ವರದಿ: ವೀರೇಶ ಮಡ್ಲೂರ
ಹಾವೇರಿ: ಹಾನಗಲ್ಲ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದ್ದು, ಕ್ಷೇತ್ರದಲ್ಲಿನ ಜಾತಿ, ಸಮುದಾಯದವರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ತಂತ್ರಗಾರಿಕೆ ಹೆಣೆಯುತ್ತಿವೆ.
ದಿ.ಸಿ.ಎಂ.ಉದಾಸಿ ನಿಧನದಿಂದ ತೆರವುಗೊಂಡ ಹಾನಗಲ್ಲ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಹಲವು ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳನ್ನು ಅಂತಿಮವಾಗಿ ಕಣಕ್ಕಿಳಿಸಿದ್ದು, ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿವೆ. ಪ್ರಬಲ ಸಮುದಾಯದ ಮತ ಸೆಳೆಯಲು ಆಯಾ ಸಮುದಾಯದ ನಾಯಕರನ್ನೇ ಕರೆಸಿ ಪ್ರಚಾರ ಆರಂಭಿಸಿವೆ. ಕ್ಷೇತ್ರದಲ್ಲಿ ಲಿಂಗಾಯತ ಉಪ ಪಂಗಡಗಳಾದ ಪಂಚಮಸಾಲಿ, ಸಾದರ, ಬಣಜಿಗ, ಗಾಣಿಗ ಮತಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ಗಂಗಾಮತ ಸಮಾಜದ ಮತಗಳೂ ಸಾಕಷ್ಟಿವೆ. ಪರಿಶಿಷ್ಟ ಜಾತಿ, ಪಂಗಡದ ಮತಗಳನ್ನೂ ಸೆಳೆದು ಗೆಲ್ಲಲು ಎರಡೂ ಪಕÒಗಳು ತಂತ್ರಗಾರಿಕೆ ರೂಪಿಸುತ್ತಿವೆ.
ಬಿಜೆಪಿಯಲ್ಲಿ ಮುರುಗೇಶ ನಿರಾಣಿ, ಎನ್. ರವಿಕುಮಾರ್, ರಾಜುಗೌಡ, ಬಿ.ಸಿ.ಪಾಟೀಲ ಮುಂತಾದ ಪ್ರಬಲ ಸಮುದಾಯದ ನಾಯಕರನ್ನೇ ಉಸ್ತುವಾರಿಗಳನ್ನಾಗಿ ಮಾಡಲಾಗಿದೆ. ಕಾಂಗ್ರೆಸ್‌ನಲ್ಲಿ ಇದೇ ರೀತಿ ಪ್ರಚಾರ ಆರಂಭಿಸಿದ್ದು, ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರ ಮತ ಸೆಳೆಯಲು ಮಾಜಿ ಸಚಿವ ಯು.ಟಿ.ಖಾದರ ಅವರನ್ನು ಕರೆಸಿ ಪ್ರಚಾರ ನಡೆಸಲಾಗುತ್ತಿದೆ. ಅದರಂತೆ ಸಲೀಂ ಅಹ್ಮದ್, ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಮುಂತಾದ ಪ್ರಬಲ ಸಮುದಾಯದ ನಾಯಕರನ್ನೇ ಉಸ್ತುವಾರಿಗಳನ್ನಾಗಿ ಮಾಡಲಾಗಿದೆ. ಆಯಾ ಸಮುದಾಯ ನಾಯಕರನ್ನು ಕರೆ ತಂದು ಪ್ರಚಾರ ನಡೆಸಲಾಗುತ್ತಿದ್ದು, ಇನ್ನಿಲ್ಲದ ತಂತ್ರಗಾರಿಕೆಗೆ ಕಾಂಗ್ರೆಸ್ ಮುಂದಾಗುತ್ತಿದೆ. ಜೆಡಿಎಸ್ ಸಹ ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಂತಿದೆ. ಅಭ್ಯರ್ಥಿ ನಿಯಾಜ್ ಶೇಖ್ ಎರಡು ತಿಂಗಳಿಂದಲೇ ಪ್ರಚಾರ ನಡೆಸುತ್ತಿದ್ದಾರೆ.