Advertisement

ತಾರಕಕ್ಕೇರಿದ ರಫೇಲ್‌ ಒಪ್ಪಂದ ವಾಗ್ವಾದ

06:00 AM Sep 21, 2018 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ ವಿವಾದ ಮತ್ತೂಮ್ಮೆ ವಾಗ್ವಾದಕ್ಕೆ ಕಾರಣವಾಗಿದೆ. ರಫೇಲ್‌ ಯುದ್ಧ ವಿಮಾನಗಳನ್ನು ನಿರ್ಮಿಸಲು ಎಚ್‌ಎಎಲ್‌ಗೆ ಸಾಮರ್ಥ್ಯವಿದೆ ಎಂದು ಎಚ್‌ಎಎಲ್‌ ಮಾಜಿ ಮುಖ್ಯಸ್ಥ ಟಿ ಸುವರ್ಣ ರಾಜು ಹೇಳಿರುವುದು ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಮತ್ತೂಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ.

Advertisement

ರಫೇಲ್‌ ಡೀಲ್‌ನಲ್ಲಿ ಎಚ್‌ಎಎಲ್‌ ಕೈ ಬಿಟ್ಟಿದ್ದರ ಬಗ್ಗೆ ಪ್ರಶ್ನಿಸಿದ್ದಕ್ಕೆ, ಎಚ್‌ಎಎಲ್‌ಗೆ ರಫೇಲ್‌ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯವಿಲ್ಲ. ಯುಪಿಎ ಅವಧಿಯ ಒಪ್ಪಂದದಲ್ಲೇ ಎಚ್‌ಎಎಲ್‌ ಕೈಬಿಡಲಾಗಿತ್ತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೆ.1ರಂದು ನಿವೃತ್ತರಾದ ಟಿ ಸುವರ್ಣರಾಜು, ರಫೇಲ್‌ ಯುದ್ಧ ವಿಮಾನ ತಯಾರಿಸಲು ಎಚ್‌ಎಎಲ್‌ಗೆ ಸಾಮರ್ಥ್ಯವಿದೆ. ಫ್ರಾನ್ಸ್‌ನ ಡಸಾಲ್ಟ್ ಕಂಪನಿ ವಿರುದ್ಧ ಕೆಲಸ ಹಂಚಿಕೆ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು ಎಂದಿದ್ದಾರೆ. ಅಲ್ಲದೆ ಯಾಕೆ ಸರಕಾರವು ಈ ದಾಖಲೆಗಳನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡುತ್ತಿಲ್ಲ ಎಂದೂ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಪ್ರಸ್ತುತ ವೆಚ್ಚದಲ್ಲಿ ಮತ್ತು ವೇಗವಾಗಿ ರಫೇಲ್‌ ವಿಮಾನಗಳನ್ನು ನಿರ್ಮಿಸಲು ಸಾಧ್ಯವಾಗದಿರಬಹುದು. ಆದರೆ ನಮ್ಮ ಯುದ್ಧವಿಮಾನಗಳಿಗೆ ನಾವು ಗ್ಯಾರಂಟಿ ನೀಡುತ್ತೇವೆ. ಸಮಯ ಹೆಚ್ಚು ತೆಗೆದುಕೊಂಡರೂ ದೀರ್ಘ‌ಕಾಲೀನ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ ಎಂದು ರಾಜು ಹೇಳಿದ್ದಾರೆ.

ನಿರ್ಮಲಾ ರಾಜೀನಾಮೆ ನೀಡಲಿ: ರಫೇಲ್‌ ಡೀಲ್‌ ವಿಚಾರದಲ್ಲಿ ದೇಶಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ. ಅವರ ಸುಳ್ಳನ್ನು ರಾಜು ಬಹಿರಂಗ ಗೊಳಿಸಿದ್ದಾರೆ. ಸ್ಥಾನದಲ್ಲಿ ಮುಂದುವರಿಯಲು ಅವರು ಅರ್ಹರಲ್ಲ. ರಾಜೀನಾಮೆ ನೀಡಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ಗಂಭೀರ ಭಿನ್ನಾಭಿಪ್ರಾಯವಿತ್ತು: ಯುಪಿಎ ಸರಕಾರ 2012ರಲ್ಲಿ ಒಪ್ಪಂದ ಕುರಿತಂತೆ ಮಾತುಕತೆ ಆರಂಭಿಸಿದಾಗ ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್‌ ಹಾಗೂ ಭಾರತದ ಎಚ್‌ಎಎಲ್‌ ಮಧ್ಯೆ ಯುದ್ಧವಿಮಾನ ತಯಾರಿಕೆ ಕುರಿತಂತೆ ಗಂಭೀರ ಭಿನ್ನಾಭಿಪ್ರಾಯಗಳಿದ್ದವು ಎಂದು ಮೂಲಗಳು ತಿಳಿಸಿವೆ. 18 ರಫೇಲ್‌ ಜೆಟ್‌ಗಳನ್ನು ಸಿದ್ಧ ಮಾದರಿಯಲ್ಲಿ ರವಾನಿಸಿ, ಉಳಿದ 108 ವಿಮಾನಗಳನ್ನು ಭಾರತದಲ್ಲಿ ಎಚ್‌ಎಎಲ್‌ ಅಭಿವೃದ್ಧಿಪಡಿಸುವುದು ಒಪ್ಪಂದವಾಗಿತ್ತು. ಆದರೆ ಇದು ಅಂತಿಮಗೊಂಡಿರಲಿಲ್ಲ.

ರಾಹುಲ್‌ “ವಿದೂಷಕ ರಾಜಕುಮಾರ’: ಜೇಟ್ಲಿ
ರಫೇಲ್‌ ಡೀಲ್‌ ಹಾಗೂ ಎನ್‌ಪಿಎ ಬಗ್ಗೆ ರಾಹುಲ್‌ ಗಾಂಧಿ ಸುಳ್ಳು ಹೇಳುತ್ತಲೇ ಇದ್ದಾರೆ. ವಾಸ್ತವಾಂಶ ಮರೆಮಾಚುವವರು ಸಾರ್ವಜನಿಕ ಜೀವನದಲ್ಲಿರಲು ಅರ್ಹರಲ್ಲ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ರಾಹುಲ್‌ರನ್ನು “ವಿದೂಷಕ ರಾಜಕುಮಾರ’ ಎಂದು ಬಣ್ಣಿಸಿರುವ ಜೇಟ್ಲಿ, ಸಾರ್ವಜನಿಕ ಜೀವನ ಎಂಬುದು ಗಂಭೀರ ಸಂಗತಿ. ಇದು ಹಾಸ್ಯ ಕಾರ್ಯಕ್ರಮವಲ್ಲ. ಒಂದು ಅಪ್ಪುಗೆ, ಕಣ್ಸನ್ನೆ ಹಾಗೂ ಪದೇ ಪದೆ ಸುಳ್ಳು ಹೇಳಿದರೆ ಸಾಲದು. ಯುವರಾಜನ ಸುಳ್ಳು ಹೇಳುವಿಕೆಯಿಂದಾಗಿ ಪ್ರಜಾಪ್ರಭುತ್ವ ಹಾನಿಯಾಗುವುದಕ್ಕೆ ಅವಕಾಶ ನೀಡಬೇಕೇ ಎಂಬ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next