ಬೆಂಗಳೂರು: ಪ್ರಬಲ ಸಮುದಾಯದ ಕಾಂಬಿನೇಷನ್ ನಡುವೆಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ “ಸಿಂಗಲ್’ ಡಿಜಿಟ್‌ಗೆ ಸೀಮಿತವಾಗಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ “ಜಾತಿ’ಬಲ “ಅಧಿಕಾರ’ ಬಲಕ್ಕೆ ಮನ್ನಣೆಯಿಲ್ಲ ಎಂಬುದು ಸಾಬೀತುಪಡಿಸಿದೆ. ಹತ್ತು ವರ್ಷಗಳಲ್ಲಿ ಬಿಜೆಪಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕವಷ್ಟೇ ಅಲ್ಲದೆ ಹಳೇ ಮೈಸೂರು ಭಾಗದ ಮನೆಅಂಗಳಕ್ಕೂ ಬಂದು ನೆಲೆ ಭದ್ರಪಡಿ ಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ಅನಾಯಾಸವಾಗಿ ದಾರಿ ಮಾಡಿಕೊಟ್ಟಂತಾಗಿದೆ.
ಮೂಲತಃ ಕಾಂಗ್ರೆಸ್ ನೆಲ ಹಾಗೂ ಜೆಡಿಎಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಚಾಮರಾಜನಗರ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ರಾಜ್ಯದಲ್ಲಿ ತಳಮಟ್ಟದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿರುವ ಸಂಕೇತವಾಗಿದೆ. ಬಿಜೆಪಿಗೆ ಆಶ್ಚರ್ಯವಾಗುವ ಈ ಫಲಿತಾಂಶದಿಂದ ಚೇತರಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಒಂದು ದಶಕವಾದರೂ ಬೇಕಾಗಬಹುದು. ಏಕೆಂದರೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಇದುವರೆಗೂ ಬಿಜೆಪಿ ಗೆಲುವು ಕಂಡಿದ್ದಿಲ್ಲ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿ ಒಂದು ಡಜನ್ ಸಮುದಾಯವಾರು ವರ್ಚಸ್ಸುವುಳ್ಳ ನಾಯಕರಿದ್ದರೂ ಜೆಡಿಎಸ್‌ನಲ್ಲಿ ಎಚ್.ಡಿ.ದೇವೇಗೌಡ, ಎಚ್. ಡಿ.ಕುಮಾರಸ್ವಾಮಿ ಹಾಗೂ ಹಳೇ ಮೈಸೂರಿನಲ್ಲಿ ಒಕ್ಕಲಿಗ ಸಮುದಾಯದ ಸಾರಾಸಗಟು ಬೆಂಬಲ ಇದ್ದರೂ ಈ ಮಟ್ಟದ ಕಳಪೆ ಪ್ರದರ್ಶನ ರಾಜಕಾರಣದಲ್ಲಿ “ಪಾಠ’ವಾಗಿದೆ.
ರಾಜ್ಯ ರಾಜಕಾರಣದ ಚಾಣಾಕ್ಷ ಖ್ಯಾತಿಯ ದೇವೇಗೌಡರ ತಂತ್ರವೂ ಇಲ್ಲಿ ವರ್ಕ್ ಔಟ್ ಆಗಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಎರಡೂ ಸೇರಿ ಪಡೆದಿದ್ದ ಮತಗಳ ಪ್ರಮಾಣ ಹಾಗೂ ವಿಧಾನಸಭೆ ಕ್ಷೇತ್ರದ ಸೀಟುಗಳ ಆಧಾರದ ಮೇಲೆ ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತು ಸೀಟು ಗೆಲ್ಲುವ ಟಾರ್ಗೆಟ್ ಹೊಂದಿದ್ದ ರಾಜಕೀಯ ಭೀಷ್ಮ ದೇವೇಗೌಡರ ಕಾರ್ಯತಂತ್ರವೂ ಕೈ ಕೊಟ್ಟಿದ್ದು ರಾಜಕೀಯ ತಜ್ಞರಲ್ಲೂ ಜಿಜ್ಞಾಸೆ ಮೂಡಿಸಿದೆ.
