ನಿರ್ಮಾಪಕ ಕೆ.ಮಂಜು ಈಗ ಮತ್ತೂಂದು ಹುದ್ದೆಯನ್ನು ಅಲಂಕರಿಸಿದ್ದಾರೆ! ಅರೇ, ಅವರೇನಾದರೂ ನಿರ್ದೇಶಕರಾಗಿಬಿಟ್ರಾ ಎಂಬ ಪ್ರಶ್ನೆಗಳು ಎದುರಾಗುವುದುಂಟು. ಕೆ.ಮಂಜು ಈವರೆಗೆ ಸುಮಾರು 40 ಕ್ಕೂ ಹೆಚ್ಚು ಸಿನಿಮಾ ನಿರ್ಮಿಸಿದ್ದಾರೆ. ಕೆಲ ಸಿನಿಮಾಗಳ ವಿತರಣೆ ಮಾಡಿದ್ದಾರೆ. ಅಷ್ಟೇ ಯಾಕೆ, ಸ್ನೇಹಪೂರ್ವಕವಾಗಿ ಕ್ಯಾಮೆರಾ ಮುಂದೆ ನಿಂತು ನಟನೆಯನ್ನೂ ಮಾಡಿರುವುದುಂಟು. ಈಗ ಹೊಸ ವಿಷಯ ಏನಪ್ಪಾ ಅಂದರೆ, ಇಂತಿಪ್ಪ, ಕೆ.ಮಂಜು ನೃತ್ಯ ನಿರ್ದೇಶಕರೂ ಆಗಿದ್ದಾರೆ!!
ಹೀಗೆಂದರೆ, ಕೆಲವರಿಗೆ ನಗು ಬರೋದು ಸಹಜ. ಇನ್ನೂ ಕೆಲವರಿಗೆ ಸಣ್ಣದ್ದೊಂದು ಅನುಮಾನ ಮೂಡುವುದೂ ನಿಜ. ಆದರೆ, ಇದೆಲ್ಲಾ ಅಕ್ಷರಶಃ ನಿಜ. ಅಷ್ಟಕ್ಕೂ ಕೆ.ಮಂಜು ಡ್ಯಾನ್ಸ್ ಮಾಸ್ಟರ್ ಆಗಿದ್ದು ಅವರದೇ ನಿರ್ಮಾನದ “ಸ್ಮೈಲ್ ಪ್ಲೀಸ್’ ಚಿತ್ರಕ್ಕೆ. ಹೌದು, ರಘು ಸಮರ್ಥ್ ನಿರ್ದೇಶನದ “ಸ್ಮೈಲ್‌ಪ್ಲೀಸ್’ ಚಿತ್ರದ ಹಾಡೊಂದಕ್ಕೆ ಸ್ವತಃ ಕೆ.ಮಂಜು ಅವರೇ ನೃತ್ಯ ನಿರ್ದೇಶನ ಮಾಡಿದ್ದಾರಂತೆ. ಇದೊಂದೇ ಆಗಿದ್ದರೆ, ಕೆ.ಮಂಜು ಡ್ಯಾನ್ಸ್‌ಮಾಸ್ಟರ್ ಆಗಿದ್ದರ ಬಗ್ಗೆ ಇಷ್ಟೊಂದು ಹೇಳುವ ಅಗತ್ಯವೇ ಇರಲಿಲ್ಲ.
ಆ ಸಾಂಗ್‌ನಲ್ಲಿ ಹೀರೋ ಗುರುನಂದನ್ ಮತ್ತು ಹೀರೋಯಿನ್ ಕಾವ್ಯಾಶೆಟ್ಟಿ “ಲಿಪ್‌ಲಾಕ್’ ಮಾಡಿದ್ದಾರೆ. ಆ ಸಾಂಗ್‌ನಲ್ಲಿ ಎರಡೂರು ಸಲ ಕಾಣಿಸಿಕೊಳ್ಳುವ ಲಿಪ್‌ಲಾಕ್ ಸೀನ್ ಬಗ್ಗೆ ನೂತನ ಡ್ಯಾನ್ಸ್ ಮಾಸ್ಟರ್ ಕೆ.ಮಂಜು ಹೇಳ್ಳೋದೇನು ಗೊತ್ತಾ? “ಕಥೆಗೆ ಮತ್ತು ಆ ಸಂದರ್ಭಕ್ಕೆ ಅದು ಬೇಕಾಗಿತ್ತು. ಹಾಗಾಗಿ, ಲಿಪ್‌ಲಾಕ್ ಸೀನ್ ಇಡಲಾಗಿದೆ. ಮೊದಮೊದಲು ನಾಯಕಿ ಕಾವ್ಯಾ ಶೆಟ್ಟಿ ಅವರು ಇದು ಬೇಕಾ ಸಾರ್ ಅಂದಿದ್ದುಂಟು. ಆಗ ನಾನು, ಬಾಲಿವುಡ್‌ನಲ್ಲೆಲ್ಲಾ ಇದು ಕಾಮನ್, ಇಲ್ಲಿ ವಿನಾಕಾರಣ ಆ ಸೀನ್ ಇಲ್ಲ,
ಕಥೆ ಮತ್ತು ಸಂದರ್ಭಕ್ಕೆ ಪೂರಕವಾಗಿರುವುದರಿಂದ ಬೇಕಿದೆಯಷ್ಟೇ ಅಂತ ಹೇಳಿದ್ದುಂಟು. ಹೀರೋ ಕೆಲ ಸೀನ್‌ಗಳಲ್ಲಿ ಎರಡೆರೆಡು ಟೇಕ್ ತಗೋತ್ತಿದ್ದರು. ಆದರೆ, ಲಿಪ್‌ಲಾಕ್ ಸೀನ್‌ನ ಒಂದೇ ಟೇಕ್‌ನಲ್ಲಿ ಓಕೆ ಮಾಡಿಬಿಟ್ಟರು’ ಎಂದು ಹೇಳುವ ಮೂಲಕ ಜೋರು ನಗೆಯ ಅಲೆ ಎಬ್ಬಿಸುತ್ತಾರೆ ಕೆ.ಮಂಜು. ಅಷ್ಟಕ್ಕೂ ಆ ಲಿಪ್‌ಲಾಕ್ ಸೀನ್‌ಗೆ ಸ್ಫೂರ್ತಿ ರವಿಚಂದ್ರನ್. ಅವರು ದ್ರಾಕ್ಷಿ ಎಸೆಯುತ್ತಿದ್ದರು. ನಾವೀಗ 4ಜಿ ದಾಟಿ 5ಜಿನಲ್ಲಿರುವುದರಿಂದ ಲಿಪ್‌ಲಾಕ್ ಮಾಡಿಸಿದ್ದೇವೆ ಎಂದರು.