ಗದಗ: ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಕಾವು ಪಡೆಯುತ್ತಿವೆ. ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದು, ಆಕಾಂಕ್ಷಿಗಳ ವೈಯಕ್ತಿಕ ವರ್ಚಸ್ಸು ವೃದ್ಧಿಸಿ ಕೊಳ್ಳುವ ಕಾರ್ಯ ಗುಪ್ತಗಾಮಿನಿಯಾಗಿದೆ.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಕಾಂಗ್ರೆಸ್, ಇನ್ನುಳಿದ ಮೂರೂ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಶಾಸಕರು ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿಯುವ ಸಾಧ್ಯತೆಗಳೇ ಹೆಚ್ಚಿದ್ದು, ಪರಾಜಿತ ಪಕ್ಷದಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ ದೊಡ್ಡಾಗಿದೆ.
ಶಿರಹಟ್ಟಿಯಲ್ಲೇ ಹೆಚ್ಚಿನ ಆಕಾಂಕ್ಷಿಗಳು: ಶಿರಹಟ್ಟಿ ವಿಧಾನಸಭಾ ಕ್ಷೇತ್ರ (ಎಸ್‌ಟಿಗೆ ಮೀಸಲು)ದಲ್ಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಪ್ರತಿನಿಧಿ ಸುತ್ತಿದ್ದಾರೆ. ಆದರೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಸದ್ಯಕ್ಕೆ ಬಿಜೆಪಿಯಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿ, ಪ್ರಮುಖರಾದ ಡಾ| ಚಂದ್ರು ಲಮಾಣಿ ಹಾಗೂ ಉದ್ಯಮಿ ಭೀಮಸಿಂಗ್ ರಾಠೊಡ್ ಹೆಸರುಗಳು ಪ್ರಮುಖವಾಗಿವೆ. ಈ ಪೈಕಿ ಶಾಸಕ ರಾಮಣ್ಣ ಲಮಾಣಿ ಸರಕಾರದ ಕಾರ್ಯಗಳ ಮೂಲಕ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದರೆ ಡಾ| ಚಂದ್ರು ಲಮಾಣಿ ವೈದ್ಯ ಕೀಯ ಸೇವೆ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಾರ್ವಜನಿಕರನ್ನು ತಲುಪುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಜತೆ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಅವರೊಂದಿಗೆ ಸಾಮಾಜಿಕ ಕಾರ್ಯಕರ್ತರು, ಕ್ರಷರ್ ಉದ್ಯಮಿಗಳು ಜೆಡಿಎಸ್ ಹಾಗೂ ಮತ್ತಿತರೆ ಪಕ್ಷಗಳಿಂದ ಕಣಕ್ಕಿಳಿಯುವ ಚಿಂತನೆ ನಡೆಸಿದವರ ಸಂಖ್ಯೆಯೂ ಕಡಿಮೆ ಇಲ್ಲ. ಈ ಪೈಕಿ ಹಾಲಿ ಶಾಸಕ ರಾಮಣ್ಣ ಲಮಾಣಿ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ| ಚಂದ್ರ ಲಮಾಣಿ ನಡುವೆ ಶೀತಲ ಸಮರ ನಡೆದಿದೆ ಎನ್ನಲಾಗುತ್ತಿದೆಯಾದರೂ ಪಕ್ಷದ ವೇದಿಕೆಗಳಲ್ಲಿ ಅದು ವ್ಯಕ್ತವಾಗಿಲ್ಲ.
