Advertisement

ಅರ್ಧದಷ್ಟು ಮತಗಳು ಬಿಜೆಪಿ ಪಾಲು

11:32 PM May 25, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿರುವ ಭಾರತೀಯ ಜನತಾ ಪಾರ್ಟಿ ತನ್ನ ಮತ ಪ್ರಮಾಣವನ್ನು ವ್ಯಾಪಕವಾಗಿ ವಿಸ್ತರಿಸಿಕೊಂಡಿದೆ. ಇದೇ ವೇಳೆ ಕಾಂಗ್ರೆಸ್‌ನ ಮತ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ.

Advertisement

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಅರ್ಧಕ್ಕೂ ಹೆಚ್ಚು ಮತಗಳು ಬಿಜೆಪಿ ಪಾಲಾಗಿವೆ. ಅದು ಬರೋಬ್ಬರಿ ಶೇ.51ರಷ್ಟು ಮತಗಳನ್ನು ಪಡೆದುಕೊಂಡಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಮತ ಪ್ರಮಾಣ ಶೇ.8ರಿಂದ 9ರಷ್ಟು ಹೆಚ್ಚಾಗಿದೆ.

ದೇಶದ 17ನೇ ಲೋಕಸಭೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಒಟ್ಟು 5.10 ಕೋಟಿ ಮತದಾರರ ಪೈಕಿ 3.50 ಕೋಟಿ ಮತಗಳು ಚಲಾವಣೆಯಾಗಿವೆ. ಎಣಿಕೆಗೆ ಸಿಂಧುವಾದ ಮತಗಳಲ್ಲಿ 1.80 ಕೋಟಿ ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. 2104ರ ಚುನಾವಣೆಯಲ್ಲಿ ಚಲಾವಣೆಗೊಂಡ 3.07 ಕೋಟಿ ಮತಗಳಲ್ಲಿ 1.33 ಕೋಟಿ ಮತಗಳನ್ನು ಪಡೆಯುವ ಮೂಲಕ ಶೇ.43ರಷ್ಟು ಮತ ಗಳಿಸಿತ್ತು.

ಇದೇ ವೇಳೆ, ಕಾಂಗ್ರೆಸ್‌ನ ಮತ ಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಕಳೆದ ಬಾರಿಗಿಂತ ಕಾಂಗ್ರೆಸ್‌ನ ಮತ ಪ್ರಮಾಣದಲ್ಲಿ ಶೇ.10ರಷ್ಟು ಕಡಿಮೆಯಾಗಿದೆ. ಈ ಬಾರಿ ಚಲಾವಣೆಗೊಂಡ ಮತಗಳಲ್ಲಿ 1.12 ಕೋಟಿ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಶೇ.31.9ರಷ್ಟು ಮತ ಗಳಿಸಿದೆ.

2014ರಲ್ಲಿ 1.26 ಕೋಟಿ ಮತಗಳನ್ನು ಪಡೆದಿದ್ದ ಕಾಂಗ್ರೆಸ್‌, ಶೇ.41.15ರಷ್ಟು ಮತಗಳನ್ನು ಗಳಿಸಿತ್ತು. ಈ ಬಾರಿ ಕಾಂಗ್ರೆಸ್‌ಗೆ 15ರಿಂದ 20 ಲಕ್ಷ ಮತಗಳ ಖೋತಾ ಆಗಿದೆ. ಶೇ.51ರಷ್ಟು ಮತಗಳನ್ನು ಪಡೆದ ಬಿಜೆಪಿ 25 ಸ್ಥಾನ ಗಳಿಸಿದರೆ, ಶೇ.31ರಷ್ಟು ಮತಗಳನ್ನು ಗಳಿಸಿದ ಕಾಂಗ್ರೆಸ್‌ ಗೆದ್ದಿದ್ದು 1 ಸೀಟು ಮಾತ್ರ.

