Advertisement

ಎಚ್‌ಡಿಕೆ, ದೇವೇಗೌಡಜತೆ ಜಮೀರ್‌ ದೋಸ್ತಿ!

02:55 PM May 18, 2018 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಮತ ಹಾಕಿ ಜೆಡಿಎಸ್‌ನಿಂದ ಅಮಾನತುಗೊಂಡ ನಂತರ ಪರಸ್ಪರ ವಾಗ್ಧಾಳಿ ಮೂಲಕ ರಾಜಕೀಯವಾಗಿ ಸಮರ ಸಾರಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜಮೀರ್‌ ಅಹಮದ್‌ ಇದೀಗ ಮತ್ತೆ ಒಂದಾಗಿದ್ದಾರೆ.

Advertisement

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಂತರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಜಮೀರ್‌ ಅಹಮದ್‌ ನಡುವಿನ ದ್ವೇಷ
ಕಳೆದು ಮತ್ತೆ ಸ್ನೇಹ ಚಿಗುರಿದೆ. ಬುಧವಾರ ರಾತ್ರಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಎಂಟು ತಿಂಗಳ ನಂತರ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಜಮೀರ್‌ ಅಹಮದ್‌ ಉಭಯ ಕುಶಲೋಪರಿ ನಡೆಸಿದರು. ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಶಾಸಕರು ತಂಗಿದ್ದ ರೆಸಾರ್ಟ್‌ಗೆ ಕುಮಾರಸ್ವಾಮಿ ತೆರಳಿದ ವೇಳೆ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಜಮೀರ್‌ ಅಹಮದ್‌ ಅವರನ್ನು ಭೇಟಿಯಾದ ಕುಮಾರಸ್ವಾಮಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು.

ಸರ್ಕಾರ ರಚನೆಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‌ ಅಹಮದ್‌, ಕುಮಾರಸ್ವಾಮಿ ಅವರನ್ನು ಭೇಟಿಯಾಗದೆ ತಿಂಗಳುಗಳು ಆಗಿತ್ತು. ಸುದೀರ್ಘ‌ ಅವಧಿಯ ನಂತರ ಇಬ್ಬರೂ ಮಾತುಕತೆ ನಡೆಸಿದ್ದೇವೆ ಎಂದರು. 

ದೇವೇಗೌಡ, ಜಮೀರ್‌ ಮುಖಾಮುಖೀ: ಇದರ ಬೆನ್ನಲ್ಲೇ ಗುರುವಾರ ವಿಧಾನಸೌಧದ ಎದುರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕೂಡ ಅಲ್ಲಿ ಆಗಮಿಸಿದ್ದರು. ಕಾಂಗ್ರೆಸ್‌ ಶಾಸಕರು ಮತ್ತು ಮುಖಂಡರೊಂದಿಗೆ ದೇವೇಗೌಡರು ಚರ್ಚಿಸುತ್ತಿದ್ದ ವೇಳೆ ಜಮೀರ್‌ ಅಹಮದ್‌ ಪಕ್ಕದಲ್ಲೇ ನಿಂತಿದ್ದರು. ಜಮೀರ್‌ ಹೆಗಲ ಮೇಲೆ ಕೈ ಇಟ್ಟು ದೇವೇಗೌಡರು ಮಾತನಾಡುತ್ತಿದ್ದರು. ನಂತರ ಜಮೀರ್‌ ಭುಜ ತಟ್ಟಿದ ದೇವೇಗೌಡರು ಅಲ್ಲಿಂದ ಮುಂದೆ ಸಾಗಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next