Advertisement

ನಗರದ ಮಗ್ಗುಲಿನ ಹಳ್ಳಿಗೆ ಬೇಕಿದೆ ಮೂಲ ಸೌಕರ್ಯ

03:34 PM Jun 30, 2022 | Team Udayavani |

ಹಳೆಯಂಗಡಿ: ದೇಶ ದಲ್ಲಿಯೇ ಪ್ರಗತಿಯ ಜತೆಗೆ ಮಾದರಿ ಗ್ರಾಮವಾಗಿ ಗುರುತಿಸಿ ಕೊಂಡಿರುವ ಪಡು ಪಣಂಬೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೋಕೂರು ಗ್ರಾಮದ ಜನರಿಗೆ ಕೃಷಿಯೇ ಮುಖ್ಯ ಕಸುಬು. ಈ ಗ್ರಾಮಕ್ಕೆ ಇನ್ನಷ್ಟು ಮೂಲ ಸೌಕರ್ಯಗಳು ಒದಗಿದಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ದಾಪುಗಾಲು ಇಡಲು ಸಾಧ್ಯ. ಜನರ ಬೇಡಿಕೆ ಈಡೇರಿಸುವತ್ತ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುವುದು ಅವಶ್ಯ.

Advertisement

ಒಟ್ಟು 1,120 ಕುಟುಂಬಗಳನ್ನು ಹೊಂದಿರುವ ಈ ಗ್ರಾಮದ ಪ್ರಮುಖ ಬೇಡಿಕೆ ಎಂದರೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ. ಪ್ರಸ್ತುತ ಈ ಗ್ರಾಮದವರು ಸಾಮಾನ್ಯ ಜ್ವರದಿಂದ ಹಿಡಿದು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಸುಮಾರು 10 ಕಿ.ಮೀ. ದೂರದ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ಅಥವಾ ಕೆಮ್ರಾಲ್‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯವಿದೆ. ಗ್ರಾಮದಲ್ಲಿ ಖಾಸಗಿ ಚಿಕಿತ್ಸಾಲಯವೂ ಇಲ್ಲ.

ಒಂದೇ ಬಸ್‌

ಸಾಕಷ್ಟು ಜನ ವಸತಿ ಪ್ರದೇಶವಾಗಿರುವ ತೋಕೂರಿನ ಜನತೆಗೆ ಸಂಚರಿಸಲು ಖಾಸಗಿ ಬಸ್ಸೊಂದು ಮಾತ್ರ ನಿರ್ದಿಷ್ಟ ಸಮಯದಲ್ಲಿ ಸಂಚರಿಸುತ್ತದೆ.

ದೇಗುಲದ ಪ್ರದೇಶವಾಗಿರುವ ಹಾಗೂ ಕಾಲೇಜು ಮತ್ತು ದೈನಂದಿನ ಕೆಲಸ ಕಾರ್ಯಗಳಿಗೆ ಸ್ವಂತ ವಾಹನ ಇಲ್ಲದವರು ನಿರ್ದಿಷ್ಟ ಸಮಯದಲ್ಲಿ ಬಸ್‌ ತಪ್ಪಿದಲ್ಲಿ 2 ಕಿ.ಮೀ. ದೂರದ ಪಡುಪಣಂಬೂರು ಅಥವಾ ಎಸ್‌.ಕೋಡಿ, ಲೈಟ್‌ಹೌಸ್‌ ನವರೆಗೆ ನಡೆದುಕೊಂಡೇ ತೆರಳಬೇಕು ಅಥವಾ ರಿಕ್ಷಾವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ಗ್ರಾಮದಲ್ಲಿ ಎರಡು ಅಂಗನವಾಡಿ ಮತ್ತು ಮೂರು ಪ್ರಾಥಮಿಕ ಶಾಲೆಗಳಿವೆ. ಅಲ್ಲಿಂದ ಮುಂದಕ್ಕೆ ವಿದ್ಯಾಭ್ಯಾಸಕ್ಕೆ ಹಳೆಯಂಗಡಿ, ಕಿನ್ನಿಗೋಳಿ, ಕಟೀಲು, ಮೂಲ್ಕಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಆದರೆ ಇಲ್ಲಿ ಸಾಕಷ್ಟು ಬಸ್‌ ಸೌಕರ್ಯ ಇಲ್ಲದಿರುವುದೇ ಇವರಿಗೆ ಸಮಸ್ಯೆಯಾಗಿದೆ.

Advertisement

ರುದ್ರಭೂಮಿಗಾಗಿ ಶತ ಪ್ರಯತ್ನ

ಅಕ್ಕ-ಪಕ್ಕದ ಊರಿನಲ್ಲಿ ರುದ್ರ ಭೂಮಿ ಇದೆ. ಆದರೆ ಇಲ್ಲಿ ಭೂಮಿ ಮೀಸಲಿಟ್ಟಿದ್ದರೂ ರುದ್ರಭೂಮಿ ಇನ್ನೂ ನಿರ್ಮಿಸಿಲ್ಲ. ಇದು ಗ್ರಾಮಸ್ಥರ ಇನ್ನೊಂದು ಪ್ರಮುಖ ಬೇಡಿಕೆಯಾಗಿದೆ.

ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಗೋಮಾಳ ಭೂಮಿಯೂ ಇದ್ದು ಇಲ್ಲಿ ಸುಮಾರು 3 ಎಕರೆ ಜಮೀನಿನ ಲಭ್ಯತೆ ಇದೆ.

