ಕೈಕಂಬ: ಸದಾ ಜನಸಂದಣಿಯಿಂದ ಕೂಡಿದ್ದ ಗುರುಪುರ ನಾಡಕಚೇರಿ ಚುನಾವಣಾ ದಿನ ನಿಗದಿಯಾದಂತೆ ಜನದಟ್ಟಣೆ ಕಡಿಮೆಯಾಗಿದೆ. ಬಹುತೇಕ ಎಲ್ಲ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದು, ಇದರಿಂದ ಯಾವುದೇ ಕಾರ್ಯ ಸಾಧ್ಯವಿಲ್ಲ ಎಂದು ಜನರು ಅರ್ಥೈಸಿರುವ ಕಾರಣ ನಾಡಕಚೇರಿ ಈಗ ಜನ ನಿಬಿಡವಾಗಿದೆ.
ಆಧಾರ್ ಕಾರ್ಡ್ ನೋಂದಣಿ ಕಾರ್ಯ ಪ್ರಗತಿಯಲ್ಲಿರುವ ಕಾರಣ ಜನರು ಅದಕ್ಕೋಸ್ಕರ ಕಾದು ಕುಳಿತುಕೊಳ್ಳುವ ದೃಶ್ಯ ಮಾತ್ರ ಕಾಣುತ್ತಿದೆ. ಗ್ರಾಮ ಕರಣಿಕರು ಹೆಚ್ಚಿನ ದಿನ ಚುನಾವಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು. ನಾಡಕಚೇರಿಯಲ್ಲಿಯೂ ಕೆಲವೊಮ್ಮ ಜನರ ಅವಶ್ಯಕ್ಕೆ ಸ್ಪಂದನೆ ನೀಡಲು ಬರುತ್ತಿದ್ದಾರೆ.
ಅಂತ್ಯ ಸಂಸ್ಕಾರ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಆದರ್ಶ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಯಡಿ ಅರ್ಜಿಯನ್ನು ಸ್ವೀಕರಿಸಬಹುದಾಗಿದೆ. ಈ ಬಗ್ಗೆ ಎಲ್ಲ ನಾಡಕಚೇರಿಗಳ ಉಪ ತಹಶೀಲ್ದಾರರಿಗೆ ನಿರ್ದೇಶಿಸಲಾಗಿದೆ.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಹೆಚ್ಚು ಜನರು ಗ್ರಾಮ ಕರಣಿಕರ ಸಂಪರ್ಕದಲ್ಲಿರಿಸಿಕೊಂಡು ನಾಡ ಕಚೇರಿಯಲ್ಲಿ ಈ ಬಗ್ಗೆ ಗ್ರಾಮ ಕರಣಿಕರಿಂದ ದೃಢೀಕರಣ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮಕರಣಿಕರು ಮತದಾನ ಕೇಂದ್ರದ ಬಗ್ಗೆಯೂ ಹೆಚ್ಚು ನಿಗಾವಹಿಸಿ ಅಲ್ಲಿನ ಸೌಕರ್ಯದ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ. ಚುನಾವಣಾಧಿಕಾರಿಯವರಿಗೆ ನೀತಿ ಸಂಹಿತೆ ಹಾಗೂ ಇನ್ನಿತರ ಬಗ್ಗೆ ದಿನವಾಹಿ ವರದಿ ಸಲ್ಲಿಸಬೇಕಾಗಿದೆ.
ಮಂಜೂರಾತಿ ಸಾಧ್ಯವಿಲ್ಲ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿ ಯೋಜನೆ, ಫಲಾನುಭವಿ ಆಧಾರಿತ ಯಾವುದೇ ಯೋಜನೆಗಳ ಮಂಜೂರಾತಿ ನೀಡಲು ಈಗ ಸಾಧ್ಯವಿಲ್ಲ. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಹೊಸದಾಗಿ ಯಾವುದೇ ಅರ್ಜಿಗಳನ್ನು ನಾಡಕಚೇರಿಗಳಲ್ಲಿ ಸ್ವೀಕರಿಸದಿರಲು ಹಾಗೂ ಮಂಜೂರಾತಿ ನೀಡದಂತೆ ತಿಳಿಸಲಾಗಿದೆ.