Advertisement

ರಾಜ್ಯದಲ್ಲಿ 1984ರ ನಂತರದಿಂದ ಬಿಜೆಪಿ ಮತ ಪ್ರಮಾಣ ಕ್ರಮೇಣ ಏರಿಕೆ ಕಂಡಿದೆ. ಒಟ್ಟು ಸ್ಥಾನ ಗಳಿಕೆಯಲ್ಲಿ ಆಗಾಗ ಒಂದಿಷ್ಟು ಏರಿಳಿತ ಕಂಡು ಬಂದರೂ ಮತ ಪ್ರಮಾಣ ಮಾತ್ರ ಏರು ಕ್ರಮಾಂಕದಲ್ಲಿದೆ. 1984 ಮತ್ತು 89ರಲ್ಲಿ ಕೇವಲ ಶೇ.2ರಿಂದ 4ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ, ಇಂದು ಶೇ.50ರ ಮಿತಿ ದಾಟಿದೆ.

1991ರಲ್ಲಿ ಶೇ.29ರಷ್ಟು ಮತಗಳಿಸಿದ್ದ ಬಿಜೆಪಿ, ಮೊದಲ ಬಾರಿಗೆ 4 ಸ್ಥಾನಗಳನ್ನು ಗೆದ್ದಿತ್ತು. 1999ರವರೆಗೆ ಶೇ.25ರಿಂದ 29ರ ಅಸುಪಾಸಿನಲ್ಲಿದ್ದ ಬಿಜೆಪಿ ಮತ ಪ್ರಮಾಣ 2004ರಲ್ಲಿ ಶೇ.34, 2009ರಲ್ಲಿ ಶೇ.41 ಹಾಗೂ 2014ರಲ್ಲಿ ಶೇ.43ರಷ್ಟು ಮತಗಳನ್ನು ಗಳಿಸಿದೆ. ಆ ಮೂಲಕ ಬಿಜೆಪಿ ಮತಗಳಿಕೆಯಲ್ಲಿ ನಿರಂತರ ಏರಿಕೆ ಕಾಯ್ದುಕೊಂಡು ಬಂದಿದೆ.

“ಕೈ’ಗೆ “ಮುಖ’ಭಂಗ: ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಉಮೇದು ಹೊಂದಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. 1952ರಿಂದ 1989ರವರೆಗೆ ನಡೆದ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡು ಬಂದಿದ್ದ ಕಾಂಗ್ರೆಸ್‌, 1971ರಲ್ಲಿ ಆಗಿದ್ದ ಎಲ್ಲ 27 ಕ್ಷೇತ್ರಗಳನ್ನು ಗೆದ್ದು ಶೇ.71ರಷ್ಟು ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿತ್ತು. 2009ರಲ್ಲಿ ಶೇ.27 ಮತ್ತು 1996ರಲ್ಲಿ ಶೇ.30ರಷ್ಟು ಮತಗಳನ್ನು ಪಡೆದಿದ್ದು ಕಾಂಗ್ರೆಸ್‌ ಪಕ್ಷದ ಈವರೆಗಿನ ಕಳಪೆ ಸಾಧನೆಯಾಗಿದೆ. ಈ ಬಾರಿ ಶೇ.31ರಷ್ಟು ಮತಗಳನ್ನು ಗಳಿಸಿದೆ.

