ಬೆಂಗಳೂರು: ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರಲು ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ.
ಬುಧವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೂಡಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಚೆಲುವರಾಯಸ್ವಾಮಿ ಹಾಗೂ ಜಮೀರ್ ಅಹಮದ್ ನೇತೃತ್ವದ ಏಳು ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಖಾತರಿಯೂ ಇವರಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಬಂಡಾಯ ಶಾಸಕರ ಜತೆ ರಾಹುಲ್ ಗಾಂಧಿ ಭೇಟಿ ಮಾಡಿದ ನಂತರ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಈಗ ಏಳು ಶಾಸಕರು ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದಾರೆ. ಮುಂದೆ ಯಾರು ಸೇರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಹೇಳಿದರು.
ಜೆಡಿಎಸ್ ಶಾಸಕರು ಅವರ ಕ್ಷೇತ್ರಗಳಲ್ಲಿ ಬಲಿಷ್ಠವಾಗಿದ್ದಾರೆ. ಇವರು ಪಕ್ಷಕ್ಕೆ ಬರುವುದರಿಂದ ಕಾಂಗ್ರೆಸ್‌ಗೆ ಬಲ ಬರಲಿದೆ. ಬಿಜೆಪಿ ಮುಳುಗುತ್ತಿರುವ ಹಡಗು. ಆ ಪಕ್ಷಕ್ಕೆ ನಮ್ಮಿಂದ ಯಾರೂ ಹೋಗಲ್ಲ ಎಂದು ತಿಳಿಸಿದರು. ಜೆಡಿಎಸ್ ಶಾಸಕರಿಗೆ ಯಾವುದೇ ಆಮಿಷ ಒಡ್ಡಿಲ್ಲ.ಅವರಾಗಿಯೇ ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಮತ ಹಾಕಿದರು. ಈಗ ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ಈ ಹಿಂದೆ, ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂತು. ಆ ಪಕ್ಷದ ನಾಯಕರು ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋದರು. ಮೋದಿ ಮುಖ ನೋಡಿ ಯಾರೂ ಮತ ಹಾಕುವುದಿಲ್ಲ. ಮತೀಯ ಭಾವನೆ ಕೆರಳಿಸಿ ಅಧಿಕಾರಕ್ಕೆ ಬರುವುದು ಅಸಾಧ್ಯ. ನಾವು ನುಡಿದಂತೆ ನಡೆದು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ.
ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿಯದು ಭ್ರಮೆ ಎಂದು ಹೇಳಿದರು. ವಿಧಾನಸಭೆಗೆ ಅವಧಿಗೆ ಮುನ್ನ ಚುನಾವಣೆ
ಇಲ್ಲ. ನಿಗದಿಯಂತೆ ಚುನಾವಣೆ ನಡೆದು ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಎಂದೂ ಅಧಿಕಾರಕ್ಕೆ ಬರುವುದಿಲ್ಲ, ನಾವೆಲ್ಲಾ ಇದ್ದಾಗಲೇ ಬರಲಿಲ್ಲ. ಆದರೆ, ಅವರ ಸಾಧನೆ ಶೂನ್ಯ ಎಂದು ಹೇಳುವುದಿಲ್ಲ, ಮೂರ್‍ನಾಲ್ಕು ಜಿಲ್ಲೆಗಳಲ್ಲಿ ಜೆಡಿಎಸ್ ಭದ್ರವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಜೆಡಿಎಸ್ ಬಂಡಾಯ ಶಾಸಕರು ಅಧ್ಯಕ್ಷೆ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಗುರುವಾರ ಸಾಧ್ಯವಾದರೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವೂ ಇದೆ ಎಂದು ಹೇಳಲಾಗಿದೆ.