“ಇದು ನನ್ನ ಮಗು. ಇದರ ಕೆಲಸ ನನಗೆ ಹೊರೆಯಾಗುತ್ತದೆ ಎಂದರೆ ಅದರಲ್ಲಿ ಅರ್ಥವಿರುವುದಿಲ್ಲ…’ – ಸುದೀಪ್ ಮನೆಯ ಟೆರೇಸ್ ಮೇಲೆ ತಣ್ಣನೆ ಗಾಳಿ ಬೀಸುತ್ತಿತ್ತು. ಬಿಸಿ ಬಿಸಿ ಕಾಫಿ ಹೀರುತ್ತಾ ಸುದೀಪ್ ಮಾತು ಶುರು ಮಾಡಿದ್ದರು. ಮಾತು ಆರಂಭವಾಗಿದ್ದು, “ವಿಕ್ರಾಂತ್ ರೋಣ’ ಸಿನಿಮಾದಿಂದ. ಅಲ್ಲಿಂದ ಆರಂಭವಾದ ಮಾತು, ಅವರ ಕೆರಿಯರ್, ಯೋಚನೆ, ನಿರ್ಧಾರ… ಹೀಗೆ ಹಲವು ವಿಚಾರಗಳನ್ನು ದಾಟಿಕೊಂಡು ಮುಂದೆ ಸಾಗುತ್ತಲೇ ಇತ್ತು.
ಸುದೀಪ್ ಇಲ್ಲಿ ನನ್ನ ಮಗು ಎಂದು ಹೇಳಿದ್ದು “ವಿಕ್ರಾಂತ್ ರೋಣ’ ಸಿನಿಮಾವನ್ನು. ಈ ಚಿತ್ರ ಜುಲೈ 28ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಭರದಿಂದ ಪ್ರಚಾರ ಕಾರ್ಯ ಸಾಗಿದೆ. ಚಿತ್ರದ ಪ್ರಚಾರಕ್ಕೆ ಸುದೀಪ್ ನಾನಾ ಕಡೆಗಳಿಗೆ ತೆರಳುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ದೇಶದಾದ್ಯಂತ ಪ್ರಚಾರದ ಅಗತ್ಯವಿದೆ. ಈ ಸುತ್ತಾಟ ಹೊರೆ ಅನಿಸುತ್ತದೆಯೇ ಎಂಬ ಪ್ರಶ್ನೆ ಸುದೀಪ್ ಅವರಿಗೆ ಎದುರಾದಾಗ ತಮ್ಮ ಸಿನಿಮಾವನ್ನು ಮಗುವಿಗೆ ಹೋಲಿಸಿಕೊಂಡು ಮಾತಿಗಿಳಿದರು.
“ಪ್ರಚಾರ ನನಗೆ ಹೊರೆ ಅನಿಸುವುದಿಲ್ಲ. ಬಲವಂತ ಆದರೆ ಹೊರೆ ಅನಿಸುತ್ತದೆ. ಮಾಡೋಕೆ ಇಷ್ಟ ಇಲ್ಲ ಎಂದರೆ ಕಷ್ಟ ಆಗುತ್ತದೆ. ಆದರೆ, ಇದು ನನ್ನ ಮಗು. ನನ್ನ ಮಗಳಿಗೂ, ಚಿತ್ರಕ್ಕೂ ಏನೂ ವ್ಯತ್ಯಾಸವಿಲ್ಲ. ನಾನು ಮಗಳಿಗಾಗಿ ಎಲ್ಲೆಲ್ಲೋ ಓಡಾಡುವುದಿಲ್ಲವೇ? ಅದೇ ರೀತಿ ಇದು ಕೂಡಾ. ನಾನು ನನ್ನ ಮಗುವಿನ ಪರಿಚಯ ಮಾಡಿಕೊಡುವುದಕ್ಕೆ ಹೋಗುತ್ತಿದ್ದೇನೆ. ನನ್ನ ಪರಿಚಯ ಜನಕ್ಕಿದೆ.
