Advertisement

ಉನ್ನತ ಶಿಕ್ಷಣ..ಇದು ಶ್ರೀಮಂತರು, ರಾಜಕಾರಣಿಗಳು ದುಡ್ಡು ಸಂಗ್ರಹ ಮಾಡುವ ಹುಂಡಿ : HDK ಕಿಡಿ

06:00 PM Mar 21, 2022 | Team Udayavani |

ಬೆಂಗಳೂರು : ರಾಜಕಾರಣಿಗಳು, ಶ್ರೀಮಂತರಿಗೆ ಉನ್ನತ ಶಿಕ್ಷಣವು ದುಡ್ಡು ಸಂಗ್ರಹ ಮಾಡುವ ಹುಂಡಿಯಾಗಿದೆ… ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Advertisement

ಉಕ್ರೈನ್ ನಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ ನವೀನ್ ನ ಮೃತ ದೇಹ ಇಂದು ಭಾರತಕ್ಕೆ ಬಂದಿದ್ದು ಈ ಕುರಿತು ಟ್ವೀಟ್ ಮಾಡಿ ಸರಕಾರದ ವಿರುದ್ಧ ಕಿಡಿಕಾರಿದ ಅವರು,  ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಒತ್ತೆ ಇಟ್ಟ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಸಗಿದ ಪಾಪಕ್ಕೆ ಮುಗ್ಧ ವಿದ್ಯಾರ್ಥಿ ನವೀನ್ ಬಲಿ ಆಗಿದ್ದಾನೆ ಎಂದರು.

ದೂರದ ಉಕ್ರೇನ್ ದೇಶದಲ್ಲಿ ಜೀವ ಚೆಲ್ಲಿ ಹುಟ್ಟಿದೂರಿನಲ್ಲಿ ನಿಶ್ಚಲವಾಗಿ ಮಲಗಿದ್ದ ನವೀನ್ ಭಾರತದ ಆತ್ಮಸಾಕ್ಷಿಗೆ ಎದುರಾಗಿರುವ ದೊಡ್ಡ ಪ್ರಶ್ನೆ. ವಿದ್ಯೆ ಹೆಸರಿನಲ್ಲಿ ದಂಧೆ ನಡೆಸುವ ದುರಾಸೆಗೂ ಒಂದು ಸವಾಲು. ಹಾಗಾದರೆ, ಇನ್ನೆಷ್ಟು ನವೀನರು ಬಲಿಯಾಗಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

ಖಾಸಗಿ ಕಾಲೇಜುಗಳಲ್ಲಿ ವೈದ್ಯ ಶಿಕ್ಷಣ ದುಬಾರಿ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಹಾಗಾದರೆ, ಅಂಥ ಕಾಲೇಜುಗಳಿಗೆ ಶಕ್ತಿ ತುಂಬುತ್ತಿರುವುದು ಏಕೆ! ಸರಕಾರಿ ವೈದ್ಯ ಕಾಲೇಜುಗಳಲ್ಲಿ ಕನ್ನಡದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಟ್ಯೂಷನ್ ಅಂಗಡಿಗಳಿಗೆ ಲಕ್ಷ ಲಕ್ಷ ಕಟ್ಟುವುದು ಬಡ, ಮಧ್ಯಮ ವರ್ಗದ ಮಕ್ಕಳಿಗೆ ಸಾಧ್ಯವಿಲ್ಲ.

ಇದನ್ನೂ ಓದಿ : ಅಮೇರಿಕಾದ ಟೆಕ್ಸಾಸ್‍ನಲ್ಲಿ ಗೋವಾ ಮೂಲದ ಯುವಕನ ಗುಂಡಿಕ್ಕಿ ಹತ್ಯೆ

Advertisement

ಮೂತಿಗೆ ತುಪ್ಪ ಸವರುವಂತೆ ವೈದ್ಯ ಶಿಕ್ಷಣದ ಶುಲ್ಕವನ್ನು ಅಲ್ಪಸ್ವಲ್ಪ ಕಡಿಮೆ ಮಾಡಿ ಸದ್ಯಕ್ಕೆ ಪಾರಾಗುವುದಲ್ಲ. ಉಕ್ರೇನ್ ಮತ್ತು ನವೀನ್ ಸಾವಿನಿಂದ ಪಾಠ ಕಲಿತು ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ನೀಟ್ ನಿಂದ ಹೊರಬರಲು ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಗುಡುಗಿದರು.

ನೀಟ್ ಮೂಲಕ ವೈದ್ಯಕೀಯ ಸೀಟು ಸಿಗದೇ ಉಕ್ರೇನ್ ಗೆ ಹೋಗಿ ಉಸಿರು ಚೆಲ್ಲಿದ ನವೀನ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀಟ್ ವ್ಯವಸ್ಥೆಗೆ ಚರಮಗೀತೆ ಹಾಡಬೇಕು.

ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ಕರುಣಿಸಲಿ. ಪುತ್ರನ ಪಾರ್ಥೀವ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿ ಅವರ ಫೋಷಕರು ಸಾರ್ಥಕತೆ ಮೆರೆದಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿ ಆಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next