ಕುಂದಾಪುರ: ಬೈಂದೂರು ವಿಧಾನಸಭಾ ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರವಳ್ಳಿ ಕಂತನಗುಡ್ಡೆ ರಸ್ತೆ ಡಾಮರೀಕರಣ ಕಾಮಗಾರಿ ಆರಂಭಗೊಂಡು ಹಲವು ಸಮಯ ಕಳೆದಿದೆ. ಈಗ ರಸ್ತೆಗೆ ಕೇವಲ ಜಲ್ಲಿ ಕಲ್ಲು ಮಾತ್ರ ಹಾಕಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಊರವರು ಆಗ್ರಹಿಸಿದ್ದಾರೆ.
ಅಂಪಾರು – ಶಂಕರನಾರಾಯಣ ಮುಖ್ಯ ರಸ್ತೆಯಿಂದ ಹೆರವಳ್ಳಿ ಕಂತನಗುಡ್ಡೆ ಪರಿಶಿಷ್ಟ ಜಾತಿಯ ಕಾಲೊನಿ ಕಡೆಗೆ ಸಂಚರಿಸುವ ಈ ಮಾರ್ಗದ ಅಭಿವೃದ್ಧಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ವಾರಾಹಿ ಯೋಜನೆಯಡಿ 54 ಲಕ್ಷ ರೂ. ಮಂಜೂರಾಗಿತ್ತು.
ಶಿಲಾನ್ಯಾಸವಾಗಿ ಕಾಮಗಾರಿಯು ಆರಂಭಗೊಂಡಿದ್ದು, ಮಣ್ಣಿನ ರಸ್ತೆ ಸಮತಟ್ಟುಗೊಳಿಸಿ, ಜಲ್ಲಿ ಕಲ್ಲು ಹಾಕಲಾಗಿತ್ತು. ಆದರೆ ಅಷ್ಟರೊಳಗೆ ಕೋವಿಡ್ 19ದಿಂದಾಗಿ ಲಾಕ್‌ಡೌನ್ ಘೋಷಣೆಯಾಗಿದ್ದು, ಅಲ್ಲಿಗೆ ಸ್ಥಗಿತಗೊಂಡ ಕಾಮಗಾರಿ ಈವರೆಗೆ ಆರಂಭಗೊಂಡಿಲ್ಲ. ಈ ಭಾಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಮನೆಗಳಿವೆ. ಜಲ್ಲಿ ಕಲ್ಲುಗಳನ್ನು ರಸ್ತೆಗೆ ಹಾಗೇ ಸುಮ್ಮನೆ ಹಾಕಿಕೊಂಡು ಹೋಗಿದ್ದು, ಸಮತಟ್ಟು ಕೂಡ ಮಾಡಿಲ್ಲ. ಇದರಿಂದ ದ್ವಿಚಕ್ರ ವಾಹನ ಸಂಚಾರ ಕಷ್ಟ. ಇತರೆ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸಲಿ ಎನ್ನುವುದಾಗಿ ಊರವರು ಒತ್ತಾಯಿಸಿದ್ದಾರೆ.
ಒಂದೆರಡು ದಿನಗಳಲ್ಲಿ ಆರಂಭ
ಲಾಕ್‌ಡೌನ್‌ನಿಂದಾಗಿ ಸ್ವಲ್ಪ ದಿನದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಆದರೆ ಈಗ ಮತ್ತೆ ಕಾಮಗಾರಿ ಆರಂಭಗೊಳ್ಳುತ್ತಿದೆ. ಸಿಮೆಂಟ್ ಪೂರೈಕೆಯಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಬುಧವಾರದಿಂದ ನಿವಾರಣೆಯಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಈ ರಸ್ತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ತ್ವರಿತಗತಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುವುದು.
-ಕೃಷ್ಣ ಹೆಬ್ಸೂರು, ಎಕ್ಸಿಕ್ಯೂಟಿವ್ ಎಂಜಿನಿಯರ್, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