ಇದನ್ನೂ ಓದಿ:ವ್ಯವಸ್ಥೆಗೆ ಹಿಡಿದ ಕನ್ನಡಿ ‘ಹೋಪ್’: ವಿಭಿನ್ನ ಪಾತ್ರದಲ್ಲಿ ಶ್ವೇತಾ
“ವಿಕ್ರಾಂತ್ ರೋಣ’ ಎನ್ನುವ ಮಗುವಿನ ವಿಶೇಷತೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕು. ಪ್ರಚಾರ ಬೇಕೇ ಬೇಕು ಅಂತಿಲ್ಲ. ಇಡೀ ಪ್ರಪಂಚಕ್ಕೆ ಕಥೆ ಹೇಳುವುದಕ್ಕೆ ಹೊರಟಿದ್ದೇವೆ ಎಂದರೆ ಅದನ್ನು ಮಾಡಲೇಬೇಕು. ಅದನ್ನು ಹೊರೆ ಅಂತಂದುಕೊಂಡರೆ ನಮ್ಮ ಐಡಿಯಾ ರಾಂಗ್ ಆಗುತ್ತದೆ. ನಾವು ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ತೀರ್ಮಾನಿಸಿದಾಗ, ಎಷ್ಟು ಓಡಾಡಬೇಕು, ಎಷ್ಟು ಮಾತನಾಡಬೇಕು ಎಂಬುದು ಆಗಲೇ ನಿರ್ಧಾರವಾಗುತ್ತದೆ. ಸುಸ್ತಾದರೂ ಇದೊಂದು ಸಿಹಿಯಾದ ಸುಸ್ತು. ಬೇಡದ್ದನ್ನು ಮಾಡಿ ನಿದ್ದೆ ಹಾಳು ಮಾಡಿಕೊಳ್ಳುವ ಬದಲು, ಮಾಡಿದ ಕೆಲಸವನ್ನು ಖುಷಿಯಾಗಿ ಹೇಳಿ ನಿದ್ದೆ ಹಾಳು ಮಾಡಿಕೊಳ್ಳುವುದು ಉತ್ತಮ’ಎನ್ನುವುದು ಸುದೀಪ್ ಮಾತು.
ಎಲ್ಲವೂ ಪ್ಯಾನ್ ಇಂಡಿಯಾ ಆಗಬೇಕಿಲ್ಲ: ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ನಡೆಯುತ್ತಿದೆ. ಅದರಲ್ಲೂ ಸ್ಟಾರ್ ನಟರ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲೇ ಬಿಡುಗಡೆಯಾಗುತ್ತದೆ. ಈ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.
“ನನ್ನ ಪ್ರಕಾರ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಉದ್ದೇಶ ಹಾಗೂ ಮಾರಾಟವಾಗುವಂತಹ ಐಡಿಯಾ ಬಹಳ ಮುಖ್ಯ. ಕೈಯಲ್ಲಿ ದುಡ್ಡಿದೆ ಎಂದು ಮಾಡ ಹೊರಟರೆ ಸೋಲಬೇಕಾಗುತ್ತದೆ, ದುಡ್ಡಿಲ್ಲದೆ ಹೊರಟರೂ ಸೋಲಬೇಕಾಗುತ್ತದೆ. ಹಾಗಂತ ದುಡ್ಡೇ ಮುಖ್ಯವಲ್ಲ. ಎಲ್ಲರೂ ಒಪ್ಪುವಂತಹ ಒಂದು ಕಥೆ ಇರಬೇಕಾಗಿದ್ದು ಬಹಳ ಮುಖ್ಯ. ಈಗ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಾಡುತ್ತಿದ್ದೇವೆ. ಹಾಗಂತ ನನ್ನ ಮುಂದಿನ ಸಿನಿಮಾ ಕೇವಲ ಎರಡು ರಾಜ್ಯಗಳಿಗೆ ಸೀಮಿತವಾಗಬಹುದು. ಆದರೆ, “ವಿಕ್ರಾಂತ್ ರೋಣ’ ಕಥೆಗೆ ಆ ಶಕ್ತಿ, ಸಾಮರ್ಥ್ಯ ಇದೆ ಎಂದನಿಸಿತು ನನಗೆ. ಹಾಗಾಗಿ, ಎಲ್ಲರಿಗೂ ತಲುಪಲಿ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ಗೆದ್ದೇ ಗೆಲ್ಲುತ್ತೇವೆ ಎಂದು ಹೊರಟಿಲ್ಲ. ಕಥೆ ಹೇಳುವುದಕ್ಕೆ ಹೊರಟಿದ್ದೇವೆ. ಮಾಡಿದ್ದೆಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳಾಗುವುದಕ್ಕೆ ಸಾಧ್ಯವಿಲ್ಲ. ಎಲ್ಲದಕ್ಕೂ ಹೊಂದಿಕೊಂಡು ಹೋಗಬೇಕು. ಕಥೆಗೆ ತಕ್ಕ ಹಾಗೆ ಚಿತ್ರ ಮಾಡಬೇಕು. ಈ ಚಿತ್ರದಲ್ಲಿ ಜುಮಾಜಿ, ಟಾರ್ಜನ್‌ನಂತಹ ಪ್ರಪಂಚ ಸೃಷ್ಟಿ ಮಾಡುವುದಕ್ಕೆ ಅವಕಾಶ ಸಿಕ್ಕಿತ. ಕಾಡು, ಪ್ರಾಣಿ.. ಹೀಗೆ ಹೊಸ ಲೋಕವೇ ಇಲ್ಲಿದೆ. ಈ ಜಾನರ್ ನನಗೆ ಹೊಸದು. ಕಥೆ ಎಕ್ಲೈಟ್ ಆಯಿತು, ಅದನ್ನು ನೀಟಾಗಿ, ದೊಡ್ಡದಾಗಿಯೇ ಮಾಡಿದ್ದೇವೆ. ಮಿಕ್ಕಿದ್ದು ನೋಡುಗರಿಗೆ ಬಿಟ್ಟಿದ್ದು. ನನ್ನ ಹಿಂದಿನ ಸಿನಿಮಾಗಳನ್ನು ತೆಗೆದುಕೊಂಡರೆ ಅದಕ್ಕೆ ಏನು ಬೇಕೋ ಅದನ್ನು ಮಾಡಿದ್ದೀವಿ. ನಿರ್ದೇಶಕ ಅನೂಪ್‌ಗೆ ಕಲಿಯುವ ಗುಣವಿದೆ. ಗೊತ್ತಿಲ್ಲದಿದ್ದರೂ, ನಾಳೆ ತಿಳಿದುಕೊಂಡು ಬರುತ್ತಾರೆ. ಒಳ್ಳೆಯ ಕ್ಯಾಪ್ಟನ್. ಒಳ್ಳೆಯ ತಂಡ ಸೇರಿಸಿದೆವು. ನಿರ್ಮಾಪಕ ಮಂಜು ದೊಡ್ಡ ಸಿನಿಮಾ ಮಾಡಿ ಈಗ ದೊಡ್ಡ ವ್ಯಕ್ತಿ ಆಗಿಬಿಟ್ಟ. ಎಲ್ಲರೂ ಹೆದರಿಸಿದ್ದರು. ಆದರೂ ಮಾಡಿದ. ಚಿಕ್ಕ ಥಾಟ್‌ನಿಂದ ಶುರುವಾದ ಸಿನಿಮಾ ಈಗ ದೊಡ್ಡದಾಗಿದೆ’ ಎಂದು ವಿಕ್ರಾಂತ್ ರೋಣ ಬಗ್ಗೆ ಹೇಳುತ್ತಾರೆ ಸುದೀಪ.
ಬಂದು ಹೋಗುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ: ಸುದೀಪ್ ತಮ್ಮ 26 ವರ್ಷಗಳ ಸಿನಿ ಕೆರಿಯರ್ ನಲ್ಲಿ ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಸಾಕಷ್ಟು ಮಂದಿ ಸ್ನೇಹಿತರು ಬಂದು ಹೋಗಿದ್ದಾರೆ. ಹಾಗಂತ ಸುದೀಪ್ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೇ ಎಲ್ಲವನ್ನು ಸಮಚಿತ್ತ ದಿಂದ ನೋಡುತ್ತಿದ್ದಾರೆ.