“ಸೊರಗಿದ’ ತೆನೆ: ಜನತಾ ಪರಿವಾರ ವಿಭಜನೆಯಾದ ಬಳಿಕ ರಾಜ್ಯದಲ್ಲಿ 2004ರಿಂದ ಅಸ್ತಿತ್ವ ಕಂಡುಕೊಂಡಿರುವ ಜೆಡಿಎಸ್‌, ಲೋಕಸಭೆ ಚುನಾವಣೆಯಲ್ಲಿ ಹೇಳಿಕೊಳ್ಳುವಷ್ಟು ಸಾಧನೆ ಮಾಡಿಲ್ಲ. 2009ರಲ್ಲಿ 3 ಸ್ಥಾನ ಗಳಿಸಿದ್ದೇ ಜೆಡಿಎಸ್‌ನ ಈವರೆಗಿನ ಗರಿಷ್ಠ ಸಾಧನೆ. ಆಗ ಶೇ.13ರಷ್ಟು ಮತಗಳನ್ನು ಆ ಪಕ್ಷ ಪಡೆದುಕೊಂಡಿತ್ತು. 2004ರಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ ಶೇ.20ರಷ್ಟು ಮತ ಗಳಿಸಿತ್ತು. 2014ರಲ್ಲಿ ಶೇ.11ರಷ್ಟು ಮತಗಳನ್ನು ಪಡೆದಿದ್ದ ಜೆಡಿಎಸ್‌, ಈ ಬಾರಿ ಶೇ.9ರಷ್ಟು ಮತಗಳನ್ನು ಪಡೆದಿದ್ದು, ಮತ ಪ್ರಮಾಣದಲ್ಲಿ ಶೇ.3ರಷ್ಟು ಇಳಿಕೆ ಕಂಡಿದೆ.

2.50 ಲಕ್ಷ “ನೋಟಾ’: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಒಟ್ಟು 2.50ಲಕ್ಷಕ್ಕೂ ಹೆಚ್ಚು ಮಂದಿ “ನೋಟಾ’ ಚಲಾಯಿಸಿದ್ದಾರೆ. ಈ ಪೈಕಿ, ಉತ್ತರ ಕನ್ನಡದಲ್ಲಿ 16,017, ರಾಯಚೂರಿನಲ್ಲಿ 14,921 ಮತ್ತು ಕೋಲಾರದಲ್ಲಿ 13,889 ಅತಿ ಹೆಚ್ಚು ಮಂದಿ ನೋಟಾ ಚಲಾಯಿಸಿದ್ದಾರೆ. ಬಾಗಲಕೋಟೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಕಲಬುರಗಿ, ಹಾಸನ, ಕೊಪ್ಪಳ, ತುಮಕೂರಿನಲ್ಲಿ ಪ್ರತಿ ಕ್ಷೇತ್ರದಲ್ಲಿ10 ಸಾವಿರಕ್ಕೂ ಹೆಚ್ಚು ಮಂದಿ ನೋಟಾ ಚಲಾಯಿಸಿದ್ದಾರೆ.

2019ರ ಚುನಾವಣೆ
-ರಾಜ್ಯದಲ್ಲಿನ ಒಟ್ಟು ಮತದಾರರು – 5.10 ಕೋಟಿ.
-ಚಲಾವಣೆಯಾದ ಮತಗಳು 3.50 ಕೋಟಿ.
– ಬಿಜೆಪಿಗೆ ಬಿದ್ದ ಮತಗಳು – 1.80 ಕೋಟಿ.
-ಕಾಂಗ್ರೆಸ್‌ಗೆ ಬಿದ್ದ ಮತಗಳು – 1.12 ಕೋಟಿ. (ಶೇ.31.9).
-ಜೆಡಿಎಸ್‌ ಗಳಿಸಿದ ಶೇಕಡಾವಾರು ಮತ- 9

2104ರ ಚುನಾವಣೆ
-ಚಲಾವಣೆಯಾದ ಮತಗಳು 3.07 ಕೋಟಿ.
-ಬಿಜೆಪಿಗೆ ಬಿದ್ದ ಮತಗಳು – 1.33 ಕೋಟಿ. (ಶೇ.43).
-ಕಾಂಗ್ರೆಸ್‌ಗೆ ಬಿದ್ದ ಮತಗಳು – 1.26 ಕೋಟಿ. (ಶೇ.41.15).
-ಜೆಡಿಎಸ್‌ ಗಳಿಸಿದ ಶೇ.ವಾರು ಮತ- 11

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next