ಹಾನಗಲ್ಲ: ದಿ.ಸಿ.ಎಂ.ಉದಾಸಿ ಅವರಂತೆಯೇ ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಶಿವರಾಜ ಸಜ್ಜನರ ಹಾಗೂ ಮುಖಂಡರು ತಾಲೂಕಿನ ಗುಡ್ಡದಮತ್ತಿಹಳ್ಳಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಶನಿವಾರ ಮಧ್ಯಾಹ್ನ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ಬೈ ಎಲೆಕ್ಸನ್‌ಗೆ ಶಿವರಾಜ ಸಜ್ಜನರ ನಾಮಪತ್ರ ಸಲ್ಲಿಸಿ ಇಂದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ಬಿಜೆಪಿ ಪ್ರತಿಷ್ಠೆಯ ಪ್ರಶ್ನೆ. ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಸಿ.ಎಂ. ಉದಾಸಿ ಮುಂದಾಗಿದ್ದರು. ಈಗ ತಾಲೂಕಿನಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಟ್ಟಾಗಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಇದರ ಬಗ್ಗೆ ಯಾರಿಗೂ ಸಂಶಯ ಬೇಡ. ಶಿವರಾಜ ಸಜ್ಜನರ ಅವರು ದಿ.ಸಿ.ಎಂ.ಉದಾಸಿ ಅವರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ರಾಜಕೀಯದಲ್ಲಿ ಬೆಳೆದವರು. ಹಾನಗಲ್ಲ ತಾಲೂಕಿನಲ್ಲಿ ಅವರ ಗೆಲುವು ನಿಶ್ಚಿತ ಎಂದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ನನಗೆ ಹೆಚ್ಚು ನಿಕಟ ಸಂಪರ್ಕವಿದೆ. ಇಲ್ಲಿನ ನಾಯಕರೊಂದಿಗೆ ಹಲವಾರು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಜನರ ವಿಶ್ವಾಸ ಗಳಿಸಿ ಇಲ್ಲಿ ಕೆಲಸ ಮಾಡುತ್ತೇವೆ. ಉದಾಸಿ ಅವರ ದಾರಿಯಲ್ಲಿ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸಬೇಕು. ಬಿಜೆಪಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಕಾರ್ಯಕರ್ತರು ಮತದಾರರ ಮನವೊಲಿಸಬೇಕು ಎಂದರು.
ಪ್ರಚಾರ ಕಾರ್ಯದಲ್ಲಿ ಭೋಜರಾಜ ಕರೂದಿ, ರಾಜುಗೌಡ, ಕಲ್ಯಾಣಕುಮಾರ ಶೆಟ್ಟರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ, ಕೃಷ್ಣಾ ಈಳಿಗೇರ, ಬಸವರಾಜ ಹಾದಿಮನಿ, ಮಹೇಶ ಬಣಕಾರ, ರವಿರಾಜ ಕಲಾಲ, ಮಾಲತೇಶ ಘಂಟೇರ, ಪ್ರಶಾಂತ, ಸಂತೋಷ ಟೀಕೋಜಿ, ಮಲ್ಲಿಕಾರ್ಜುನ ಅಗಡಿ, ರವಿ ಪುರೋಹಿತ, ಪ್ರವೀಣ ಸುಲಾಖೆ, ಚಂದ್ರು ಉಗ್ರಣ್ಣನವರ, ಗಣೇಶ ಮುರಳಿ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.