹೇಗಿರುತ್ತೆ ಎನ್ನುವುದು ವಿವರಣೆಗೂ ಸಿಗುವುದಿಲ್ಲ. ಆತ್ಮಹತ್ಯೆಗೂ ಹೇಸುವುದಿಲ್ಲ. ಹಾಗಾಗಿ, ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೇವೆ.

Advertisement

ಗ್ಯಾಲರಿ ಎಂಬ ಕೊನೆಯ ನಿಲ್ದಾಣ: ಗಲ್ಲಿಗೇರಿಸುವ ಸ್ಥಳಕ್ಕೆ ಗ್ಯಾಲರಿ ಎನ್ನುತ್ತೇವೆ. ಹಿಂಡಲಗಾ ಜೈಲಲ್ಲಿ ಏಕಕಾಲಕ್ಕೆ 3 ಕೈದಿಗಳನ್ನು ಗಲ್ಲಿಗೇರಿಸಬಹುದು. ಇದುವರೆಗೆ ಇಲ್ಲಿ 39 ಕೈದಿಗಳ ಪ್ರಾಣಪಕ್ಷಿ ಹಾರಿಹೋಗಿದೆ. ಗ್ಯಾಲರಿಯ ತಗ್ಗು 14 ಅಡಿ ಇದ್ದು, ಮೇಲ್ಗಡೆ ಭಾಗ 7 ಅಡಿ, ಒಟ್ಟು 21 ಅಡಿ ಇರುತ್ತೆ. ಗ್ಯಾಲರಿ ಪರಿಸರವನ್ನು ವಾರಕ್ಕೊಮ್ಮೆ ಸ್ವಚ್ಛವಾಗಿಟ್ಟಿರುತ್ತೇವೆ. ಕಬ್ಬಿಣದ ಉಪಕರಣಗಳಿಗೆ ಗ್ರೀಸ್‌ ಹಚ್ಚುತ್ತೇವೆ. ಈ ಯಂತ್ರವನ್ನು ಚೆನ್ನಾಗಿ ನೋಡಿಕೊಳ್ಳುವುದು,

ಹ್ಯಾಂಗ್‌ಮ್ಯಾನ್‌ನ ಕೆಲಸ. ಕೋರ್ಟ್‌ ಆದೇಶ ಹೊರಬಿದ್ದ ತಕ್ಷಣದಿಂದ ನಮ್ಮ ಕೆಲಸ ಚುರುಕಾಗುತ್ತದೆ. ನಮ್ಮಲ್ಲಿಯೇ ಇತರೆ ಸೆಲ್‌ಗಳಲ್ಲಿದ್ದ, ರಾಜ್ಯದ ಬೇರೆ ಜೈಲುಗಳಿಂದ ಬಂದಂಥ ಪಾಸಿ ಕೈದಿಗಳನ್ನು ಕೂಡಲೇ ಅಂಧೇರಿ ಕೋಣೆಗೆ ಸ್ಥಳಾಂತರಿಸುತ್ತೇವೆ. ಹಿಂಡಲಗಾ ಜೈಲಿನಲ್ಲಿ 24 ಅಂಧೇರಿ ಕೋಣೆಗಳಿವೆ. ಅವರನ್ನು ಸೆಲ್‌ನ ಆಚೆಗೆ ಬಿಡುವಂತೆಯೇ ಇಲ್ಲ. ಅಗತ್ಯ ವಸ್ತುಗಳೇನೇ ಇದ್ದರೂ, ಅಲ್ಲಿಗೇ ಪೂರೈಸುತ್ತೇವೆ. ಅಂಧೇರಿ ಕೋಣೆಗೆ ಬಂದ ಪ್ರತಿಯೊಬ್ಬ ಕೈದಿಯ ಮನೋಬಲ ಅದಾಗಲೇ ಕುಸಿದಿರುತ್ತಿತ್ತು.

