ಹುಣಸೂರು: ತಾಲೂಕಿನ ಕೆಲವೆಡೆಗಳಲ್ಲಿ ಗುರುವಾರ ರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಬಿದ್ದ ಆಲಿಕಲ್ಲು ಮಳೆಗೆ ತಾಲೂಕಿನ ಗಾವಡಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಮೋದೂರು, ಹಿರಿಕ್ಯಾತನಹಳ್ಳಿ, ಚಿಟ್ಟಕ್ಯಾತನಹಳ್ಳಿಯಲ್ಲಿ 30ಕ್ಕೂ ಹೆಚ್ಚು ಮನೆಗಳ ಚಾವಣೆ ಹಾರಿಹೋಗಿದೆ. ಜಮೀನನಲ್ಲಿದ್ದ ಮರಗಳು ಧರೆಗುರುಳಿದ್ದು, ತಂಬಾಕು ಸಸಿ ಮಡಿಗಳು ನಾಶವಾಗಿವೆ. ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಮೋದೂರು ಗ್ರಾಪಂ ವ್ಯಾಪ್ತಿಯ ಮೋದೂರು ಎಂ.ಕೊಪ್ಪಲು ಗ್ರಾಮದಲ್ಲಿ ಮಳೆ ಮತ್ತು ಬಿರುಗಾಳಿಯ ಅನಾಹುತಕ್ಕೆ 25ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಮನೆಗಳ ಚಾವಣಿಯ ಕಲಾ°ರ್ ಶೀಟ್‌ಗಳು-ಹೆಂಚು ಬಿರುಗಾಳಿಯ ರಭಸಕ್ಕೆ ಹಾರಿಹೋಗಿವೆ. ಇನ್ನು ಕೆಲವು ಮನೆಗಳ ಹೆಂಚುಗಳು ಪುಡಿಪುಡಿಯಾಗಿ ಬಿದ್ದಿವೆ. ಮರೀಗೌಡರ ಮನೆ ಸಂಪೂರ್ಣ ಕುಸಿದಿದ್ದು, ಸೂರಿಲ್ಲದೆ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ.
ಎಲ್ಲೆಲ್ಲಿ ಹಾನಿ: ಮೋದೂರು ಎಂ.ಕೊಪ್ಪಲು ಗ್ರಾಮದ ಕೃಷ್ಣಾಚಾರಿ, ಲೋಕೇಶ್, ರಾಮಕೃಷ್ಣ, ಕರೀಗೌಡ, ಶೇಖರ್, ಕಾಳಮ್ಮ, ಸಣ್ಣರಾಮೇಗೌಡ, ರಾಜೇಗೌಡ, ರವಿಕುಮಾರ್, ಮರೀಗೌಡ, ಬೋರೇಗೌಡ, ಬೀಡೀಗೌಡ, ಎಸ್.ಸ್ವಾಮಿ, ನಿಂಗೇಗೌಡ, ಹಾಳೇಗೌಡರ ಮನೆಗಳು ಜಖಂಗೊಂಡಿದ್ದರೆ, ಶಂಷಾದ್ ಅವರ ಮನೆಯ ಗೋಡೆ ಕುಸಿದಿದೆ.
ಹಿರೀಕ್ಯಾತನಹಳ್ಳಿಯ ಚಿಕ್ಕಮ್ಮನವರ ಮನೆ, ಚಿಟ್ಟಕ್ಯಾತನಹಳ್ಳಿಯಲ್ಲಿ ಯಶೋದಾ ಮತ್ತು ಮಂಜುಳಾರ ಮನೆಗಳು ಹಾನಿಗೀಡಾಗಿದ್ದು, ಮಂಜುಳಾರ ಮನೆ ಗೋಡೆ ನೆಲಕ್ಕಚ್ಚಿದೆ. ಮರೂರಿನ ತಗಾಯಮ್ಮನವರ ಮನೆ ಹೆಚ್ಚು ಹಾನಿಗೊಳಗಾಗಿದೆ. ಗ್ರಾಮದ ಜಮೀನಿನಲ್ಲಿ ಹಾಗೂ ಮನೆಗಳ ಬಳಿ ಹಾಕಿಕೊಂಡಿದ್ದ ನುಗ್ಗೇಮರ, ಚಾಲಿಮರ, ಬಿಳಿಜಾಲಮರ, ಹುಣಸೆ, ಹಲಸಿನ ಮರಗಳು ನೆಲಕ್ಕಚ್ಚಿವೆ. ತಂಬಾಕು ಸಸಿಮಡಿಗಳು ಮರಬಿದ್ದ ಪರಿಣಾಮ ಸಂಪೂರ್ಣ ನಾಶವಾಗಿದೆ.
ಅಧಿಕಾರಿಗಳ ಭೇಟಿ: ಹಾನಿಗೀಡಾದ ಪ್ರದೇಶಗಳಿಗೆ ಗ್ರಾಮಲೆಕ್ಕಾಧಿಕಾರಿಗಳಾದ ಪಯೋನಿ, ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಜರ್ ನಡೆಸಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಚಾವಣಿ ಹಾರಿ ಹೋಗಿ ನಿರಾಶ್ರಿತರಾಗಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು, ಸೂಕ್ತ ಪರಿಹಾರ ನೀಡುವಂತೆ ನೊಂದ ಕುಟುಂಬಗಳು ಮನವಿ ಮಾಡಿದ್ದಾರೆ.