ಜಮೀನಿನ ಭದ್ರತೆಗಾಗಿ ಇಲ್ಲಿ ಪಂಚಾಯತ್‌ ವನಮಹೋತ್ಸವದ ಮೂಲಕ ಸುರಕ್ಷಿತವಾಗಿರಿಸಿದೆ. ಇದಕ್ಕೆ ಸಂಬಂಧಿಸಿ ಪಂಚಾಯತ್‌ ಹಾಗೂ ಖಾಸಗಿಯವರ ನಡುವೆ ವ್ಯಾಜ್ಯವೊಂದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದೆ. ಇದು ಆದಷ್ಟು ಬೇಗ ಇತ್ಯರ್ಥವಾದಲ್ಲಿ ಗೋಮಾಳದಲ್ಲಿ ರುದ್ರ ಭೂಮಿ ನಿರ್ಮಿಸಲು ಸಾಧ್ಯವಿದೆ. ಈ ಮೂಲಕ ಸರಕಾರದ ಸುತ್ತೋಲೆಯಂತೆ ಗ್ರಾಮಕ್ಕೊಂದು ರುದ್ರಭೂಮಿಯ ಪರಿಕಲ್ಪನೆ ಈಡೇರಲಿದೆ.

ಗ್ರಾಮದ ವಿಶೇಷತೆ

„ ಗ್ರಾಮದ ಧಾರ್ಮಿಕ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು ಇದೀಗ 8 ಕೋ.ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣವಾಗುತ್ತಿದೆ.

„ ಗ್ರಾಮದ ಸಮಾಜ ಸೇವಾ ಸಂಸ್ಥೆಗಳಾದ ತೋಕೂರು ಯುವಕ ಸಂಘ, ಮಹಿಳಾ ಮಂಡಳಿ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ ರಾಜ್ಯ ಮಟ್ಟದ ಸೇವಾ ಪುರಸ್ಕಾರಕ್ಕೆ ಭಾಜನವಾಗಿವೆ. ಇನ್ನಷ್ಟು ಯುವ ಸಂಘಟನೆಗಳು ತನ್ನದೇ ಆದ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.

„ ಫ‌ಲವತ್ತಾದ ಕೃಷಿ ಭೂಮಿ ಹೊಂದಿದ್ದು, ವಾರ್ಷಿಕ ಮೂರು ಬೆಳೆ ಬೆಳೆಯಲಾಗುತ್ತಿದೆ. ಕಿಂಡಿ ಅಣೆಕಟ್ಟಿನ ನೀರೇ ಇದಕ್ಕೆ ಮುಖ್ಯ ಆಸರೆ.

ಮೂಲ ಸೌಕರ್ಯ ಕಲ್ಪಿಸಿ: ನಮ್ಮೂರಿನಲ್ಲಿಯೇ ಸರಕಾರಿ ಭೂಮಿಯಿದ್ದರೂ ಸಹ ನಾವು ಪಕ್ಕದ ದೂರದ ಊರಿನ ರುದ್ರಭೂಮಿ ಆಶ್ರಯಿಸುವ ಪರಿಸ್ಥಿತಿ ಇದೆ, ಇದರ ಬಗ್ಗೆ ಜನಪ್ರತಿನಿಧಿಗಳು ಸಂಘಟಿತರಾಗಿ ದುಡಿದರೆ ಖಂಡಿತ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಸಾಧ್ಯವಾಗಬಹುದು. ಆರೋಗ್ಯ ಉಪಕೇಂದ್ರ, ಪ್ರೌಢಶಾಲೆಯೂ ನಮ್ಮೂರಿಗೆ ಅಗತ್ಯವಾಗಿದೆ. –ಪ್ರಶಾಂತ್‌ಕುಮಾರ್‌  ಬೇಕಲ್‌, ಗ್ರಾಮಸ್ಥರು

ಪ್ರಯತ್ನ ಸಾಗಿದೆ: ಪಡುಪಣಂಬೂರು ಗ್ರಾ.ಪಂ.ವ್ಯಾಪ್ತಿಯ ಬೆಳ್ಳಾಯರು ಹಾಗೂ ಕಲ್ಲಾಪುವಿನಲ್ಲಿ ರುದ್ರಭೂಮಿ ಇದೆ. ತೋಕೂರು ಗ್ರಾಮದಲ್ಲಿಯೂ ನಿರ್ಮಿಸಿದಲ್ಲಿ ಮಾದರಿ ಪಂಚಾಯತ್‌ಗೆ ಮತ್ತೂಂದು ಹೆಗ್ಗಳಿಕೆಯಾಗಲಿದೆ. ಈ ಬಗ್ಗೆ ಪ್ರಯತ್ನ ಸಾಗಿದೆ. ಜಮೀನು ಲಭ್ಯವಾದರೆ ನಿರ್ಮಾಣಕ್ಕೆ ಧರ್ಮಸ್ಥಳ ಯೋಜನೆ ಸಹಿತ ಬೇರೆ ಸಂಘ ಸಂಸ್ಥೆಗಳ ಮೂಲಕ ನಿರ್ಮಿಸಲು ಮುಂದಾಗುತ್ತೇವೆ. –ಮಂಜುಳಾ, ಅಧ್ಯಕ್ಷರು ಪಡುಪಣಂಬೂರು ಗ್ರಾ.ಪಂ. ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next