ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಡಲಿಗೆ ಕೇವಲ 25 ದಿನಗಳಲ್ಲಿ 31 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದ್ದು ಮತ್ತೆ ಮೈದುಂಬಿಕೊಂಡಿದೆ. ಅಚ್ಚುಕಟ್ಟು ಪ್ರದೇಶದ ಅನ್ನದಾತರು ನಿಟ್ಟುಸಿರು ಬಿಟ್ಟಿದ್ದಾರೆ.
25 ದಿನಗಳ ಹಿಂದೆ ತುಂಗಭದ್ರಾ ಡ್ಯಾಂನ 19ನೇ ಕ್ರೆಸ್ಟ್‌ಗೇಟ್ ಮುರಿದು ಬಿದ್ದು 35 ಟಿಎಂಸಿಯಷ್ಟು ನೀರು ಖಾಲಿಯಾಗಿತ್ತು. ಇದರಿಂದ ರೈತ ಸಮೂಹ ಆತಂಕಕ್ಕೀಡಾಗಿ ಭತ್ತ ಬೆಳೆಯುವ ಪರಿಸ್ಥಿತಿ ಬಗ್ಗೆ ಚಿಂತಿತರಾಗಿದ್ದರು. ತಜ್ಞ ಕನ್ನಯ್ಯ ನಾಯ್ಡು ಅವರ ಸತತ ನಾಲ್ಕು ದಿನಗಳ ಪ್ರಯತ್ನದ ಫಲವಾಗಿ ಸ್ಟಾಪ್‌ಲಾಕ್ ಅಳವಡಿಕೆ ಮಾಡಿದ್ದರಿಂದ ನೀರು ಸೋರಿಕೆ ನಿಂತಿತ್ತು.
ತಜ್ಞ ಕನ್ನಯ್ಯ ನಾಯ್ಡು ಕ್ರೆಸ್ಟ್‌ಗೇಟ್‌ಗೆ ಸ್ಟಾಪ್‌ಲಾಗ್ ಅಳವಡಿಕೆ ಮಾಡಿದ್ದ ವೇಳೆ ಡ್ಯಾಂನಲ್ಲಿ 72 ಟಿಎಂಸಿ ನೀರು ಉಳಿದಿತ್ತು. ಸೆ.4ರಂದು ಬುಧವಾರ ಸಂಜೆ ವೇಳೆಗೆ ಡ್ಯಾಂನ ನೀರಿನ ಮಟ್ಟ ಮತ್ತೆ 1632 ಅಡಿಯಷ್ಟು ತಲುಪಿದೆ. ಡ್ಯಾಂನಲ್ಲಿ ಒಟ್ಟು 101 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಕೇವಲ 25 ದಿನದಲ್ಲಿ ಜಲಾಶಯದ ಒಡಲಿಗೆ ಬರೊಬ್ಬರಿ 31 ಟಿಎಂಸಿ ನೀರು ಹರಿದು ಬಂದಿದೆ. ಇದಲ್ಲದೇ ಡ್ಯಾಂ ಒಳ ಹರಿವು 36169 ಕ್ಯೂಸೆಕ್ ಇದ್ದು ಇನ್ನು ಒಂದೆರಡು ದಿನಗಳಲ್ಲಿಯೇ ಡ್ಯಾಂ ಮತ್ತೆ ಸಂಪೂರ್ಣ 105 ಟಿಎಂಸಿಯಷ್ಟು ನೀರು ತುಂಬಿಕೊಳ್ಳಲಿದೆ. ವರುಣನ ಕೃಪೆಯಿಂದ ತುಂಗಭದ್ರೆ ಒಡಲಿಗೆ ಮತ್ತೆ ನೀರು ಹರಿದು ಬಂದಿದ್ದಕ್ಕೆ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಲಕ್ಷಾಂತರ ರೈತರ ಬದುಕಿಗೆ ಮತ್ತೆ ಜೀವಕಳೆ ಬಂದಂತಾಗಿದೆ. ಅನ್ನದಾತ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ.
ಈ ವರ್ಷ ಹರಿದು ಬಂದಿದ್ದು 314 ಟಿಎಂಸಿ!
ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಬರೊಬ್ಬರಿ 314 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಆದರೆ 19ನೇ ಕ್ರೆಸ್ಟ್‌ಗೇಟ್ ಮುರಿದ ಪರಿಣಾಮ 35 ಟಿಎಂಸಿಯಷ್ಟು ನೀರು ನದಿಪಾಲಾಗಿತ್ತು. ಸದ್ಯ ಬುಧವಾರದ ಅಂತ್ಯಕ್ಕೆ ಡ್ಯಾಂನಲ್ಲಿ 101 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಈಗಾಗಲೇ ಡ್ಯಾಂನ ಎಲ್ಲ ಕಾಲುವೆಗಳಿಗೂ ನೀರು ಹರಿಸಲಾಗುತ್ತಿದೆ. 185 ಟಿಎಂಸಿಗೂ ಅಧಿಕ ಪ್ರಮಾಣದ ನೀರು ನದಿಪಾಲಾಗಿದೆ.
ಅಚ್ಚುಕಟ್ಟು ವ್ಯಾಪ್ತಿಯ ಅನ್ನದಾತರಲ್ಲಿ ಸಂತಸ
ವರುಣನ ಕೃಪೆಯಿಂದ ತುಂಗಭದ್ರೆ ಒಡಲಿಗೆ ಮತ್ತೆ ಹರಿದು ಬಂದ ಜಲಧಾರೆ
-ದತ್ತು ಕಮ್ಮಾರ