Advertisement

ಬಿಜೆಪಿಗೆ ಮರಳಿದ ಹಾಲಾಡಿ

09:48 AM Feb 03, 2018 | Team Udayavani |

ಬೆಂಗಳೂರು: ಇತ್ತೀಚೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಕ್ರವಾರ ಬಿಜೆಪಿ
ಸೇರಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪರಿವರ್ತನಾ ರ್ಯಾಲಿ ಸಮಾರೋಪದ ಸಿದ್ಧತಾ ಸಭೆ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರು ಬಿಜೆಪಿಯ ಧ್ವಜ ಹಸ್ತಾಂತರಿಸುವ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

Advertisement

ನಂತರ ಮಾತನಾಡಿದ ಯಡಿಯೂರಪ್ಪ, ಕುಂದಾಪುರ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿರುವ ಹಾಲಾಡಿಯವರು ನಮ್ಮ
ನಾಯಕ. ಕಾರಣಾಂತರಗಳಿಂದ ಕೆಲ ದಿನಗಳ ಕಾಲ ಪಕ್ಷದಿಂದ ದೂರವಿದ್ದರೂ ಕ್ಷೇತ್ರದಲ್ಲಿ  ಬಿಜೆಪಿ ಬೆಳವಣಿಗೆಗೆ ಶ್ರಮಿಸುತ್ತಿದ್ದರು.
ಪಕ್ಷೇತರ ಶಾಸಕರಾಗಿದ್ದರೂ ಬಿಜೆಪಿಯ ಜತೆ ಇದ್ದ ಅವರು ಪ್ರಧಾನಿ ಆಗಮನಕ್ಕೆ ಮುನ್ನ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಅಪಾರ ಜನಶಕ್ತಿ ಹೊಂದಿರುವ ಹಾಲಾಡಿ ಸೇರ್ಪಡೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪಕ್ಷಕ್ಕೆ ಆನೆ ಬಲ
ಬಂದಂತಾಗಿದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ
ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಗಾಯ ವಾಸಿಯಾಗಿದೆ, ಮತ್ತೆ ಎಡವಿ ಬೀಳಲ್ಲ
ಬೆಂಗಳೂರು:
“ಯಾರೋ ಕಾಲಿಗೆ ಅಡ್ಡಲಾಗಿ ಏನನ್ನೋ ಇಟ್ಟಿದ್ದರು. ಎಡವಿ ಬಿದ್ದು ಗಾಯ ಮಾಡಿಕೊಂಡಿದ್ದೆ. ಈಗ ಗಾಯ
ವಾಸಿಯಾಗಿದೆ. ಮತ್ತೆ ಗಾಯ ಮಾಡಿ ಕೊಳ್ಳುವುದು ಸರಿಯಲ್ಲ ಎಂದು ಈ ನಿರ್ಧಾರ ಕೈಗೊಂಡೆ’. ಅರಮನೆ ಮೈದಾನದಲ್ಲಿ ಶುಕ್ರವಾರ ಮತ್ತೆ ಬಿಜೆಪಿ ಸೇರಿದ ಕುಂದಾಪುರ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾವು ಬಿಜೆಪಿಗೆ ಮರಳಿದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು ಹೀಗೆ. 

ಬಿಜೆಪಿ ತೊರೆದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾವತ್ತೂ ಯಾರ ಬಳಿಯೂ ಏನನ್ನೂ ಕೇಳಿದವನಲ್ಲ. ಮಂತ್ರಿ
ಸ್ಥಾನ ಬಯಸಿದವನೂ ಅಲ್ಲ. ಆದರೆ, ಬೆಳಗ್ಗೆ 11 ಗಂಟೆಗೆ ಅವರೇ ಸಚಿವ ಸ್ಥಾನಕ್ಕೆ ಆಮಂತ್ರಣ ಕೊಟ್ಟು, ಹೂವಿನ ಬೊಕ್ಕೆಗಳನ್ನು ನೀಡಿ ಅಭಿನಂದನೆ ಹೇಳಿದ ಬಳಿಕ ಕೊನೇ ಕ್ಷಣದಲ್ಲಿ ಸಿಗದೇ ಇದ್ದರೆ ನೋವು, ಬೇಸರವಾಗುವುದು ಸಹಜ. ಮತ್ತೆ ಅದರ ಬಗ್ಗೆ ಯೋಚಿಸುವುದು ಸರಿಯಲ್ಲ ಎಂದು ಹೇಳಿದರು.

Advertisement

ನಾನು ಮೂರು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೆ. ಏನೋ ಒಂದು ಬಾರಿ ರಾಜೀನಾಮೆ ಕೊಟ್ಟೆ. ಜನರ ಅಭಿಪ್ರಾಯದಂತೆ 
ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಕ್ಷೇತ್ರದ ಎಲ್ಲರೂ ಸೇರಿ 40 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದರು. ಪಕ್ಷೇತರನಾಗಿ ಗೆದ್ದ ಬಳಿಕವೂ
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಬಿಜೆಪಿಯನ್ನು
ಬೆಂಬಲಿಸಿಕೊಂಡು ಬಂದಿದ್ದೆ ಎಂದರು. 

ನಾನು ಬಿಜೆಪಿ ತೊರೆದ ಬಳಿಕ ಎಲ್ಲಾ ಪಕ್ಷದವರೂ ಬನ್ನಿ ಎಂದು ಕರೆದಿದ್ದರು. ಆದರೆ, ನನಗೆ ಪಕ್ಷದ ಋಣ ಇದೆ. ಮೇಲಾಗಿ ಪ್ರಧಾನಿ
ಮೋದಿ ಅವರು ದೂರದೃಷ್ಟಿವುಳ್ಳ ನಾಯಕ. ಬಿಜೆಪಿ ತೊರೆದ ಮೇಲೂ ಪಕ್ಷದ ಜತೆ ಸಂಬಂಧವೂ ಚೆನ್ನಾಗಿತ್ತು. ಹೀಗಾಗಿ ಮತ್ತೆ
ಬಿಜೆಪಿ ಸೇರಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next