ಪ್ರತಿ ಕ್ಷೇತ್ರದ ಆಳ -ಅಗಲ, ಜಾತಿವಾರು ಮತಗಳ ಕ್ರೋಢೀಕರಣ, ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ, ನಗರ -ಸ್ಥಳೀಯ ಸಂಸ್ಥೆಗಳವರೆಗೂ ಲೆಕ್ಕಾಚಾರ ಹಾಕಿ ಅಭ್ಯರ್ಥಿ ಆಯ್ಕೆ ಮಾಡಿದರೂ ಅದಕ್ಕಾಗಿಯೇ ನಾನಾ ಕಸರತ್ತು ಮಾಡಿದರೂ ಯಾವುದೇ “ಮ್ಯಾಜಿಕ್’ಮಾಡಲು ಸಾಧ್ಯವಿಲ್ಲ ಎಂಬುದು ಲೋಕಸಭೆ ಫಲಿತಾಂಶದಿಂದ ಸ್ಪಷ್ಟಗೊಂಡಿದೆ. ಕಾಂಗ್ರೆಸ್ ಮಟ್ಟಿಗಂತೂ ಈ ಫಲಿತಾಂಶ ಆಘಾತ ವಷ್ಟೇ ಅಲ್ಲದೆ ನಿಂತ ನೆಲವೇ ಅಲುಗಾಡಿಸಿದಂತಾಗಿದೆ. ಜೆಡಿಎಸ್ ಜತೆಗಿನ ಮೈತ್ರಿಯಿಂದ ನಷ್ಟವಾಯಿತು ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಕಾಂಗ್ರೆಸ್ ನಾಯಕರ ಸಂಘಟಿತ ಪ್ರಯತ್ನದ ಕೊರತೆಯೂ ಸೋಲಿನ ಹಿಂದಿರುವುದು ಸ್ಪಷ್ಟ. ವೈಯಕ್ತಿಕ ಪ್ರತಿಷ್ಠೆ, ಪರಸ್ಪರ ಕಾಲೆಳೆಯುವ ಪ್ರವೃತ್ತಿ ಕಾಂಗ್ರೆಸ್ ಪಕ್ಷವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
ಇಳಿಮುಖ: ಲೋಕಸಭೆ ಕ್ಷೇತ್ರವಾರು ಪುನಾರಚನೆ ನಂತರ 2009ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ -18, ಕಾಂಗ್ರೆಸ್ -7, ಜೆಡಿಎಸ್ -3 ಸ್ಥಾನ ಗಳಿಸಿದ್ದವು. ಆ ನಂತರ ಮಂಡ್ಯ, ಬೆಂಗಳೂರು ಗ್ರಾಮಾಂತರ , ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಜೆಡಿಎಸ್ ಒಂದು ಸ್ಥಾನಕ್ಕೆ ಕುಸಿದಿತ್ತು. 2014 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ- 17, ಕಾಂಗ್ರೆಸ್-9, ಜೆಡಿಎಸ್-2 ಸ್ಥಾನ ಗಳಿಸಿತ್ತು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಕಳೆದುಕೊಂಡು ಕಾಂಗ್ರೆಸ್ ಬಲ 10 ಕ್ಕೆ ಹೆಚ್ಚಿಸಿತ್ತು. ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಜೆಡಿಎಸ್-ಬಿಜೆಪಿ ತಮ್ಮ ತಮ್ಮ ಸ್ಥಾನ ಉಳಿಸಿಕೊಂಡಿತ್ತು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ 18 ಸ್ಥಾನ (ಕಾಂಗ್ರೆಸ್-15, ಜೆಡಿಎಸ್-3 ) ಗೆಲ್ಲುವ ಗುರಿ ಹೊಂದಿತ್ತು. ಆದರೆ, ಎರಡೂ ಪಕ್ಷಗಳು ತಲಾ ಒಂದು ಸ್ಥಾನಕ್ಕೆ ಸೀಮಿತವಾಗಿ, ಜೆಡಿಎಸ್ ತೆಕ್ಕೆಯಲ್ಲಿದ್ದ ಮಂಡ್ಯ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆವರಿಗೆ ಬಿಜೆಪಿ ಬಹಿರಂಗ ಬೆಂಬಲ ಘೋಷಿಸಿದ್ದರಿಂದ ಅವರ ಗೆಲುವಿನಲ್ಲಿ ಬಿಜೆಪಿಯೂ ಪಾತ್ರ ವಹಿಸಿದೆ. ಹೀಗಾಗಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೊಂದು ಸ್ಥಾನ ಗಳಿಸಿದೆಯಾದರೂ ಒಟ್ಟಾರೆ ಸಾಧನೆ ಒಂದು ರೀತಿಯಲ್ಲಿ ಶೂನ್ಯ ಸಂಪಾದನೆಯೇ ಆಗಿದೆ.
* ಎಸ್. ಲಕ್ಷ್ಮಿನಾರಾಯಣ