ಹಗ್ಗ ತಯಾರಿಯ ಕತೆ: ನಿತ್ಯವೂ ಜೈಲಿನಲ್ಲಿ ಹಗ್ಗದ ತಯಾರಿ ನಡೆಯುತ್ತದೆ. ಅದೇ ಹಗ್ಗವನ್ನೇ ನೇಣಿಗೆ ಬಳಸುತ್ತೇವೆ. ನೇಣಿನ ಹಗ್ಗದ ದಪ್ಪ ಮತ್ತು ಉದ್ದ, ಗುಣಮಟ್ಟದ ಬಗ್ಗೆ ಕಾನೂನಿನಲ್ಲಿ ಉಲ್ಲೇಖವಿದೆ. ಒಮ್ಮೆ ಈ ಹಗ್ಗವನ್ನು ಒಬ್ಬರಿಗೆ ಬಳಸಿದ ನಂತರ ಮತ್ತೂಬ್ಬರಿಗೆ ಬಳಸುವಂತಿಲ್ಲ. ಹಿತ್ತಾಳೆ ರಿಂಗ್‌ ಅನ್ನು ಫಿಕ್ಸ್‌ ಮಾಡಿ, ಈ ರಿಂಗ್‌ನ ಹೋಲ್‌ನಲ್ಲಿ ಹಗ್ಗ ಪೋಣಿಸಿ, ಕುಣಿಕೆ ಸಿದ್ಧಮಾಡುತ್ತೇವೆ. ಇಡೀ ಹಗ್ಗಕ್ಕೆ ಬೆಣ್ಣೆ ಹಚ್ಚುತ್ತೇವೆ. ಇದರಿಂದ ಹಗ್ಗ ನುಣುಪಾಗುತ್ತದೆ. ಆ ಹಗ್ಗಕ್ಕೆ ತೂಕದ ಮರಳಿನ ಚೀಲ ಕಟ್ಟಿ, ಅಭ್ಯಸಿಸುತ್ತೇವೆ. ಹೀಗೆ ದಿನವೊಂದಕ್ಕೆ 3-4 ಬಾರಿ, ವಾರಗಳ ಕಾಲ ಅಭ್ಯಾಸ ಮಾಡಿದರೆ, ಹಗ್ಗ ಹಿಗ್ಗಿ- ಕುಗ್ಗಿ ನಂತರ ಒಂದು ಅಳತೆಗೆ ಬರುತ್ತೆ.

ಪಾಸಿ ಕೈದಿಯ ದೇಹದ ತೂಕದ ಆಧಾರ ಮೇಲೆ ಗ್ಯಾಲರಿಗೆ ಎಷ್ಟು ಅಡಿ ಉದ್ದದ ಹಗ್ಗ ಬಿಡಬೇಕು ಎಂದು ನಿರ್ಧರಿಸಲಾಗುತ್ತೆ. ರಾತ್ರಿಯೇ ನೇಣಿಗೆ ಹಾಕಲು ಬೇಕಾದ ಸಿದ್ಧತೆ ಪೂರ್ಣಗೊಂಡಿರುತ್ತದೆ. ಬೆಳಗಿನ ಜಾವ ಆತನಿಗೆ ಸ್ನಾನ ಮಾಡಿಸಲಾಗುತ್ತೆ. ಗ್ಯಾಲರಿಗೆ ಕರೆತರುವ ಮುಂಚೆ ಅಂದರೆ ಹೊರಾಂಡದಲ್ಲಿ ಅಥವಾ ವಿಕೆಟ್‌ ಡೋರ್‌ನಲ್ಲಿ ಪಾಸಿ ಕೈದಿಯ ಮುಖಕ್ಕೆ ಕರೆಚೀಲ ತೊಡಿಸುತ್ತೇವೆ. ನೇಣಿಗೇರಿಸುವ ಕ್ಷಣದಲ್ಲಿ ಗ್ಯಾಲರಿಯಲ್ಲಿ ಸೂಜಿ ಬಿದ್ದ ಸದ್ದೂ ಕೇಳುವಷ್ಟು ನಿಶ್ಶಬ್ದ. ಒಬ್ಬ ಪಾಸಿ ಕೈದಿಗೆ ಗಲ್ಲಿಗೇರಿಸಲು ಹ್ಯಾಂಗ್‌ಮ್ಯಾನ್‌ ಸಹಾಯಕ್ಕೆ 3- 4 ಸಿಬ್ಬಂದಿ ಇರುತ್ತಾರೆ. ಎಲ್ಲರೂ ಸೇರಿ ಕೈದಿಯ ಎರಡೂ ಕಾಲು ಸೇರಿಸಿ, ಎರಡೂ ರಟ್ಟೆಗಳಿಗೆ ಎದೆಭಾಗ ಬಳಸಿ, ಎರಡೂ ಕೈಗಳಿಗೆ ಹಿಂದೆ ಒಯ್ದು… ಹೀಗೆ ಮೂರು ಕಡೆ ಲೆದರ್‌ ಬೆಲ್ಟ್ನಿಂದ ಬಿಗಿಯುತ್ತೇವೆ.

