ಮೈಸೂರು: ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡುವ ಬಿಜೆಪಿ- ಕಾಂಗ್ರೆಸ್ ಪಕ್ಷದವರು ಇದಕ್ಕೆ ಕಾನೂನು ಜಾರಿ ಮಾಡಲಿ. ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದ ಎಷ್ಟು ಜನ ರಾಜಕಾರಣಕ್ಕೆ ಬರಬೇಕು ಎಂಬ ನಿಯಮ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೆಡಿಎಸ್ ಅಲ್ಲ ಜೆಡಿಎಫ್ ಪಕ್ಷ ” ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
“ಇವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮಗ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮಗ ಅಕಾಲಿಕ ಮರಣಕ್ಕೀಡಾದರು. ಅವರು ಸಹ ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯ -ರಾಷ್ಟ್ರಕಾರಣದಲ್ಲಿ ಹಲವರು ಈ ರೀತಿ ಇದ್ದಾರೆ” ಎಂದು ಎಚ್ ಡಿಕೆ ತಿರುಗೇಟು ನೀಡಿದರು.
ಇದನ್ನೂ ಓದಿ:ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅಧಿಕಾರಿಗಳ ತಡೆ ಖಂಡಿಸಿ ಕತ್ತು ಕೊಯ್ದುಕೊಂಡ ಯುವಕ!
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ತಮ್ಮ ಬಾಯಿಗೆ ಯಾಕೆ ಶ್ರಮ ಕೊಡುತ್ತಿದ್ದಾರೆ. ಈ ರೀತಿಯ ಒಂದು ಸ್ಲೇಟ್ ಕುತ್ತಿಗೆಗೆ ಹಾಕಿಕೊಂಡು ಓಡಾಡಲಿ. ಸುಮ್ಮನೆ ಪದೇ ಪದೇ ಈ ರೀತಿ ಹೇಳಿ ಬಾಯಿ ಏಕೆ ನೋಯಿಸಿಕೊಳ್ಳಬೇಕು. 2018ರಿಂದ ಇದೇ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗಲಿದೆ ಎಂದು ಛೇಡಿಸಿದರು.