“ಯಶಸ್ಸು ಬರುತ್ತೆ, ಹೋಗುತ್ತೆ. ನಾವು ಹ್ಯಾಂಡಲ್ ಮಾಡಬೇಕಾಗಿರುವುದು ಸೋಲುಗಳನ್ನು. ಅದನ್ನು ಚೆನ್ನಾಗಿ ಮಾಡುತ್ತೇನೆ. ಜೀವನದಲ್ಲಿ ಸಾಕಷ್ಟು ಸೋಲು ನೋಡಿದ್ದೇನೆ. ಹಾಗಾಗಿ, ಅದು ವಿಶೇಷವೇನಲ್ಲ. ಅದರ ನಂತರವೂ ಒಂದು ಯಶಸ್ಸು ಬರುತ್ತದೆ. ಈ ಸಂದರ್ಭದಲ್ಲಿ ತಾಳ್ಮೆ ಬಹಳ ಮುಖ್ಯ. ಅನೇಕ ಸ್ನೇಹಿತರು ಜೀವನದಲ್ಲಿ ಬಂದು ಹೋಗಿದ್ದಾರೆ. ಕೆಲವರು ಇನ್ನೂ ಇದ್ದಾರೆ. ಇನ್ನು ಕೆಲವರು ಯಾವ ಉದ್ದೇಶಕ್ಕಾಗಿ ಬಂದಿದ್ದಾರೋ, ಅದನ್ನು ಮಾಡಿ ಹೋಗಿದ್ದಾರೆ. ಅವರು ಯಾವ ಕಾರಣಕ್ಕೆ ಹುಟ್ಟಿದ್ದಾರೋ, ಅವರು ಅದನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅವರು ಹಾಗೆ ಮಾಡಿದರೆ, ಹೀಗೆ ಮಾಡಿದರು ಅನ್ನೋದು ಬೇಡ. ಅಂತಿಮವಾಗಿ ಯಾರನ್ನು ಉಳಿಸಿಕೊಂಡೆವು, ಕಳೆದುಕೊಂಡೆವು ಅಂತ ಒಂದು ಲಿಸ್ಟ್ ಹಾಕಿ. ಯಾವ ಹೆಸರು ಬರುತ್ತದೋ ನೋಡಿಕೊಂಡು ಖುಷಿಪಡಿ. ನಾನೊಂದು ಲಿಸ್ಟ್ ಹಾಕುತ್ತೇನೆ, ಏನು ಸಂಪಾದಿಸಿದೆ, ಯಾರು ನನ್ನ ಜತೆಗೆ ಇದ್ದಾರೆ ಎಂದು. ಆ ಲಿಸ್ಟ್ ಎತ್ತಿ ಹೇಳುತ್ತೆ, ನಿಮ್ಮ ಜೀವನದಲ್ಲಿ ಯಾರ್ಯಾರು ಇದ್ದಾರೆ ಹಾಗೂ ನೀವೇನು ಎಂಬುದನ್ನು…. ನಿಮ್ಮ ಹಳೆಯ ಸ್ನೇಹಿತರು ಈಗಲೂ ಯಾರ್ಯಾರು ಇದ್ದಾರೆ ಎನ್ನುವುದು ನೀವು ಎಂಥಾ ಸ್ನೇಹಿತ ಎಂಬುದನ್ನು ತೋರಿಸುತ್ತದೆ. ನನಗೆ ತುಂಬಾ ಸ್ನೇಹಿತರಿದ್ದಾರೆ. ಆಗಿನಿಂದ ಇಲ್ಲಿಯವರೆಗೂ. ಹೋದವರೆಲ್ಲ ಒಳ್ಳೆಯ ಕಾರಣಕ್ಕೆ ಹೋದರು ಅಂತಂದುಕೊಂಡು ಸುಮ್ಮನಾಗಿ ಬಿಡುತ್ತೇನೆ. ಕೆಲವೊಮ್ಮೆ ಪ್ರಕೃತಿ ಸಹ ಅದೇ ರೀತಿ ಮಾಡುತ್ತದೆ. ಕೆಲವರಿಗೆ ಇಷ್ಟೇ ಅಂತ ಬರೆದಿರುತ್ತದೆ. ಅದನ್ನು ತಪ್ಪಿಸುವುದು ಕಷ್ಟ’ ಎಂದು ತಮ್ಮ ಲೈಫ್ನಲ್ಲಿ ಬಂದು ಹೋದವರ ಬಗ್ಗೆ ಹೇಳುತ್ತಾರೆ ಸುದೀಪ್.
ರವಿಪ್ರಕಾಶ್ ರೈ