ಗದಗ ಗದ್ದುಗೆಗೆ ಮತ್ತೆ ಕಾದಾಟ: ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆಯಾಗಿರುವ ಗದಗ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾದಾಟ ನಿಶ್ಚಿತವಾಗಿದೆ. ಕಾಂಗ್ರೆಸ್‌ಗೆ ಪ್ರತಿಷ್ಠೆಯಾದರೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಅಲ್ಲದೇ ಕಳೆದ ಚುನಾವಣೆಯಲ್ಲಿ 1800 ಮತಗಳ ಅಂತರದಿಂದ ಪರಾಜಿತ ಬಿಜೆಪಿಗೆ ಈಗ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಎಚ್‌ಕೆ ಹಣಿಯಲು ರಣತಂತ್ರ ರೂಪಿಸುತ್ತಿದೆ. ಈ ಬಾರಿ ಕಾಂಗ್ರೆಸ್‌ನಿಂದ ಮತ್ತೆ ಶಾಸಕ ಎಚ್.ಕೆ.ಪಾಟೀಲ ಅಖಾಡಕ್ಕಿಳಿಯಲಿದ್ದು, ಬಿಜೆಪಿಯಲ್ಲಿ ಪರಾಜಿತ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ, ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ರಾಜು ಕುರಡಗಿ ಹಾಗೂ ವಿಜಯಕುಮಾರ್ ಗಡ್ಡಿ ಹೆಸರುಗಳು ಚಾಲ್ತಿಯಲ್ಲಿವೆ. ಆದರೆ ಪಕ್ಷದ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಈ ಬಾರಿ ಅನಿಲ್ ಕಣದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರರಾಗಿ ಕಣಕ್ಕಿಳಿಯುವ ಪ್ರಬಲ ಅಭ್ಯರ್ಥಿಗಳು ಯಾರು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಹಳಬರ ಸಮರ-ಹೊಸಬರ ಕನಸು : ರೋಣ ಕ್ಷೇತ್ರದಲ್ಲೂ ಬಿಜೆಪಿ-ಕಾಂಗ್ರೆಸ್ ಪ್ರಬಲ ಪೈಪೋಟಿಯಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿ ವಿರುದ್ಧ ಮಾಜಿ ಶಾಸಕ ಜಿ.ಎಸ್.ಪಾಟೀಲ ಸಮರ ಸಾರಲಿದ್ದಾರೆ. ಅದರೊಂದಿಗೆ ಹೊಸಬರೂ ವಿಜಯ ಪತಾಕೆ ಹಾರಿಸುವ ಕನಸು ಹೊಂದಿದ್ದಾರೆ. ಜೆಡಿಎಸ್‌ನಿಂದ ಮುಕ್ತಿಂ ಸಾಬ್ ಹಾಗೂ ರವೀಂದ್ರನಾಥ ದೊಡ್ಡಮೇಟಿ, ಬಿಎಸ್ಪಿ ವೀರಪ್ಪ ತೆಗ್ಗಿನಮನಿ ಪ್ರಬಲ ಆಕಾಂಕ್ಷಿಗಳಾಗಿದ್ದು, ಇದೇ ಮೊದಲ ಬಾರಿಗೆ ಚುನಾವಣ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಸಿ.ಸಿ.ಪಾಟೀಲ ವಿರುದ್ಧ ಕೊಳ್ಳಿ?: ಬಂಡಾಯದ ನೆಲ ನರಗುಂದ ಕ್ಷೇತ್ರದಲ್ಲಿ ಬಿಜೆಪಿಯಿಂದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಏಕಮಾತ್ರ ಹೆಸರಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಆರ್.ಯಾವಗಲ್ ಅವರೊಂದಿಗೆ ಡಾ| ಸಂಗ ಮೇಶ ಕೊಳ್ಳಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಪಕ್ಷದಲ್ಲಿ ಭಿನ್ನಮತ ಕಂಡುಬಂದಿಲ್ಲ. ಚುನಾವಣ ಟಿಕೆಟ್‌ಗಾಗಿ ಕ್ಷೇತ್ರ, ಪಕ್ಷಗಳ ಬದಲಾವಣೆ ಮಾಡುವ ಬಗ್ಗೆ ಯಾವುದೇ ನಾಯಕರು ಸುಳಿವು ನೀಡಿಲ್ಲ.
– ವೀರೇಂದ್ರ ನಾಗಲದಿನ್ನಿ