ಆ ಕ್ಷಣ ಹೇಗಿರುತ್ತೆ?: ಗಲ್ಲಿಗೇರಿಸುವ ಸಮಯ ಆಗುತ್ತಿದ್ದಂತೆ ಅಧಿಕಾರಿಯೊಬ್ಬರು ಬೆರಳಿನಿಂದ ಸನ್ನೆ ಮಾಡ್ತಾರೆ. ಆಗ ಹ್ಯಾಂಡಲ್‌ ಸರಿಸುತ್ತೇವೆ. ಬಾಗಿಲು ಓಪನ್‌ ಆಗುತ್ತೆ. ಪಾಸಿ ಕೈದಿಯ ದೇಹ ಸರ್ರನೆ ಕೆಳಗೆ ಇಳಿಯುತ್ತೆ. ಕುಣಿಕೆ ಕುತ್ತಿಗೆ ಬಿಗಿದು ಕ್ಷಣಾರ್ಧದಲ್ಲಿ ಪ್ರಾಣಪಕ್ಷಿ ಹಾರಿ ಹೋಗುತ್ತೆ. ಸುಮಾರು 10-15 ನಿಮಿಷದ ನಂತರ ಅಲ್ಲಿದ್ದ ವೈದ್ಯರು ಪರೀಕ್ಷಿಸಿ, ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸುತ್ತಾರೆ. ಆ ಗಲ್ಲಿಗೇರಿಸುವ ದೃಶ್ಯ ವಾರಗಟ್ಟಲೆ ಕಳೆದರೂ ನಮ್ಮ ಕಣ್ಣಲ್ಲಿ ಜೀವಂತವಾಗಿರುತ್ತದೆ.

5 ರೂ. ವಿಶೇಷ ಭತ್ಯೆ!: ಬಿಜಾಪುರ ಜಿಲ್ಲೆಯ ರೂಡಗಿಯಲ್ಲಿ 19 ಜನರನ್ನು ಸಜೀವ ದಹನ ಮಾಡಿದ ಆರು ಮಂದಿಯನ್ನು 1976ರಲ್ಲಿ ಗಲ್ಲಿಗೇರಿಸಲಾಗಿತ್ತು. ಅದೇ ನನ್ನ ಮೊದಲ ಮತ್ತು ರೋಚಕ ಅನುಭವ. ಸೀನಿಯರ್ಸ್‌ ಜೊತೆಗಿದ್ದರೂ ಮನದಲ್ಲಿ ಏನೋ ಒಂಥರ ತೊಳಲಾಟ. ಕಸಿವಿಸಿ. ಅಂಜಿಕೆ. ಗುಂಡಿಗೆಯನ್ನು ಎಷ್ಟೇ ಗಟ್ಟಿ ಮಾಡಿಕೊಂಡರೂ ಒಂದು ಜೀವ ತೆಗೆಯುವಾಗ ಆಗುವ ಹೊಯ್ದಾಟ, ತಳಮಳ ಅನುಭವಿಸಿದವರಿಗಷ್ಟೇ ಗೊತ್ತು. ಒಂದೆಡೆ ಹೆಮ್ಮೆ, ಮತ್ತೂಂದೆಡೆ ಕರಳು ಚುರ್ರ ಎನ್ನುವ ಸನ್ನಿವೇಶ. ಅಂದು ನನಗೆ ಸಿಕ್ಕ ಸಂಬಳ 216 ರೂಪಾಯಿ! ವಿಶೇಷ ಭತ್ಯೆ ಎಂದು, 5 ರೂ.ಗಳನ್ನು ನೀಡಲಾಗಿತ್ತು.

