Advertisement

Gurumitkal: ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರ

07:32 PM Nov 04, 2023 | Team Udayavani |

ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಕಂದಾಯ ಇಲಾಖೆಯ ನಾಡಕಚೇರಿಗೆ ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ, ಅಲ್ಲಿನ ನಿರ್ಲಕ್ಷ್ಯತನ ಕಂಡು ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಕಚೇರಿ ಮುಂಭಾಗದಲ್ಲಿ ನೆರೆದಿದ್ದ ಹಲವಾರು ಗ್ರಾಮಗಳ ಸಾರ್ವಜನಿಕರೊಂದಿಗೆ ಮಾತನಾಡಿದ ಶಾಸಕರು ಅವರ ಸಮಸ್ಯೆಗಳನ್ನು ಆಲಿಸಿ, ಕಚೇರಿ ಪ್ರವೇಶಿಸಿ ಸಿಬಂದಿಗಳ ಹಾಜರಾತಿ ಪುಸ್ತಕವನ್ನು ಗಮನಿಸಿದರು.

ಈ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುವ ಸಿಬಂದಿಗಳು ಕಳೆದ 2-3 ದಿನಗಳಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿರುವುದನ್ನು ಗಮನಿಸಿದ ಶಾಸಕರು, ನಿಮಗೆ ಜವಾಬ್ದಾರಿ ಇದೆಯೇ, ಉಪ ತಹಶೀಲ್ದಾರ್ ಎಲ್ಲಿ ಎಂದು ಪ್ರಶ್ನಿಸಿದಾಗ, ಅಲ್ಲಿದ್ದ ಸಿಬಂದಿಗಳು ಹಾರಿಕೆಯ ಉತ್ತರವನ್ನು ನೀಡಿರುವುದನ್ನು ಗಮನಿಸಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ನಾಡ ಕಚೇರಿಯ ಸಿಬಂದಿಗಳ ನಿರ್ಲಕ್ಷ್ಯದಿಂದ ಹತ್ತಾರು ಗ್ರಾಮಗಳ ಜನರ ಸಮಸ್ಯೆಗಳು ಸಕಾಲಕ್ಕೆ ಪರಿಹಾರವಾಗುತ್ತಿಲ್ಲ ಎಂದು ದೂರಿ, ಕ್ರಮಕ್ಕೆ ಆಗ್ರಹಿಸಿದರು.

ದೂರದ ಗ್ರಾಮೀಣ ಭಾಗಗಳಿಂದ ಸಣ್ಣ ಪುಟ್ಟ ಕೆಲಸಗಳಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರ ಕೆಲಸಗಳನ್ನು ಸಕಾಲಕ್ಕೆ ಮಾಡಬೇಕು, ಇಲ್ಲದಿದ್ದರೇ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುತ್ತಿರುವ ಸಮಯದಲ್ಲಿ ಆಗಮಿಸಿದ ಕಚೇರಿ ಉಪ ತಹಶೀಲ್ದಾರ ಸೋಮನಾಥ ಅವರನ್ನು, ನೀವೂ ಕಚೇರಿಗೆ ಸರಿಯಾಗಿ ಬರುತ್ತಿಲ್ಲ, ಸಿಬಂದಿಗಳು ಹೇಗೆ ಸರಿಯಾಗಿ ಕೆಲಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಚೇರಿಯ ಅವ್ಯವಸ್ತೆ ಗಮನಿಸಿ, ಸರ್ಕಾರಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿ, ನಾನು ಅನುದಾನ ನೀಡುತ್ತೇನೆ ಎಂದು ತಿಳಿಸಿದರು.

ಈ ಸಮಯದಲ್ಲಿ ಉಪ ತಹಶೀಲ್ದಾರ್ ಸೋಮನಾಥ, ಕಂದಾಯ ನಿರೀಕ್ಷಕ ರಾಜಶೇಖರ ಪಾಟೀಲ್, ಮುಖಂಡ ರವಿ ಪಾಟೀಲ್ ಹತ್ತಿಕುಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next