ವಾಷಿಂಗ್ಟನ್ : ಅಮೆರಿಕದ ವಾಣಿಜ್ಯ ಸಚಿವ ವಿಲ್‌ಬುರ್ ರಾಸ್ ಅವರೊಂಗಿನ ಮಾತುಕತೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಎಚ್1ಬಿ ವೀಸಾ ವಿಷಯವನ್ನು ಪ್ರಬಲವಾಗಿ ಪ್ರಸ್ತಾವಿಸಿದ್ದಾರೆ. ಅಮೆರಿಕದ ಸರ್ವತೋಮುಖ ಬೆಳವಣಿಗೆಯಲ್ಲಿ ಅತ್ಯಂತ ಕೌಶಲದ ಭಾರತೀಯ ವೃತ್ತಿಪರರು ವಹಿಸಿರುವ ಮಹತ್ವಪೂರ್ಣ ಪಾತ್ರವನ್ನು ಜೇಟ್ಲಿ ವಿಶೇಷವಾಗಿ ಪ್ರಸ್ತಾವಿಸಿದ್ದಾರೆ.
ಟ್ರಂಪ್ ಆಡಳಿತೆಯಲ್ಲಿ ಇದೇ ಮೊದಲ ಬಾರಿಗೆ ಕ್ಯಾಬಿನೆಟ್ ಮಟ್ಟದ ಮಾತುಕತೆ, ಸಂವಾದ, ಸಂವಹನ ಏರ್ಪಟ್ಟಿದ್ದು ಸಚಿವ ರಾಸ್ ಅವರು “ಅಮೆರಿಕವು ಎಚ್1ಬಿ ವೀಸಾ ಪರಾಮರ್ಶೆಯ ಪ್ರಕ್ರಿಯೆ ಕೈಗೊಂಡಿದ್ದು ಈ ತನಕ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.
“ಭಾರತೀಯ ಕೌಶಲಯುಕ್ತ ವೃತ್ತಿಪರರು ಅಮೆರಿಕ ಮತ್ತು ಭಾರತದ ಆರ್ಥಿಕಾಭಿವೃದ್ಧಿಗೆ ವಿಶೇಷವಾದ ಕೊಡುಗೆ ನೀಡಿದ್ದು ಆ ಕೆಲಸವನ್ನು ಅವರು ಇನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗಲಿದ್ದಾರೆ; ಆದುದರಿಂದ ಅಮೆರಿಕವು ತನ್ನ ಸಂದರ್ಭದಲ್ಲಿ ಭಾರತೀಯ ಉನ್ನತ ಕೌಶಲದ ವೃತ್ತಿಪರರ ಮಹತ್ವವನ್ನು ಅರಿತಿರುವುದು ಅಗತ್ಯ; ಅದರಿಂದ ಎರಡೂ ದೇಶಗಳಿಗೆ ಲಾಭವಾಗಲಿದೆ’ ಎಂದು ಜೇಟ್ಲಿ ಅವರು ಅಮೆರಿಕದ ವಾಣಿಜ್ಯ ಸಚಿವ ರಾಸ್ ಅವರಿಗೆ ಮನದಟ್ಟು ಮಾಡಿದರು.
“ಎಚ್1ಬಿ ವೀಸಾ ಪರಾಮರ್ಶೆ ಪ್ರಕ್ರಿಯೆಯ ಫಲಿತಾಂಶ ಏನೇ ಆದರೂ ಅಮೆರಿಕ, ಭಾರತದ ಮಟ್ಟಿಗೆ ಪ್ರತಿಭೆಗೆ ಆದ್ಯತೆ ನೀಡಿ ತನ್ನ ವಲಸೆ ನೀತಿಯನ್ನು ಪುನಾರೂಪಿಸಲಿದೆ; ಅದರಿಂದಾಗಿ ಭಾರತದ ಉನ್ನತ ಕೌಶಲದ ವೃತ್ತಿಪರರಿಗೆ ಆದ್ಯತೆ ಸಿಗಲಿದೆ’ ಎಂದು ಸಚಿವ ರಾಸ್ ಅವರು ಜೇತ್ಲಿ ಅವರಿಗೆ ಹೇಳಿರುವುದಾಗಿ ಅಮೆರಿಕನ್ ಅಧಿಕಾರಿಗಳು ತಿಳಿಸಿದ್ದಾರೆ.