ಜೈಲಲ್ಲೇ ಮಣ್ಣಾಗುತ್ತಾರೆ…: 1978ರಲ್ಲಿ ಅಟಾಲಿಟಿ ಮರ್ಡರ್‌ ಕೇಸ್‌ನಲ್ಲಿ 5 ಜನಕ್ಕೆ ಗಲ್ಲಿಗೇರಿಸುವಾಗಲೂ ನಾನೇ ಹ್ಯಾಂಗ್‌ಮ್ಯಾನ್‌ ಆಗಿದ್ದೆ. ಹೀಗೆ ನನ್ನ ಸರ್ವಿಸ್‌ನಲ್ಲಿ ಒಟ್ಟು 11 ಮಂದಿಗೆ ಗಲ್ಲಿಗೇರಿಸುವ ಕೆಲಸ ಮಾಡಿದ್ದೇನೆ. ಬರುಬರುತ್ತಾ ಇದು ಮಾಮೂಲಿ ಕೆಲಸ ಅಂತನ್ನಿಸುತ್ತಿತ್ತು. ಗಲ್ಲಿಗೇರಿಸಿದ ಬಳಿಕ ಶವಗಳನ್ನು ಅವರ ಬಂಧು ಬಳಗಕ್ಕೆ ತೋರಿಸಿ, ಆ ವ್ಯಕ್ತಿ ಸೇರಿದ ಧರ್ಮ, ಜಾತಿಯ ವಿಧಿ ವಿಧಾನಗಳಿಗೆ ಅನುಗುಣವಾಗಿ ಜೈಲಿನ ಹೊರಗಡೆ ಇರುವ “ಪಕುರುಮಡ್ಡಿ’ ಎಂಬ ಸ್ಥಳದಲ್ಲಿ ದಫ‌ನ್‌ ಮಾಡುತ್ತಿದ್ದೆವು. ಇವರಂತೆ ಇತರೆ ಕೈದಿಗಳು ಸತ್ತರೂ ಇಲ್ಲಿಯೇ ಮಣ್ಣು ಮಾಡಲಾಗುತ್ತಿತ್ತು. ಮುಂದೆ ನಾನು ಜೈಲರ್‌ ಆಗಿ, 2010ರಲ್ಲಿ ನಿವೃತ್ತಿಯಾದೆ. ದೇಶದಲ್ಲಿ ಗಲ್ಲು ಶಿಕ್ಷೆಯ ಸುದ್ದಿ ಬಂದಾಗಲೆಲ್ಲ, ಈ ಕತೆಗಳೆಲ್ಲ ಈ ಕಣ್ಣೆದುರು ಬರುತ್ತಿವೆ.

“ಢಗ್‌’, ಅದೇ ಕೊನೇ ಸದ್ದು!: ಹಿಂದೆ ಗಲ್ಲಿಗೇರಿಸುವ ಗ್ಯಾಲರಿ, ಕಟ್ಟಿಗೆಯಿಂದ ನಿರ್ಮಿತವಾಗಿತ್ತು. ಪಾಸಿ ಕೈದಿಯನ್ನು ಗಲ್ಲಿಗೇರಿಸುವ ಕಾಲಕ್ಕೆ ಗ್ಯಾಲರಿ ಮೇಲೆ ಹ್ಯಾಂಗ್‌ಮ್ಯಾನ್‌ ಒಬ್ಬನೇ ಇರಬೇಕು. ಉಳಿದವರೆಲ್ಲ ಕೆಳಗಿರುತ್ತಿದ್ದರು. ಹ್ಯಾಂಡಲ್‌ ಎಳೆಯುತ್ತಿದ್ದಂತೆ ಬಾಗಿಲು ತೆರೆದು ಮುಚ್ಚಿದಾಗ, ಹೆಣ ನೆಲದತ್ತ ಬಿದ್ದಾಗ “ದಢ್‌’ ಎನ್ನುವ ಶಬ್ದ ಬರುತ್ತಿತ್ತು. ಎಂಟೆದೆ ಇದ್ದವರೂ ಆ ಭಯಾನಕ ಶಬ್ದಕ್ಕೆ ಒಮ್ಮೆಲೆ ಕಂಪಿಸುತ್ತಿದ್ದರು.

ಕೊನೆಯ ಆಸೆ ಕೇಳುವಾಗ…: ಸಾಮಾನ್ಯವಾಗಿ ಕೈದಿಯ ಕೊನೆ ಆಸೆಯನ್ನು ಕೇಳುವುದು, ಗ್ಯಾಲರಿ ಪಕ್ಕದ ಪ್ರತ್ಯೇಕ ಕೋಣೆಯಲ್ಲಿ. ಜೈಲಿನ ಮೇಲಧಿಕಾರಿಗಳು ಇದಕ್ಕೆ ಸಾಕ್ಷಿಯಾಗುತ್ತಾರೆ. ಆಗ ಕೆಲವೊಬ್ಬರು ಗೋಗರೆಯುವುದು, ಅಳುವುದು ಮಾಡುತ್ತಾರೆ. ಹೆಂಡತಿ- ಮಕ್ಕಳ ಮುಖ ನೋಡಬೇಕು ಎನ್ನುತ್ತಾರೆ. ಆ ದೃಶ್ಯಗಳು ನಮ್ಮ ಮನಸ್ಸನ್ನೂ ಕಲಕುತ್ತವೆ. ಆದರೆ..?

* ಸಿದ್ದಪ್ಪ ಕಾಂಬಳೆ, ನಿವೃತ್ತ ಹ್ಯಾಂಗ್‌ಮ್ಯಾನ್‌ ಹಿಂಡಲಗಾ ಜೈಲು, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next